ದಾವಣಗೆರೆ: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚಗ್ಯಾರಂಟಿ ಯೋಜನೆಗಳನ್ನು ಟೀಕಿಸಿ, ಅನಗತ್ಯ ಅಪಪ್ರಚಾರ ಮಾಡುತ್ತಿರುವ ಬಿಜೆಪಿಗೆ ಮತ ನೀಡಬಾರದು. ಗ್ಯಾರಂಟಿ ಯೋಜನೆಗಳು ಜನರ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿದೆ. ಬೆಲೆ ಏರಿಕೆಯಿಂದ ಬಸವಳಿಯುತ್ತಿರುವ ಜನತೆಗೆ ಗ್ಯಾರಂಟಿ ಯೋಜನೆಗಳು ನೆರವಾಗಿವೆ.
ಗ್ಯಾರಂಟಿ ಯೋಜನೆಗಳಿಗಾಗಿ ಕಾಂಗ್ರೆಸ್ ಸರ್ಕಾರ 1 ಲಕ್ಷ 36 ಸಾವಿರ ಕೋಟಿ ಹಣ ಖರ್ಚು ಮಾಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.
ನಗರದ ಎಪಿಎಂಸಿ ಮಾರುಕಟ್ಟೆ ಬಳಿ ಗ್ಯಾರಂಟಿ ಫಲಾನುಭವಿಗಳ ಜೊತೆ ಸಂವಾದ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಎರಡು ಮಾಡೆಲ್ ಗಳಿವೆ. ಮೊದಲನೆಯದು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಮಾಡೆಲ್. ಎರಡನೇಯದು ಮೋದಿ ಸರ್ಕಾರದಿಂದ ರಾಜ್ಯದ ಜನತೆಯ ಜೇಬು ಕತ್ತರಿಸುವ ಮಾಡೆಲ್. ಜನರ ಜೇಬಿಗೆ ಹಾಕುತ್ತಿರುವ ಕತ್ತರಿಯಿಂದ ಬಚಾವ್ ಆಗಲು ಗ್ಯಾರಂಟಿ ಯೋಜನೆಗಳು
ಸಹಕಾರಿಯಾಗಿವೆ ಎಂದರು.
2014ರಲ್ಲಿ ಬಿಜೆಪಿ ಸರ್ಕಾರದ ಅಧಿಕಾರಕ್ಕೆ ಬರುವ ಮುನ್ನ ಗ್ಯಾಸ್ ಬೆಲೆ 400 ರೂ. ಆಸುಪಾಸಿನಲ್ಲಿತ್ತು. ಈಗ ಎಲ್ ಪಿಜಿ ಸಿಲಿಂಡರ್ ಬೆಲೆ 950 ರೂ. ದಾಟಿದೆ. ಲೀಟರ್ ಗೆ 70 ರೂಪಾಯಿಯಿದ್ದ ಪೆಟ್ರೋಲ್ ಈಗ 102ರ ಗಡಿ ದಾಟಿದೆ. ಡೀಸೆಲ್ 56 ರೂಪಾಯಿಂದ 96ಕ್ಕೆ ಜಿಗಿದಿದೆ. ಏ.1ರಿಂದ ಟೋಲ್ ದರ ಹೆಚ್ಚಳ ಮಾಡಲಾಗಿದೆ. ಕರ್ನಾಟಕದಿಂದ ವರ್ಷಕ್ಕೆ 5000 ಸಾವಿರ ಕೋಟಿ ರೂ. ಟೋಲ್ ಟ್ಯಾಕ್ಸ್ ಸಂಗ್ರಹ ಮಾಡಲಾಗಿದೆ. ದೇಶದಾದ್ಯಂತ 2.80 ಲಕ್ಷ ಕೋಟಿ ಟೋಲ್ ಟ್ಯಾಕ್ಸ್ ಸಂಗ್ರಹವಾಗುತ್ತಿದೆ ಎಂದರು.
ಪ್ಲಾಸ್ಟಿಕ್ ಸರಕು ಸಾಮಾಗ್ರಿಗಳ ಬೆಲೆಗಳು ಶೇ. 50 ಹೆಚ್ಚಾಗಿದೆ. ಪಿವಿಸಿ ಪೈಪ್ ಗಳ ಬೆಲೆ 30%, ಏರ್ ಟಿಕೆಟ್ ದರದಲ್ಲಿ 15% ಹೆಚ್ಚಾಗಿದೆ. ಖಾಸಗಿ ಪೆಟ್ರೋಲ್ ಬಂಕ್ ಗಳಾದ ಎಸ್ಸಾರ್, ಶೆಲ್ ನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು 3 ರಿಂದ 20 ರೂ.ವರೆಗೆ ಹೆಚ್ಚಾಗಿದೆ. ಚುನಾವಣೆ ಬಳಿಕ ಎಲ್ ಪಿಜಿ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಬೆಲೆ ಕೂಡ ಹೆಚ್ಚಾಗಲಿದೆ ಎಂದು ಮಾಹಿತಿ ನೀಡಿದರು.
ಬೆಲೆ ಏರಿಕೆಯಿಂದ ಬಚಾವ್ ಆಗಲು ಇರುವ ಮಾರ್ಗವೇ ಗ್ಯಾರಂಟಿ. ಪಂಚಗ್ಯಾರಂಟಿ ಯೋಜನೆಗಳಿಗಾಗಿ ಕಾಂಗ್ರೆಸ್ ಸರ್ಕಾರ ಪ್ರತಿ ವರ್ಷ 50 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ. ಆದರೆ ಇದನ್ನು ಬಂದ್ ಮಾಡಲು ಬಿಜೆಪಿ ಶತಪ್ರಯತ್ನ ನಡೆಸುತ್ತಿದೆ. ಕಾಂಗ್ರೆಸ್ ಗೆ ಶಕ್ತಿ ತುಂಬುವ ಕೆಲಸ ಮತದಾರರ ಮೇಲಿದೆ. ಸಮರ್ಥ್ ಒಬ್ಬ ಸಮರ್ಥ ಅಭ್ಯರ್ಥಿ. ಯುವಕರಿಗೆ ಸ್ಪೂರ್ತಿದಾಯಕ. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಕಾಂಗ್ರೆಸ್ ಬಲ ಹೆಚ್ಚಿಸಿ ಎಂದು ಕರೆಕೊಟ್ಟರು.
ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಉಪಾಧ್ಯಕ್ಷರುಗಳಾದ ದಿನೇಶ್ ಗೂಳಿಗೌಡ, ಮೆಹರೋಜ್ ಖಾನ್, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ಗ್ಯಾರಂಟಿ ಸಮಿತಿಯ ಜಿಲ್ಲಾ, ತಾಲೂಕು ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.

