Thursday, 03 Dec, 9.18 am Star News ಕನ್ನಡ

Posts
ಪ್ಲೇಯಿಂಗ್‌ XIನಲ್ಲಿನ ಬದಲಾವಣೆಯಿಂದ ಸಿಕ್ಕ ಹೊಸತನವೇ ಗೆಲುವಿಗೆ ಕಾರಣ: ಕೊಹ್ಲಿ!

ಸತತ ಎರಡು ಪಂದ್ಯಗಳಲ್ಲಿ ಆತಿಥೇಯ ಆಸ್ಟ್ರೇಲಿಯಾ ಎದುರು ಸೋತು ಸುಣ್ಣವಾಗಿದ್ದ ಟೀಮ್‌ ಇಂಡಿಯಾ, ಕೊನೆಗೂ ತನ್ನ ಸಾಮರ್ಥ್ಯವನ್ನು ಒಗ್ಗೂಡಿಸಿ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯ ಅಂತಿಮ ಪಂದ್ಯದಲ್ಲಿ ಕಾಂಗರೂ ಪಡೆಗೆ 13 ರನ್‌ಗಳ ಸೋಲುಣಿಸಿದೆ.

ಈ ಮೂಲಕ ಡಿಸೆಂಬರ್‌ 4ರಂದು ಇಲ್ಲಿ ಮನುಕಾ ಓವಲ್ ಕ್ರೀಡಾಂಗಣದಲ್ಲೇ ಶುರುವಾಗಲಿರುವ ಮೂರು ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಸರಣಿಗೆ ವಿರಾಟ್‌ ಕೊಹ್ಲಿ ಬಳಗ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಟಿ20 ಸರಣಿಯ ಅಂತಿಮ ಎರಡು ಪಂದ್ಯಗಳು ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆಯಲಿವೆ.ಇನ್ನು ಮಾನ ಉಳಿಸಿಕೊಳ್ಳುವ ಸಲುವಾಗಿ ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್ಬೆರಾದ ಮನುಕಾ ಓವಲ್ ಕ್ರೀಡಾಂಗಣದಲ್ಲ ಬುಧವಾರ ಕಣಕ್ಕಿಳಿದಿದ್ದ ಟೀಮ್‌ ಇಂಡಿಯಾ, ಮೂರನೇ ಒಡಿಐಗೆ ಒಂದಲ್ಲಾ ಎರಡಲ್ಲ, ತನ್ನ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಬರೋಬ್ಬರಿ ನಾಲ್ಕು ಬದಲಾವಣೆಗಳನ್ನು ತಂದಿತ್ತು. ಈ ಮಹತ್ವದ ಬದಲಾವಣೆಯಿಂದಾಗಿ ಸಿಕ್ಕ ಹೊಸತನದಿಂದ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಯಿತು ಎಂದು ಪಂದ್ಯದ ಬಳಿಕ ಮಾತನಾಡಿದ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಹೇಳಿಕೊಂಡಿದ್ದಾರೆ.ವಿಶೇಷವೆಂದರೆ ಬದಲಾವಣೆ ತಂದ ಕಾರಣ ಆಡುವ ಅವಕಾಶ ಗಿಟ್ಟಿಸಿದ ಆಟಗಾರರೇ ಪಂದ್ಯದಲ್ಲೇ ಭಾರತ ತಂಡದ ಗೆಲುವಿನ ರೂವಾರಿಗಳೆನಿಸಿದರು.ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ 66 ಮತ್ತು 51 ರನ್‌ಗಳ ಅಂತರದಲ್ಲಿ ಆಸ್ಟ್ರೇಲಿಯಾ ಎದುರು ಮಂಡಿಯೂರಿದ್ದ ಟೀಮ್‌ ಇಂಡಿಯಾ, ಬುಧವಾರ ನಡೆದ ಹಣಾಹಣಿಯಲ್ಲಿ 13 ರನ್‌ಗಳ ಅಂತರದಲ್ಲಿ ಗೆಲುವಿನ ನಗೆ ಬೀರಿತು. ಈ ಸಲುವಾಗಿ ನವದೀಪ್‌ ಸೈನಿ, ಯುಜ್ವೇಂದ್ರ ಚಹಲ್, ಮಯಾಂಕ್‌ ಅಗರ್ವಾಲ್ ಮತ್ತು ಮೊಹಮ್ಮದ್ ಶಮಿ ಅವರನ್ನು ಕೈಬಿಟ್ಟು, ಶಾರ್ದುಲ್‌ ಠಾಕೂರ್‌, ಟಿ ನಟರಾಜನ್, ಕುಲ್ದೀಪ್ ಯಾದವ್ ಮತ್ತು ಶುಭಮನ್‌ ಗಿಲ್‌ ಅವರನ್ನು ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಆಡಿಲಸಾಗಿತ್ತು.ನಮ್ಮ ತಂಡ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಆತ್ಮವಿಶ್ವಾಸ ಆಟವಾಡಿತು. ಶುಭಮನ್‌ ಗಿಲ್ ಮತ್ತು ಉಳಿದ ಆಟಗಾರರು ಆಡುವ ಹನ್ನೊಂದರ ಬಳಗಕ್ಕೆ ಕಾಲಿಡುತ್ತಿದ್ದಂತೆಯೇ ತಂಡದಲ್ಲಿ ಹೊಸತನ ಸಿಕ್ಕಂತಾಗಿತ್ತು. ಸತತ ಸೋಲಿನಿಂದ ಕುಗ್ಗಿದ್ದ ತಂಡಕ್ಕೆ ಪುಟಿದೇಳಲು ಇಂಥದ್ದೊಂದು ಬದಲಾವಣೆಯ ಅಗತ್ಯವಿತ್ತು," ಎಂದು ಪಂದ್ಯದ ಬಳಿಕ ಮಾತನಾಡಿದ ವಿರಾಟ್‌ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಆಸೀಸ್‌ ವಿರುದ್ಧದ ಈ ಗೆಲುವಿನೊಂದಿಗೆ ಕೊಹ್ಲಿ ಬಳಗ ಏಕದಿನ ಕ್ರಿಕೆಟ್‌ನಲ್ಲಿ ತನ್ನ ಸತತ 5 ಪಂದ್ಯಗಳ ಸೋಲಿನ ಕೊಂಡಿಯನ್ನು ಕೊನೆಗೂ ಕಳಚಿದೆ.ಸತತ 9 ಪಂದ್ಯಗಳಲ್ಲಿ ಟಾಸ್‌ ಸೋತು ಕೊನೆಗೂ ನಾಣ್ಯದ ದಿಕ್ಕನ್ನು ಗುರುತಿಸುವಲ್ಲಿ ಯಶಸ್ವಿಯಾದ ವಿರಾಟ್‌ ಕೊಹ್ಲಿ, ಬುಧವಾರದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡುವ ನಿರ್ಧಾರ ಮಾಡಿದರು. ಅಮೋಘ ಆರಂಭ ಸಿಗದೇ ಇದ್ದರೂ ಕೂಡ ಇನಿಂಗ್ಸ್‌ ಅಂತ್ಯದಲ್ಲಿ ಹಾರ್ದಿಕ್‌ ಪಾಂಡ್ಯ (92*) ಮತ್ತು ರವೀಂದ್ರ ಜಡೇಜಾ (66*) ನಡುವಣ 6ನೇ ವಿಕೆಟ್‌ಗೆ ಮುರಿಯದ 167* ರನ್‌ಗಳ ಅದ್ಭುತ ಜೊಯಾಟದ ಬಲದಿಂದ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 302 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಇದಕ್ಕೂ ಮುನ್ನ ಕ್ಯಾಪ್ಟನ್‌ ಕೊಹ್ಲಿ ಕೂಡ 63 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದ್ದರು.ಬಳಿಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ನಾಯಕ ಆರೊನ್‌ ಫಿಂಚ್‌ (75) ಸ್ಫೋಟಕ ಆರಂಭ ಒದಗಿಸಿದರೂ ಕೂಡ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸಿಕ್ಕ ಆರಂಭದ ಲಾಭ ಪಡೆಯಲಾಗದೆ ವಿಕೆಟ್‌ ಕೈಚೆಲ್ಲಿದರ ಪರಿಣಾಮ 49.3 ಓವರ್‌ಗಳಲ್ಲಿ 289 ರನ್‌ಗಳಿಗೆ ಆಸ್ಟ್ರೇಲಿಯಾ ಆಲ್‌ಔಟ್‌ ಆಯಿತು. ಭಾರತದ ಪರ ಸಂಘಟಿತ ಬೌಲಿಂಗ್‌ ದಾಳಿ ನಡೆಸಿದ ಶಾರ್ದುಲ್‌ ಠಾಕೂರ್‌ (51ಕ್ಕೆ 3), ಟಿ ನಟರಾಜನ್‌ (70ಕ್ಕೆ 2), ಜಸ್‌ಪ್ರೀತ್‌ ಬುಮ್ರಾ (43ಕ್ಕೆ 2), ಕುಲ್ದೀಪ್‌ ಯಾದವ್‌ (57ಕ್ಕೆ 1), ರವೀಂದ್ರ ಜಡೇಜಾ (62ಕ್ಕೆ 1) ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Star News kannada
Top