ಸೈಬರ್ ಪೊಲೀಸರ ಮನವಿ!
ವಸೈ-ವಿರಾರ್ - ಮದುವೆಯ ಆಮಂತ್ರಣ ಪತ್ರಿಕೆ ಎಂದು ನಂಬಿಸಿ ನಾಗರಿಕರ ಮೊಬೈಲ್‌ಗೆ ಅಪಾಯಕಾರಿ ಫೈಲ್ (ಕಡತ) ಕಳುಹಿಸುವ ಮೂಲಕ ಬ್ಯಾಂಕಿನಲ್ಲಿರುವ ಹಣವನ್ನು ಕದಿಯಲಾಗುತ್ತಿದೆ. ವಸೈ-ವಿರಾರ್‌ನಲ್ಲಿ ಅನೇಕ ಪ್ರತಿಷ್ಠಿತ ರಾಜಕೀಯ ನಾಯಕರು ಮತ್ತು ಆಡಳಿತಾಧಿಕಾರಿಗಳ 'ವಾಟ್ಸಾಪ್' ಗೆ ಮದುವೆ ಆಮಂತ್ರಣ ಪತ್ರಿಕೆಯನ್ನು ಕಳುಹಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಇದರ ಮೂಲಕ ಮೊಬೈಲ್‌ನಲ್ಲಿರುವ ಮಾಹಿತಿಯನ್ನು ಕದಿಯುವ ಸಾಧ್ಯತೆಯಿದೆ. ಈ ಪ್ರಕರಣದಲ್ಲಿ ಸೈಬರ್ ಪೊಲೀಸರು ನಾಗರಿಕರಿಗೆ ಎಚ್ಚರದಿಂದಿರುವಂತೆ ಮನವಿ ಮಾಡಿದ್ದಾರೆ.
ಒಂದು ಸಂದೇಶದಲ್ಲಿ, ನಮ್ಮ ಮನೆಯಲ್ಲಿ ಜೂನ್ 7 ರಂದು ಮದುವೆ ಇದೆ. ದಯವಿಟ್ಟು ಕುಟುಂಬ ಸಮೇತರಾಗಿ ಹಾಜರಾಗಿ. ನಾನು ಮದುವೆಯ ಆಮಂತ್ರಣ ಪತ್ರಿಕೆಯನ್ನು ಕಳುಹಿಸಿದ್ದೇನೆ, ಅದು ಹೇಗಿದೆ ಎಂದು ನೋಡಿ ತಿಳಿಸಿ ಎಂದು ಹೇಳಲಾಗಿತ್ತು. ಈ ಸಂದೇಶದ ಜೊತೆಗೆ 'Invitation Card.apk' ಎಂಬ ಫೈಲ್ ಅನ್ನು ಲಗತ್ತಿಸಲಾಗಿರುತ್ತದೆ. ಆ ಫೈಲ್ ಅನ್ನು 'ಡೌನ್‌ಲೋಡ್' ಅಥವಾ 'ಇನ್‌ಸ್ಟಾಲ್' ಮಾಡಿದರೆ, ಮೊಬೈಲ್‌ನಲ್ಲಿರುವ ಬ್ಯಾಂಕ್ ಮಾಹಿತಿ, ಪಾಸ್‌ವರ್ಡ್, ಹಾಗೂ ವೈಯಕ್ತಿಕ ಮಾಹಿತಿಯು ಸೈಬರ್ ಕಳ್ಳರ ಕೈ ಸೇರಬಹುದು. ಆದ್ದರಿಂದ ಯಾವುದೇ ಅಪರಿಚಿತ ವ್ಯಕ್ತಿಯಿಂದ ಬಂದ ಇಂತಹ ಫೈಲ್‌ಗಳನ್ನು ಡೌನ್‌ಲೋಡ್ ಮಾಡಬಾರದು, ಹಾಗೆಯೇ ಮದುವೆಯ ಆಮಂತ್ರಣ ಪತ್ರಿಕೆ, ಫೋಟೋಗಳು ಅಥವಾ ವಿಡಿಯೋ ಹೆಸರಿನಲ್ಲಿ ಬಂದಿರುವ ಅನುಮಾನಾಸ್ಪದ ಫೈಲ್‌ಗಳನ್ನು ತೆರೆಯುವ ಮುನ್ನ ಅವುಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

