ಸುದ್ದಿದಿನ,ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಯ ನೂತನ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ (B. K. Hariprasad) ಅವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ನೇಮಕ ಮಾಡಿದೆ. ಈ ಕುರಿತು ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.
ವೇಣುಗೋಪಾಲ್ ಅಧಿಕೃತ ಆದೇಶ ಹೊರಡಿಸಿದ್ದು, ನೇಮಕಾತಿ ತಕ್ಷಣದಿಂದಲೇ ಜಾರಿಗೆ ಬಂದಿದೆ.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಡಿ.ಕೆ. ಶಿಬಕುಮಾರ್ (D. K. Shivakumar) ಅವರು 'ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ' ಎಂಬ ಪಕ್ಷದ ನೀತಿಯ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಈ ಮಹತ್ವದ ಬದಲಾವಣೆ ನಡೆದಿದೆ. ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಅನುಭವಿ ನಾಯಕ ಹರಿಪ್ರಸಾದ್ ಅವರಿಗೆ ಹೈಕಮಾಂಡ್ ಹೊಣೆಗಾರಿಕೆ ನೀಡಿದೆ.
ದೀರ್ಘಕಾಲ ಕಾಂಗ್ರೆಸ್ ಸಂಘಟನೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿರುವ ಹರಿಪ್ರಸಾದ್ ಅವರು ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಮಾಜಿ ರಾಜ್ಯಸಭಾ ಸದಸ್ಯರಾಗಿರುವ ಅವರು ಹಲವು ರಾಜ್ಯಗಳ ಪಕ್ಷದ ಉಸ್ತುವಾರಿ ಜವಾಬ್ದಾರಿಗಳನ್ನೂ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಪಕ್ಷದ ಸಂಘಟನಾ ಅನುಭವ ಮತ್ತು ಹೈಕಮಾಂಡ್‌ನೊಂದಿಗೆ ಹೊಂದಿರುವ ಉತ್ತಮ ಬಾಂಧವ್ಯ ಅವರ ನೇಮಕಾತಿಗೆ ಪ್ರಮುಖ ಕಾರಣವೆಂದು ಕಾಂಗ್ರೆಸ್ ವಲಯಗಳಲ್ಲಿ ವಿಶ್ಲೇಷಿಸಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಈಶ್ವರ ಖಂಡ್ರೆ ಸೇರಿದಂತೆ ಹಲವು ನಾಯಕರ ಹೆಸರುಗಳು ಕೇಳಿಬಂದಿದ್ದರೂ, ಅಂತಿಮವಾಗಿ ಹೈಕಮಾಂಡ್ ಹರಿಪ್ರಸಾದ್ ಅವರ ಮೇಲೆ ವಿಶ್ವಾಸ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಸಂಘಟನೆ ಮತ್ತು ಸರ್ಕಾರದ ನಡುವೆ ಸಮನ್ವಯ ಸಾಧಿಸುವ ಮಹತ್ವದ ಜವಾಬ್ದಾರಿ ಇದೀಗ ಅವರ ಹೆಗಲಿಗೆ ಬಂದಿದೆ.
ಹರಿಪ್ರಸಾದ್ ಅವರ ನೇಮಕಾತಿಯಿಂದ ರಾಜ್ಯ ಕಾಂಗ್ರೆಸ್ ಸಂಘಟನೆಯಲ್ಲಿ ಹೊಸ ಚೈತನ್ಯ ಮೂಡಲಿದ್ದು, ಮುಂದಿನ ಸ್ಥಳೀಯ ಸಂಸ್ಥೆ ಹಾಗೂ ವಿಧಾನ ಪರಿಷತ್ ಚುನಾವಣೆಗಳ ಸಿದ್ಧತೆಯಲ್ಲಿ ಪಕ್ಷಕ್ಕೆ ಹೊಸ ದಿಕ್ಕು ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.

