Dailyhunt Logo
  • Light mode
    Follow system
    Dark mode
    • Play Story
    • App Story
ದಾವಣಗೆರೆ ರೈತರ ಹಿತ ಬಲಿಕೊಟ್ಟು ಚಿತ್ರದುರ್ಗಕ್ಕೆ ನೀರು ಹರಿಸುವ ಆದೇಶ ವಾಪಸ್ ಪಡೆಯಬೇಕು: ರಾಜನಹಳ್ಳಿ ಶಿವಕುಮಾರ್ ಆಗ್ರಹ

ದಾವಣಗೆರೆ ರೈತರ ಹಿತ ಬಲಿಕೊಟ್ಟು ಚಿತ್ರದುರ್ಗಕ್ಕೆ ನೀರು ಹರಿಸುವ ಆದೇಶ ವಾಪಸ್ ಪಡೆಯಬೇಕು: ರಾಜನಹಳ್ಳಿ ಶಿವಕುಮಾರ್ ಆಗ್ರಹ

Suddikshana 1 week ago

ದಾವಣಗೆರೆ: ದಾವಣಗೆರೆ ಜಿಲ್ಲೆಯ ಜೀವನಾಡಿಯಾದ ಭದ್ರಾ ಡ್ಯಾಂನಿಂದ ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆಯ ಪ್ರಾಯೋಗಿಕ ಹಂತವಾಗಿ ಮೂರು ಟಿಎಂಸಿ ನೀಡಲು ರಾಜ್ಯ ಸರ್ಕಾರವು ಅಧಿಕೃತವಾಗಿ ಒಪ್ಪಿಗೆ ನೀಡಿರುವುದು ದುರ್ದೈವದ ಸಂಗತಿ. ಕೂಡಲೇ ಆದೇಶ ವಾಪಸ್ ಪಡೆಯಬೇಕು.

ಮೊದಲು ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರೊದಗಿಸಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಆಗ್ರಹಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕ ನೀಡಿರುವ ಅವರು, ಭದ್ರಾ ಜಲಾಶಯದ ನೀರು ಭದ್ರಾ ಅಚ್ಚುಕಟ್ಟು ಪ್ರದೇಶದ ಶೇಕಡಾ 70ರಷ್ಟು ಭಾಗಕ್ಕೆ ಆಧಾರ. ದಾವಣಗೆರೆ ಜಿಲ್ಲೆಯ ರೈತರಿಗೆ ನೀರು ಹರಿಸುವುದು ಬಿಟ್ಟು ರಾಜ್ಯ ಸರ್ಕಾರವು ಚಿತ್ರದುರ್ಗ ಜಿಲ್ಲೆಗೆ ನೀರು ನೀಡಲು ಒಪ್ಪಿರುವುದು ಖಂಡನೀಯ. ಭದ್ರಾ ಡ್ಯಾಂ 177 ಅಡಿ ದಾಟಿದರೂ ನೀರು ಹರಿಸುತ್ತಿಲ್ಲ. ಇದರ ಹಿಂದೆ ಯಾರ ಕೈವಾಡವಿದೆ ಎಂದು ಪ್ರಶ್ನಿಸಿದ್ದಾರೆ.

ಸಚಿವರಾದ ಮಧು ಬಂಗಾರಪ್ಪ ಮತ್ತು ಎಸ್. ಎಸ್. ಮಲ್ಲಿಕಾರ್ಜುನ್ ಅವರು ಎಲ್ಲಾ ರೈತರು ಮತ್ತು ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರ ಗಮನದಲ್ಲಿಟ್ಟುಕೊಂಡು ಅಡಿಕೆ ಬೆಳೆಗಾರರಿಗೂ ತೊಂದರೆ ಆಗದಂತೆ ತೀರ್ಮಾನ ತೆಗೆದುಕೊಳ್ಳಬೇಕು. ಆದರೆ ಬೇರೆ ವಿಚಾರಗಳಲ್ಲಿ ಬ್ಯುಸಿಯಾಗಿರುವ ಈ ಮಂತ್ರಿಗಳು ರೈತರ ವಿಚಾರದಲ್ಲಿ ಮಾತ್ರ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ರೈತರ ಹಕ್ಕು ಮತ್ತು ಹಿತಾಸಕ್ತಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು. ಭದ್ರಾ ಮೇಲ್ದಂಡೆ ಯೋಜನೆಯಡಿ ತುಂಗಾ ನದಿಯಿಂದ 17.40 ಟಿಎಂಸಿ ನೀರನ್ನು ಭದ್ರಾ ಜಲಾಶಯಕ್ಕೆ ಎತ್ತಿ, ನಂತರ ಭದ್ರಾ ಜಲಾಶಯದಿಂದ 29.90 ಟಿಎಂಸಿ ನೀರನ್ನು ಅಜ್ಜಂಪುರ ಸಮೀಪದ ಸುರಂಗದ ಕಡೆಗೆ ಎತ್ತುವ ಯೋಜನೆ ಇದೆ. ಅಲ್ಲಿಂದ ಚಿತ್ರದುರ್ಗ ಮತ್ತು ತುಮಕೂರು ಶಾಖಾ ಕಾಲುವೆಗಳ ಮೂಲಕ ನೀರು ಸಾಗಿಸುವುದು ಯೋಜನೆಯ ಭಾಗ. ಕೇಂದ್ರ ಜಲ ಆಯೋಗದ ದಾಖಲೆಗಳಲ್ಲಿಯೂ ಈ ವ್ಯವಸ್ಥೆಯನ್ನು ವಿವರಿಸಲಾಗಿದೆ. ಯೋಜನೆಯ ಉದ್ದೇಶ ಬರಪೀಡಿತ ಪ್ರದೇಶಗಳಿಗೆ ನೀರು ಒದಗಿಸುವುದಾದರೂ, ಭದ್ರಾ ಜಲಾಶಯದಿಂದ ದೊಡ್ಡ ಪ್ರಮಾಣದಲ್ಲಿ ನೀರು ಎತ್ತುವಾಗ ಮೂಲ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಿನ ಕೊರತೆ ಉಂಟಾಗದಂತೆ ಯಾವ ರಕ್ಷಣಾತ್ಮಕ ವ್ಯವಸ್ಥೆ ಮಾಡಲಾಗಿದೆ ಎಂಬ ಪ್ರಶ್ನೆಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

ಭದ್ರಾ ಕಾಲುವೆಯ ಕೊನೆಯ ಭಾಗದ ರೈತರಿಗೆ ಈಗಾಗಲೇ ನಿಗದಿತ ಸಮಯಕ್ಕೆ ಸಮರ್ಪಕ ನೀರು ತಲುಪುತ್ತಿಲ್ಲ ಎಂಬ ದೂರುಗಳು ಹಲವು ವರ್ಷಗಳಿಂದ ಕೇಳಿಬರುತ್ತಿವೆ. ಮಳೆ ಕೈಕೊಟ್ಟ ಸಂದರ್ಭದಲ್ಲಿ ಭದ್ರಾ ನೀರೇ ಬೆಳೆ ಉಳಿಸುವ
ಕೊನೆಯ ಆಸರೆ. ಇಂತಹ ಪರಿಸ್ಥಿತಿಯಲ್ಲಿ ಜಲಾಶಯದಿಂದ ಬೇರೆ ಪ್ರದೇಶಗಳಿಗೆ ನೀರು ಹರಿಸುವಾಗ ದಾವಣಗೆರೆ ಜಿಲ್ಲೆಯ ಮೂಲ ಅಚ್ಚುಕಟ್ಟು ಪ್ರದೇಶಕ್ಕೆ ಅಗತ್ಯವಿರುವ ನೀರನ್ನು ಮೊದಲು ಖಚಿತಪಡಿಸಬೇಕು. ರೈತರು ಸಾಲ ಮಾಡಿ ಬಿತ್ತನೆ ಮಾಡುತ್ತಾರೆ. ಬೀಜ, ಗೊಬ್ಬರ, ಔಷಧ, ಕೂಲಿ ಸೇರಿದಂತೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಬೆಳೆ ನಿರ್ಣಾಯಕ ಹಂತದಲ್ಲಿರುವಾಗ ಕಾಲುವೆಗೆ ನೀರು ಬರದಿದ್ದರೆ ಒಂದು ಕುಟುಂಬದ ವರ್ಷದ ದುಡಿಮೆಯೇ ನಾಶವಾಗುತ್ತದೆ. ಆದ್ದರಿಂದ ಭದ್ರಾ ನೀರಿನ ನಿರ್ವಹಣೆಯನ್ನು ಕೇವಲ ಅಂಕಿ-ಅಂಶಗಳ ದೃಷ್ಟಿಯಿಂದ ನೋಡದೆ ರೈತರ ಬದುಕಿನ ಪ್ರಶ್ನೆಯಾಗಿ ಪರಿಗಣಿಸಬೇಕು ಎಂದು ರಾಜನಹಳ್ಳಿ ಶಿವಕುಮಾರ್ ಆಗ್ರಹಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Suddikshana