Dailyhunt Logo
  • Light mode
    Follow system
    Dark mode
    • Play Story
    • App Story
ಭದ್ರಾ ಜಲಾಶಯ: ಮಲೆನಾಡಿನ ಮಳೆಯಿಂದ ಬಯಲುಸೀಮೆಯ ಹಸಿರಿನವರೆಗೆ. ಲಕ್ಷಾಂತರ ಜನರ ಬದುಕಿನ ಜಲನಾಡಿ!

ಭದ್ರಾ ಜಲಾಶಯ: ಮಲೆನಾಡಿನ ಮಳೆಯಿಂದ ಬಯಲುಸೀಮೆಯ ಹಸಿರಿನವರೆಗೆ. ಲಕ್ಷಾಂತರ ಜನರ ಬದುಕಿನ ಜಲನಾಡಿ!

ಸುದ್ದಿದಿನ,ಶಿವಮೊಗ್ಗ: ಭದ್ರಾ ಜಲಾಶಯ ಎಂದರೆ ಕೇವಲ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಅಣೆಕಟ್ಟಲ್ಲ. ಪಶ್ಚಿಮಘಟ್ಟದ ಮಳೆಯನ್ನು ಮಧ್ಯ ಕರ್ನಾಟಕದ ಬರಡು ಭೂಮಿಗೆ ಕೊಂಡೊಯ್ಯುವ ಜೀವನಾಡಿ. ಮಲೆನಾಡಿನ ನದಿಯಿಂದ ಆರಂಭವಾಗುವ ಭದ್ರೆಯ ಪಯಣವು ರೈತರ ಕೃಷಿ, ಜನರ ಕುಡಿಯುವ ನೀರು, ಸ್ಥಳೀಯ ಆರ್ಥಿಕತೆ, ವಿದ್ಯುತ್‌ ಉತ್ಪಾದನೆ ಹಾಗೂ ಪರಿಸರದೊಂದಿಗೆ ನೇರ ಸಂಬಂಧ ಹೊಂದಿದೆ.

ಜಲಾಶಯ ತುಂಬಿದರೆ ಹಲವು ಜಿಲ್ಲೆಗಳ ರೈತರ ಮುಖದಲ್ಲಿ ಮಂದಹಾಸ ಮೂಡಿದರೆ, ನೀರಿನ ಕೊರತೆ ಎದುರಾದಾಗ ಇದೇ ಪ್ರದೇಶಗಳಲ್ಲಿ ಆತಂಕ ಹೆಚ್ಚುತ್ತದೆ.

https://Visit : www.suddidina.com

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ-ವರಾಹ ಪರ್ವತ ಶ್ರೇಣಿಗಳ ಗಂಗಾಮೂಲದಲ್ಲಿ ಹುಟ್ಟುವ ಭದ್ರಾ ನದಿ ಕಳಸ, ಕೊಪ್ಪ, ನರಸಿಂಹರಾಜಪುರ, ತರೀಕೆರೆ ಹಾಗೂ ಭದ್ರಾವತಿ ತಾಲೂಕುಗಳಲ್ಲಿ ಹರಿದು ಕೂಡಲಿ ಬಳಿ ತುಂಗಾ ನದಿಯನ್ನು ಸೇರುತ್ತದೆ. ಬಳಿಕ ತುಂಗಾಭದ್ರೆಯಾಗಿ ಮುಂದುವರಿದು ಕೃಷ್ಣಾ ನದಿಯನ್ನು ಸೇರುತ್ತದೆ.

ತರೀಕೆರೆ ತಾಲೂಕಿನ ಲಕ್ಕವಳ್ಳಿ ಬಳಿ ನಿರ್ಮಿಸಲಾಗಿರುವ ಭದ್ರಾ ಜಲಾಶಯ 1,708 ಮೀಟರ್‌ ಉದ್ದ ಹಾಗೂ 59.14 ಮೀಟರ್‌ ಎತ್ತರ ಹೊಂದಿದೆ. ಇದರ ಒಟ್ಟು ಸಂಗ್ರಹ ಸಾಮರ್ಥ್ಯ 71.50 ಟಿಎಂಸಿ. 1,968.40 ಚದರ ಕಿಲೋಮೀಟರ್‌ ಜಲಾನಯನ ಪ್ರದೇಶ ಹೊಂದಿರುವ ಈ ಯೋಜನೆಗೆ ಸ್ವಾತಂತ್ರ್ಯಾನಂತರ 1947ರಲ್ಲಿ ಚಾಲನೆ ದೊರೆತಿದ್ದು, ಅಣೆಕಟ್ಟು ಕಾಮಗಾರಿ 1959ರಲ್ಲಿ ಹಾಗೂ ನಾಲೆಗಳ ಕಾಮಗಾರಿ 1966ರಲ್ಲಿ ಪೂರ್ಣಗೊಂಡಿತು.

ಭದ್ರಾ ನೀರಾವರಿ ಯೋಜನೆಯು ಮಧ್ಯ ಕರ್ನಾಟಕದ ಕೃಷಿಯ ಚಿತ್ರಣವನ್ನೇ ಬದಲಿಸಿದೆ. ಎಡದಂಡೆ ನಾಲೆ 77.24 ಕಿ.ಮೀ. ಹರಿದು ಸುಮಾರು 8,300 ಹೆಕ್ಟೇರ್‌ ಪ್ರದೇಶಕ್ಕೆ ನೀರು ಒದಗಿಸಿದರೆ, ಬಲದಂಡೆ ನಾಲೆ 366.90 ಕಿ.ಮೀ. ಉದ್ದಕ್ಕೆ ಹರಿದು ಸುಮಾರು ಒಂದು ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸುತ್ತದೆ.

ಒಂದು ಕಾಲದಲ್ಲಿ ಭತ್ತ ಮತ್ತು ಕಬ್ಬು ಪ್ರಧಾನವಾಗಿದ್ದ ಪ್ರದೇಶಗಳಲ್ಲಿ ಇದೀಗ ಅಡಕೆ ಸೇರಿದಂತೆ ವಿವಿಧ ವಾಣಿಜ್ಯ ಬೆಳೆಗಳ ವಿಸ್ತರಣೆ ಕಂಡುಬಂದಿದೆ. ಹೀಗಾಗಿ ಭದ್ರಾ ನೀರು ಕೃಷಿ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದೆ.

ಮಧ್ಯ ಕರ್ನಾಟಕದ ಹಲವು ನಗರಗಳು, ಪಟ್ಟಣಗಳು ಹಾಗೂ ಸಾವಿರಾರು ಹಳ್ಳಿಗಳ ಕುಡಿಯುವ ನೀರಿನ ವ್ಯವಸ್ಥೆಯಲ್ಲೂ ಭದ್ರಾ ಜಲಾಶಯ ಪ್ರಮುಖ ಪಾತ್ರ ವಹಿಸುತ್ತದೆ. ಜಲಾಶಯದಲ್ಲಿ ಕುಡಿಯುವ ನೀರಿಗಾಗಿ 8.50 ಟಿಎಂಸಿ ನೀರನ್ನು ಮೀಸಲಿಡಲಾಗಿದೆ. ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ, ವಿಜಯನಗರ, ಬಳ್ಳಾರಿ ಸೇರಿದಂತೆ ಹಲವು ಪ್ರದೇಶಗಳ ಜನಜೀವನಕ್ಕೆ ಈ ನೀರು ಆಸರೆಯಾಗಿದೆ.

ಜಲಾಶಯದ ಸಂಗ್ರಹ ಸಾಮರ್ಥ್ಯದ ಮೇಲೆ ಹೂಳು ಕೂಡ ಪರಿಣಾಮ ಬೀರುತ್ತಿದೆ. ಮೂಲ ಸಂಗ್ರಹಕ್ಕೆ ಹೋಲಿಸಿದರೆ ಸುಮಾರು 95.74 ಮಿಲಿಯನ್‌ ಘನ ಮೀಟರ್‌ ಹೂಳು ಸೇರಿಕೊಂಡಿದೆ ಎನ್ನಲಾಗುತ್ತದೆ. ಸದ್ಯ ಡೆಡ್‌ ಸ್ಟೋರೇಜ್‌ ಇರುವುದರಿಂದ ತಕ್ಷಣದ ಬಳಕೆಗೆ ದೊಡ್ಡ ತೊಂದರೆ ಇಲ್ಲವಾದರೂ, ಭವಿಷ್ಯದ ಜಲಭದ್ರತೆ ದೃಷ್ಟಿಯಿಂದ ಹೂಳು ನಿರ್ವಹಣೆ ಮಹತ್ವದ್ದಾಗಿದೆ.

ಇದರ ನಡುವೆ ಭದ್ರಾ ಮೇಲ್ದಂಡೆ ಯೋಜನೆ ಬರಪೀಡಿತ ಪ್ರದೇಶಗಳಿಗೆ ನೀರೊದಗಿಸುವ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಸೂಕ್ಷ್ಮ ನೀರಾವರಿ ಹಾಗೂ ಕೆರೆಗಳ ಭರ್ತಿಗೆ ಯೋಜನೆ ರೂಪಿಸಲಾಗಿದೆ. ಜತೆಗೆ ನಾಲೆಗಳ ಮೂಲಕ 37.2 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯೂ ನಡೆಯುತ್ತಿದೆ. ಮೀನು ಮರಿ ಸಾಕಣೆ ಕೇಂದ್ರವೂ ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Suddidina