Dailyhunt Logo
  • Light mode
    Follow system
    Dark mode
    • Play Story
    • App Story
ನಾನು ದೇವಸ್ಥಾನಕ್ಕೆ ಹೋಗಲು ಇಷ್ಟಪಡಲ್ಲ, ಇಸ್ಲಾಂ ಮಾನವೀಯತೆ, ಕರುಣೆ ಹೊಂದಿರೋ ವಿಶ್ವದ ಶ್ರೇಷ್ಠ ಧರ್ಮಗಳಲ್ಲಿ ಒಂದು: ಹಜ್‌ ಯಾತ್ರೆ ಕೈಗೊಳ್ಳುವ ಆಸೆಯಿದೆ ಎಂದ್ರು ಸಚಿವ ಬಸವರಾಜ ರಾಯರೆಡ್ಡಿ!

ನಾನು ದೇವಸ್ಥಾನಕ್ಕೆ ಹೋಗಲು ಇಷ್ಟಪಡಲ್ಲ, ಇಸ್ಲಾಂ ಮಾನವೀಯತೆ, ಕರುಣೆ ಹೊಂದಿರೋ ವಿಶ್ವದ ಶ್ರೇಷ್ಠ ಧರ್ಮಗಳಲ್ಲಿ ಒಂದು: ಹಜ್‌ ಯಾತ್ರೆ ಕೈಗೊಳ್ಳುವ ಆಸೆಯಿದೆ ಎಂದ್ರು ಸಚಿವ ಬಸವರಾಜ ರಾಯರೆಡ್ಡಿ!

Suddikshana 1 week ago

ಕೊಪ್ಪಳ: ಇಸ್ಲಾಂ ಧರ್ಮವು ಕೇವಲ ಒಂದು ಧರ್ಮವಷ್ಟೇ ಅಲ್ಲ, ಅದು ಮಾನವೀಯತೆ, ಕರುಣೆ ಮತ್ತು ವೈಜ್ಞಾನಿಕ ನೆಲೆಯನ್ನು ಹೊಂದಿರುವ ವಿಶ್ವದ ಅತ್ಯಂತ ಶ್ರೇಷ್ಠ ಧರ್ಮಗಳಲ್ಲಿ ಒಂದಾಗಿದೆ ಎಂದು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಮುಸ್ಲಿಂ ಸಮುದಾಯದ ವತಿಯಿಂದ ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಚಿವರು, ತಮಗೆ ಜೀವನದಲ್ಲಿ ಒಮ್ಮೆಯಾದರೂ ಪವಿತ್ರ ಮಕ್ಕಾ-ಮದೀನಾಕ್ಕೆ ತೆರಳಿ ಹಜ್ ಯಾತ್ರೆ ಕೈಗೊಳ್ಳಬೇಕೆಂಬ ತೀವ್ರ ಆಸೆಯಿದೆ ಎಂದು ಮುಕ್ತವಾಗಿ ಹಂಚಿಕೊಂಡರು.ತಾನು ಸಾಮಾನ್ಯವಾಗಿ ಮಠ-ಮಾನ್ಯಗಳು ಹಾಗೂ ದೇವಸ್ಥಾನಗಳಿಗೆ ಹೆಚ್ಚಾಗಿ ಭೇಟಿ ನೀಡುವುದಿಲ್ಲ ಎಂದು ತಿಳಿಸಿದ ಅವರು, ಇಸ್ಲಾಂ ಧರ್ಮ ಮತ್ತು ಅದರ ಆಚರಣೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇಸ್ಲಾಂ ಧರ್ಮದ ಕುರಿತು ಸಮಾಜದಲ್ಲಿ ಕೆಲವೊಮ್ಮೆ ತಪ್ಪು ಕಲ್ಪನೆಗಳನ್ನು ಹರಡಲಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ ರಾಯರೆಡ್ಡಿ, ಪವಿತ್ರ ಖುರಾನ್ ಗ್ರಂಥವು ಕೇವಲ ಮುಸ್ಲಿಮರಿಗೆ ಮಾತ್ರ ಸೀಮಿತವಾಗಿಲ್ಲ ಎಂದರು. ಮಹಮ್ಮದ್ ಪೈಗಂಬರರು ಇಡೀ ಬ್ರಹ್ಮಾಂಡಕ್ಕೆ ಕುರಾನ್ ಸಂದೇಶವನ್ನು ನೀಡಿದ್ದಾರೆ.ಆಸಕ್ತಿ ಇರುವ ಯಾವುದೇ ಸಮುದಾಯದವರು ಖುರಾನ್ ಅಧ್ಯಯನ ಮಾಡಬಹುದು ಹಾಗೂ ತಾವೂ ಕೂಡ ಖುರಾನ್ ಅಧ್ಯಯನ ಮಾಡಲು ಸಿದ್ಧವಿರುವುದಾಗಿ ಘೋಷಿಸಿದರು.

ಸಾರ್ವಜನಿಕವಾಗಿ ಎಚ್ಚರಿಕೆ ನೀಡಿದ ಸಚಿವರು, ಜನರು ಯಾವುದೇ ಕಾರಣಕ್ಕೂ ಮತಾಂಧರಾಗಲಿ ಅಥವಾ ಜಾತಿವಾದಿಗಳಾಗಲಿಬಾರದು ಎಂದು ಮನವಿ ಮಾಡಿದರು.ಕೇವಲ ಮಸೀದಿಗೆ ಹೋಗಿ 'ಅಲ್ಲಾಹು ಅಕ್ಬರ್' ಎಂದ ಮಾತ್ರಕ್ಕಾಗಲಿ ಅಥವಾ ದೇವಸ್ಥಾನಗಳಿಗೆ ಭೇಟಿ ನೀಡಿದ ಮಾತ್ರಕ್ಕಾಗಲಿ ಎಲ್ಲವೂ ಸರಿಯಾಗುವುದಿಲ್ಲ.ಬದಲಿಗೆ, ಎಲ್ಲಾ ಧರ್ಮಗಳಲ್ಲಿರುವ ಸತ್ತ್ವಯುತ ಹಾಗೂ ಒಳ್ಳೆಯ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸರ್ಕಾರದ ಹಿರಿಯ ನಾಯಕರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದು, ಸಚಿವರ ಈ ಧರ್ಮಪರ ಹಾಗೂ ಸೌಹಾರ್ದಯುತ ಹೇಳಿಕೆಯು ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Suddikshana