Dailyhunt Logo
  • Light mode
    Follow system
    Dark mode
    • Play Story
    • App Story
ಕಾಂಗ್ರೆಸ್‌ಗೆ ಜಮೀರ್ ಅಹ್ಮದ್ ಖಾನ್ ದ್ರೋಹ? ಎಸ್‌ಡಿಪಿಐ 'ಕುಕ್ಕರ್' ಪರ ಬ್ಯಾಟಿಂಗ್ ಮಾಡಿದ ಆಡಿಯೋ ವೈರಲ್: ಹೈಕಮಾಂಡ್ ಗೆ ತಲುಪಿದ ವಿವಾದ!

ಕಾಂಗ್ರೆಸ್‌ಗೆ ಜಮೀರ್ ಅಹ್ಮದ್ ಖಾನ್ ದ್ರೋಹ? ಎಸ್‌ಡಿಪಿಐ 'ಕುಕ್ಕರ್' ಪರ ಬ್ಯಾಟಿಂಗ್ ಮಾಡಿದ ಆಡಿಯೋ ವೈರಲ್: ಹೈಕಮಾಂಡ್ ಗೆ ತಲುಪಿದ ವಿವಾದ!

Suddikshana 1 week ago

ಬೆಂಗಳೂರು:ಕರ್ನಾಟಕ ರಾಜಕಾರಣದಲ್ಲಿ ಮತ್ತೊಂದು ಆಡಿಯೋ ಬಾಂಬ್ ಸಿಡಿದಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಯ ಮತದಾನದ ದಿನದಂದು ಸಚಿವ ಬಿ. ಜಮೀರ್ ಅಹ್ಮದ್ ಖಾನ್ ಅವರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವಾಗಿ ಎಸ್‌ಡಿಪಿಐ (SDPI) ಅಭ್ಯರ್ಥಿಗೆ ಒಳಗೊಳಗೇ ಬೆಂಬಲ ನೀಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ರಾಜ್ಯ ಕಾಂಗ್ರೆಸ್‌ನಲ್ಲಿ ತಲ್ಲಣ ಮೂಡಿಸಿದೆ.

ಸಚಿವ ಬಿ. ಜಮೀರ್ ಅಹ್ಮದ್ ಖಾನ್ ಮತ್ತು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ (KMDC) ನಿರ್ದೇಶಕ ಮೊಹಮ್ಮದ್ ಸಿರಾಜ್ ನಡುವೆ ನಡೆದಿದೆ ಎನ್ನಲಾದ ಈ ಆಡಿಯೋ ಸಂಭಾಷಣೆ, ಕಾಂಗ್ರೆಸ್ ಪಕ್ಷದೊಳಗಿನ ತೀವ್ರ ಭಿನ್ನಮತವನ್ನು ಬೀದಿಗೆ ತಂದಿದೆ.

ವೈರಲ್ ಆಗಿರುವ ಆಡಿಯೋ ಕ್ಲಿಪ್‌ನಲ್ಲಿ, ಉಪಚುನಾವಣೆಯು ತನ್ನ 'ಪ್ರತಿಷ್ಠೆಯ ಪ್ರಶ್ನೆ' ಎಂದು ಜಮೀರ್ ಹೇಳಿಕೊಂಡಿದ್ದಾರೆ. ಅಲ್ಲದೆ ಮತದಾನದ ಪ್ರಮಾಣದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮೊಹಮ್ಮದ್ ಸಿರಾಜ್, 'ನಾವು ಕೇವಲ ಕುಕ್ಕರ್ (SDPI ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಅವರ ಗುರುತು) ಗೆ ಮಾತ್ರ ಮತ ಕೇಳಿದ್ದೇವೆ, ಬೇರೆ ಯಾವುದಕ್ಕೂ ಇಲ್ಲ' ಎಂದು ಜಮೀರ್ ಅವರಿಗೆ ಭರವಸೆ ನೀಡುವುದು ಕೇಳಿಬಂದಿದೆ.

ಸಂಭಾಷಣೆಯ ಮಧ್ಯೆ, ಕಾಂಗ್ರೆಸ್‌ನವರು ಬೂತ್‌ಗಳ ಬಳಿ ಹಣ ಹಂಚುತ್ತಿದ್ದಾರೆ ಎಂದು ಜಮೀರ್ ಆತಂಕ ವ್ಯಕ್ತಪಡಿಸಿದಾಗ, ಸಿರಾಜ್ ಅವರು 'ಅವರು (ಕಾಂಗ್ರೆಸ್) ಕುಕ್ಕರ್‌ಗಾಗಿ ನೀವು ಖರ್ಚು ಮಾಡಿದಷ್ಟು ಹಣವನ್ನು ಖರ್ಚು ಮಾಡಿಲ್ಲ' ಎಂದು ಹೇಳುವ ಮೂಲಕ ಜಮೀರ್ ಅವರು ಎಸ್‌ಡಿಪಿಐ ಅಭ್ಯರ್ಥಿಗೆ ಧನಸಹಾಯ ಮಾಡಿದ್ದಾರೆ ಎಂಬ ಸಂಶಯವನ್ನು ದಟ್ಟವಾಗಿಸಿದ್ದಾರೆ.

ಅಷ್ಟೇ ಅಲ್ಲದೆ, ಕಾಂಗ್ರೆಸ್‌ಗೆ ಹಿನ್ನಡೆ ಉಂಟುಮಾಡಲು ತಾವು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ (ಸೀನಾ) ಅವರನ್ನು ಭೇಟಿಯಾಗಿ, 'ನಿಮ್ಮ ಜನರನ್ನು ನಿಯೋಜಿಸಿ ಕಾಂಗ್ರೆಸ್‌ಗೆ ಕಷ್ಟ ಪ್ರಸಂಗ ತಂದೊಡ್ಡಿ' ಎಂದು ಕೇಳಿಕೊಂಡಿದ್ದಾಗಿ ಮತ್ತು ಅದಕ್ಕೆ ಬಿಜೆಪಿ ಅಭ್ಯರ್ಥಿ ಒಪ್ಪಿಗೆ ಸೂಚಿಸಿದ್ದರು ಎಂದೂ ಸಿರಾಜ್ ಈ ಕರೆಯಲ್ಲಿ ಹೇಳಿಕೊಂಡಿರುವುದು ಭಾರಿ ಸಂಚಲನ ಸೃಷ್ಟಿಸಿದೆ.

ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂದು ಜಮೀರ್ ಅಹ್ಮದ್ ಖಾನ್ ಬಣ ಮತ್ತು ಅಬ್ದುಲ್ ಜಬ್ಬಾರ್ ಒತ್ತಾಯಿಸಿದ್ದರು. ಆದರೆ ಹೈಕಮಾಂಡ್ ಶಾಮನೂರು ಅವರ ಮೊಮ್ಮಗ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಜಮೀರ್ ಬಣ, ಒಳಗೊಳಗೇ ಕಾಂಗ್ರೆಸ್ ಸೋಲಿಗೆ ಸ್ಕೆಚ್ ಹಾಕಿತ್ತು ಎಂಬ ಆರೋಪಕ್ಕೆ ಈ ಆಡಿಯೋ ಪುಷ್ಟಿ ನೀಡುವಂತಿದೆ.

ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಜಯಗಳಿಸಿದ್ದರೂ, ಪಕ್ಷದ್ರೋಹದ ಈ ಆಡಿಯೋ ವಿವಾದ ಇಲ್ಲಿಗೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಈಗಾಗಲೇ ಅಬ್ದುಲ್ ಜಬ್ಬಾರ್ ಅವರು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪಕ್ಷದೊಳಗಿನ ಒಂದು ವಲಯ ಹೈಕಮಾಂಡ್‌ಗೆ ಒತ್ತಾಯಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಭಿನ್ನಮತ ಶಮನಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Dailyhunt
Disclaimer: This content has not been generated, created or edited by Dailyhunt. Publisher: Suddikshana