Dailyhunt Logo
  • Light mode
    Follow system
    Dark mode
    • Play Story
    • App Story
ದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ - ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ

ದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ - ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ

ಸುದ್ದಿದಿನ,ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿಯ ನೂತನ ವಿಜ್ಞಾನ ಸಭಾಂಗಣದಲ್ಲಿ ಕಂಪ್ಯೂಟರ್ ಅಪ್ಲಿಕೇಷನ್ಸ್ (ಎಮ್.ಸಿ.ಎ) ಹಾಗೂ ಕಂಪ್ಯೂಟರ್ ಸೈನ್ಸ್ (ಎಮ್.ಎಸ್ಸಿ) ವಿಭಾಗಗಳ ಸಂಯುಕ್ತಾಶ್ರಯದಲ್ಲಿ "ಸಂಶೋಧನಾ ಸಮಸ್ಯೆಯನ್ನು ಗುರುತಿಸುವ ವಿವಿಧ ವಿಧಾನಗಳು, ಹೊಸ ಸಂಶೋಧನಾ ಕಲ್ಪನೆಗಳ ಸೃಷ್ಟಿ ಹಾಗೂ ಟೈಯರ್-1 ಸಂಶೋಧನಾ ಲೇಖನಗಳ ಬರಹದ ಪ್ರಮುಖ ಅಂಶಗಳು" ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ, ಗುಣಮಟ್ಟದ ಸಂಶೋಧನೆಯೇ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಪ್ರಗತಿ ಮತ್ತು ಜಾಗತಿಕ ಮಾನ್ಯತೆಯ ಮೂಲಾಧಾರವಾಗಿದೆ ಎಂದು ಹೇಳಿದರು.

ಸಂಶೋಧನೆ ಕೇವಲ ಪದವಿ ಪಡೆಯುವ ಪ್ರಕ್ರಿಯೆಯಾಗಬಾರದು, ಅದು ಸಮಾಜದ ಸಮಸ್ಯೆಗಳಿಗೆ ಪರಿಹಾರ ನೀಡುವ ದಿಕ್ಕಿನಲ್ಲಿ ಸಾಗಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಪ್ರಕಟಣೆಗಳು ವಿಶ್ವವಿದ್ಯಾಲಯದ ಸಂಶೋಧನಾ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಯು ಕೆ ಮಾಂಚೆಸ್ಟರ್‌ನ 'ಯೂನಿವರ್ಸಿಟಿ ಆಫ್ ಸ್ಯಾಲ್‌ಫೋರ್ಡ್'ನ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕ ಡಾ. ಶಿವಕುಮಾರ ಪಿ. ಮಾತನಾಡಿ, ಸಂಶೋಧನಾ ಸಮಸ್ಯೆ ಗುರುತಿಸುವಿಕೆ, ಸಂಶೋಧನಾ ಅಂತರ (Research Gap) ಪತ್ತೆ, ಸಾಹಿತ್ಯ ಸಮೀಕ್ಷೆ, ಪ್ರಯೋಗಾತ್ಮಕ ವಿನ್ಯಾಸ (Experimental Design), ಟೈಯರ್-1 ಜರ್ನಲ್ ಲೇಖನ ಬರಹ, ಪ್ರಕಟಣಾ ನೈತಿಕತೆ ಹಾಗೂ ವಿಮರ್ಶಕರ ಅಭಿಪ್ರಾಯಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವ ವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

"ಒಂದು ಉತ್ತಮ ಸಂಶೋಧನಾ ಲೇಖನದ ಯಶಸ್ಸು ಅದರ ಹೊಸತನ, ವೈಜ್ಞಾನಿಕ ವಿಧಾನ ಮತ್ತು ಸ್ಪಷ್ಟವಾದ ಪ್ರಸ್ತುತೀಕರಣದಲ್ಲಿ ಅಡಗಿದೆ. ಸಂಶೋಧಕರು ಗುಣಮಟ್ಟದ ಸಮಸ್ಯೆಗಳನ್ನು ಆಯ್ಕೆ ಮಾಡಿಕೊಂಡು ಅಂತರರಾಷ್ಟ್ರೀಯ ಮಟ್ಟದ ಪ್ರಕಟಣೆಗೆ ಸಿದ್ಧರಾಗಬೇಕು," ಎಂದು ಅವರು ಕರೆ ನೀಡಿದರು.

ಕಾರ್ಯಾಗಾರದಲ್ಲಿ 250ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ವಿವಿಧ ವಿಭಾಗಗಳ ಅಧ್ಯಾಪಕರು ಭಾಗವಹಿಸಿದ್ದರು. ಪೋಸ್ಟರ್ ಪ್ರಸೆಂಟೇಷನ್‌ಗಳು, ಸಂವಾದಾತ್ಮಕ ಚರ್ಚೆಗಳು ಮತ್ತು ಸಂಶೋಧನಾ ಲೇಖನ ಬರಹದ ಪ್ರಾಯೋಗಿಕ ಮಾರ್ಗದರ್ಶನ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಭವಿಷ್ಯದಲ್ಲೂ ಇಂತಹ ಕಾರ್ಯಾಗಾರಗಳ ಸರಣಿಯನ್ನು ಆಯೋಜಿಸಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕುಲಸಚಿವ ಶ್ರೀ ಎಸ್. ಬಿ. ಗಂಟಿ, ಪರೀಕ್ಷಾಂಗ ಕುಲಸಚಿವ ಡಾ. ಸಿ. ಕೆ. ರಮೇಶ್, ಡಾ. ಬಸವಣ್ಣ ಎಮ್. ಅಧ್ಯಕ್ಷರು, ಎಮ್.ಸಿ.ಎ ವಿಭಾಗ, ಡಾ. ಚಂದ್ರಕಾಂತ ಎನ್. ಅಧ್ಯಕ್ಷರು, ಕಂಪ್ಯೂಟರ್ ಸೈನ್ಸ್ ವಿಭಾಗ, ಹಣಕಾಸು ಅಧಿಕಾರಿ ಡಾ. ಆರ್. ಶಶಿಧರ್ ಹಾಗೂ ವಿವಿಧ ವಿಭಾಗಗಳ ಅಧ್ಯಕ್ಷರು ಉಪಸ್ಥಿತರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Suddidina