ಶಿವಮೊಗ್ಗ:ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಚುರುಕಾಗಿರುವುದರಿಂದ ಜಿಲ್ಲೆಯ ಪ್ರಮುಖ ಜಲಾನಯನ ಪ್ರದೇಶಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಇದರ ಬೆನ್ನಲ್ಲೇ ಬಯಲುಸೀಮೆಯ ಜೀವನಾಡಿಯಾಗಿರುವ ಭದ್ರಾ ಜಲಾಶಯಕ್ಕೆ (Bhadra dam) ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ಇಂದು (ಜುಲೈ 5, 2026) ಬೆಳಗ್ಗೆ 6 ಗಂಟೆಯ ವರದಿಯ ಅನ್ವಯ ಜಲಾಶಯಕ್ಕೆ ಬರೋಬ್ಬರಿ 7,919 ಕ್ಯೂಸೆಕ್ ಒಳಹರಿವು ದಾಖಲಾಗಿದೆ.
186 ಅಡಿ ಗರಿಷ್ಠ ಮಟ್ಟ ಹೊಂದಿರುವ ಭದ್ರಾ ಅಣೆಕಟ್ಟಿನಲ್ಲಿ ಪ್ರಸ್ತುತ ನೀರಿನ ಮಟ್ಟ 139 ಅಡಿಗಳಿಗೆ ಬಂದು ತಲುಪಿದೆ (ಸಮುದ್ರ ಮಟ್ಟದಿಂದ 2111.00 ಅಡಿ). ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 71.535 ಟಿಎಂಸಿ ಆಗಿದ್ದು, ಸದ್ಯ ಜಲಾಶಯದಲ್ಲಿ 26.209 ಟಿಎಂಸಿ ನೀರು ಸಂಗ್ರಹವಾಗಿದೆ.
ಪ್ರಸ್ತುತ ಜಲಾಶಯದಿಂದ ಒಟ್ಟು 211 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದರಲ್ಲಿ ಎಡದಂಡೆ ನಾಲೆಗೆ (LBC) 50 ಕ್ಯೂಸೆಕ್, ನದಿ ತಗ್ಗು ಪ್ರದೇಶಗಳಿಗೆ 100 ಕ್ಯೂಸೆಕ್ ನೀರು ಹರಿಸಲಾಗುತ್ತಿದ್ದು, ಸುಮಾರು 60 ಕ್ಯೂಸೆಕ್‌ನಷ್ಟು ನೀರು ಆವಿಯಾಗುತ್ತಿದೆ. ಸದ್ಯಕ್ಕೆ ಬಲದಂಡೆ ನಾಲೆಗೆ (RBC) ಯಾವುದೇ ನೀರನ್ನು ಬಿಡಲಾಗಿಲ್ಲ (0 ಕ್ಯೂಸೆಕ್).
ಕಳೆದ ವರ್ಷ ಇದೇ ದಿನಕ್ಕೆ (ಜುಲೈ 5) ಹೋಲಿಸಿದರೆ ಈ ಬಾರಿ ಜಲಾಶಯದಲ್ಲಿ ನೀರಿನ ಸಂಗ್ರಹ ಕೊಂಚ ಕಡಿಮೆ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ಮಟ್ಟ 168 ಅಡಿ 5 ಇಂಚು ಇತ್ತು ಹಾಗೂ 51.220 ಟಿಎಂಸಿ ನೀರು ಸಂಗ್ರಹವಾಗಿತ್ತು. ಅಷ್ಟೇ ಅಲ್ಲದೆ, ಕಳೆದ ವರ್ಷ 21,180 ಕ್ಯೂಸೆಕ್ ಒಳಹರಿವು ಹಾಗೂ 5,196 ಕ್ಯೂಸೆಕ್ ಹೊರಹರಿವು ಇತ್ತು. ಆದರೆ ಈ ಬಾರಿ ಆರಂಭದಲ್ಲಿ ಮುಂಗಾರು ಕೊಂಚ ತಡವಾಗಿದ್ದರೂ, ಸದ್ಯ ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯುತ್ತಿರುವುದರಿಂದ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ರೈತರಲ್ಲಿ ಆಶಾಭಾವನೆ ಮೂಡಿಸಿದೆ.

