Dailyhunt Logo
  • Light mode
    Follow system
    Dark mode
    • Play Story
    • App Story
200 ವರ್ಷಗಳ ನಂತರ ಮನೆಗೆ ಬಂದ ಮಹಾಲಕ್ಷ್ಮಿ, "ಮಗಳೇ ನಮ್ಮ ಅದೃಷ್ಟ": ಆಸ್ಪತ್ರೆಯಿಂದ ರಥದಲ್ಲೇ ಮಗು ಕರೆತಂದಿದ್ದಕ್ಕಿದೆ ರೋಚಕ ಇತಿಹಾಸ!

200 ವರ್ಷಗಳ ನಂತರ ಮನೆಗೆ ಬಂದ ಮಹಾಲಕ್ಷ್ಮಿ, "ಮಗಳೇ ನಮ್ಮ ಅದೃಷ್ಟ": ಆಸ್ಪತ್ರೆಯಿಂದ ರಥದಲ್ಲೇ ಮಗು ಕರೆತಂದಿದ್ದಕ್ಕಿದೆ ರೋಚಕ ಇತಿಹಾಸ!

Suddikshana 5 days ago

ಬೀಡ್ (ಮಹಾರಾಷ್ಟ್ರ): ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪರಳಿ ತಾಲೂಕಿನಲ್ಲಿ ಒಂದು ಅಪರೂಪದ ಹಾಗೂ ಹೃದಯಸ್ಪರ್ಶಿ ಘಟನೆ ನಡೆದಿದೆ.ಅಲ್ಲಿನ ದಹಿಫಲೆ ಕುಟುಂಬದಲ್ಲಿ ಬರೋಬ್ಬರಿ ೨೦೦ ವರ್ಷಗಳ (ನಾಲ್ಕು ತಲೆಮಾರುಗಳ) ಸುದೀರ್ಘ ಕಾಯುವಿಕೆಯ ನಂತರ ಹೆಣ್ಣು ಮಗು ಜನ್ಮತಾಳಿದ್ದು, ಕುಟುಂಬಸ್ಥರು ಈ ಮಗುವನ್ನು ರಥದ ಅದ್ಧೂರಿ ಮೆರವಣಿಗೆಯ ಮೂಲಕ ಮನೆಗೆ ಬರಮಾಡಿಕೊಂಡಿದ್ದಾರೆ.

ಬೀಡ್ ಜಿಲ್ಲೆಯ ಪರಳಿಯ ದಹಿಫಲೆ ಕುಟುಂಬದಲ್ಲಿ ನಾಲ್ಕು ತಲೆಮಾರುಗಳಿಂದ ಕೇವಲ ಗಂಡು ಮಕ್ಕಳೇ ಜನಿಸುತ್ತಿದ್ದರು. ಕುಟುಂಬಕ್ಕೆ ಹೆಣ್ಣು ಮಗುವಿನ ಕೊರತೆ ಇತ್ತು. ಇತ್ತೀಚೆಗೆ ಋಷಿಕೇಶ್ ದಹಿಫಲೆ ಹಾಗೂ ಅವರ ಪತ್ನಿಗೆ ಮುದ್ದಾದ ಹೆಣ್ಣು ಮಗು ಜನ್ಮತಾಳಿತು. ಮಗುವಿಗೆ 'ಗಾರ್ಗಿ' ಎಂದು ಹೆಸರಿಡಲಾಗಿದೆ.

ಮನೆಯವರೆಲ್ಲರೂ ರಥದ ಮುಂದೆ ನೃತ್ಯ ಮಾಡುತ್ತಾ, ಮಗುವಿನ ಮೇಲೆ ಹೂವಿನ ಮಳೆ ಸುರಿಸುತ್ತಾ ಅತ್ಯಂತ ಸಡಗರದಿಂದ ಗಾರ್ಗಿಯನ್ನು ಮನೆಗೆ ಕರೆತಂದರು.

ತಾತ ಲಿಂಬಾಜಿ ದಹಿಫಳೆ: 'ನಮ್ಮ ಕುಟುಂಬದಲ್ಲಿ ನಾಲ್ಕು ತಲೆಮಾರುಗಳಿಂದ (ಸುಮಾರು ೨೦೦ ವರ್ಷ) ಹೆಣ್ಣು ಮಗು ಇರಲಿಲ್ಲ ಎಂಬ ಕೊರಗಿತ್ತು. ಇಂದು ನಮ್ಮ ಮನೆಗೆ ಸಾಕ್ಷಾತ್ ಮಹಾಲಕ್ಷ್ಮಿಯೇ ಬಂದಂತಾಗಿದೆ. ಮಗಳು ಎಂದರೆ ಮನೆಯ ಶೋಭೆ, ನಮಗೆ ಈ ಮಗು ಸಿಕ್ಕಿದ್ದು ನಮ್ಮ ದೊಡ್ಡ ಅದೃಷ್ಟ' ಎಂದು ಕಣ್ಣೀರು ಹಾಕುತ್ತಾ ಭಾವುಕರಾದರು.

ಅಜ್ಜಿ ಸುರೇಖಾ ದಹಿಫಳೆ: 'ಮಗು ಆಸ್ಪತ್ರೆಯಲ್ಲಿ ಹುಟ್ಟಿದ ತಕ್ಷಣವೇ ನಾವೆಲ್ಲರೂ ಆಕೆಯನ್ನು ವಿಜೃಂಭಣೆಯಿಂದ ಮೆರವಣಿಗೆ ಮಾಡಿ ಮನೆಗೆ ಕರೆತರಬೇಕೆಂದು ತೀರ್ಮಾನಿಸಿದ್ದೆವು. ಇಂದು ನಮ್ಮ ಆಸೆ ಈಡೇರಿದೆ' ಎಂದು ಹರ್ಷ ವ್ಯಕ್ತಪಡಿಸಿದರು.

ತಂದೆ ಋಷಿಕೇಶ್ ದಹಿಫಳೆ: 'ಸಾಮಾನ್ಯವಾಗಿ ಎಲ್ಲರೂ ಗಂಡು ಮಗು ಬೇಕೆಂದು ಬಯಸುತ್ತಾರೆ, ಆದರೆ ಮಗಳನ್ನ ಪಡೆಯುವ ಆನಂದವೇ ಬೇರೆ. ಹೆಣ್ಣು ಮಕ್ಕಳು ತಂದೆಯ ಮೇಲೆ ಹೆಚ್ಚು ಪ್ರೀತಿ ಹೊಂದಿರುತ್ತಾರೆ. ನಮ್ಮ ಮಗಳನ್ನು ನಾವು ಹೂವಿನಂತೆ ಅತ್ಯಂತ ಪ್ರೀತಿಯಿಂದ ಸಾಕಿ ಬೆಳೆಸುತ್ತೇವೆ' ಎಂದರು.

ಒಂದು ಕಾಲದಲ್ಲಿ ಬೀಡ್ ಜಿಲ್ಲೆಯು ಹೆಣ್ಣು ಭ್ರೂಣ ಹತ್ಯೆಯಂತಹ ಪ್ರಕರಣಗಳಿಗೆ ಕುಖ್ಯಾತಿ ಪಡೆದಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಜಾಗೃತಿ ಕಾರ್ಯಕ್ರಮಗಳು ಮತ್ತು ಜನರ ಬದಲಾದ ಮನಸ್ಥಿತಿಯಿಂದಾಗಿ ಹೆಣ್ಣು ಮಕ್ಕಳ ಜನನ ಪ್ರಮಾಣ ಹೆಚ್ಚಾಗುತ್ತಿದೆ.

ಇಂತಹ ಸಂದರ್ಭದಲ್ಲಿ ೨೦೦ ವರ್ಷಗಳ ನಂತರ ಜನಿಸಿದ ಹೆಣ್ಣು ಮಗುವನ್ನು ರಥದಲ್ಲಿ ಕರೆತಂದು ಹಬ್ಬದಂತೆ ಆಚರಿಸಿದ ದಹಿಫಲೆ ಕುಟುಂಬದ ನಡೆಗೆ ಸಾಮಾಜಿಕ ಕಾರ್ಯಕರ್ತರು ಹಾಗೂ ಸಾರ್ವಜನಿಕ ವಲಯದಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.ಈ ಘಟನೆಯು ಹೆಣ್ಣು ಮಗು ಎಂದರೆ ಹೊರೆಯಲ್ಲ, ಬದಲಿಗೆ ಮನೆಯ ಭಾಗ್ಯ ಎಂಬುದಕ್ಕೆ ಸಾಕ್ಷಿಯಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Suddikshana