Dailyhunt Logo
  • Light mode
    Follow system
    Dark mode
    • Play Story
    • App Story
PoK ನಲ್ಲಿ ಆಹಾರ, ಔಷಧ ಬಂದ್; ಪಾಕ್ ವಿರುದ್ಧ ಸಿಡಿದೆದ್ದ ಜನತೆಯಿಂದ 'ಆಜಾದಿ' ಘೋಷಣೆ!

PoK ನಲ್ಲಿ ಆಹಾರ, ಔಷಧ ಬಂದ್; ಪಾಕ್ ವಿರುದ್ಧ ಸಿಡಿದೆದ್ದ ಜನತೆಯಿಂದ 'ಆಜಾದಿ' ಘೋಷಣೆ!

Suddikshana 2 weeks ago

ವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಪಾಕ್ ಸರ್ಕಾರದ ವಿರುದ್ಧದ ಜನಾಂದೋಲನ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಳೆದ ಸುಮಾರು ಒಂದು ತಿಂಗಳಿನಿಂದ ನಡೆಯುತ್ತಿರುವ ಈ ಪ್ರತಿಭಟನೆಯ ನೇತೃತ್ವ ವಹಿಸಿರುವ ಜಂಟಿ ಅವಾಮಿ ಆಕ್ಷನ್ ಕಮಿಟಿ (JAAC) ನಾಯಕ ಸರ್ದಾರ್ ಅಮನ್ ಖಾನ್, ಪ್ರಸ್ತುತ ಉದ್ಭವಿಸಿರುವ ಮಾನವೀಯ ಬಿಕ್ಕಟ್ಟನ್ನು ಎದುರಿಸಲು ಭಾರತದ ಸಹಾಯವನ್ನು ಬಹಿರಂಗವಾಗಿ ಕೋರಿದ್ದಾರೆ.

ಪಾಕಿಸ್ತಾನ ಸರ್ಕಾರವು ಕಳೆದ ಮೂರು ವಾರಗಳಿಂದ ಈ ಭಾಗಕ್ಕೆ ಆಹಾರ ಧಾನ್ಯ, ಗೋಧಿ ಹಿಟ್ಟು ಮತ್ತು ಅಗತ್ಯ ಔಷಧಿಗಳ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ರಾವಲಕೋಟ್‌ನ ಈದ್ಗಾ ಮೈದಾನದಲ್ಲಿ ಜಮಾಯಿಸಿದ್ದ ಸಹಸ್ರಾರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅಮನ್ ಖಾನ್, 'ನಮ್ಮ ಹಕ್ಕುಗಳಿಗಾಗಿ ನಾವು ನಿಯಂತ್ರಣ ರೇಖೆಯ (LoC) ಕಡೆಗೆ ಮುನ್ನಡೆಯಬೇಕೇ?' ಎಂದು ಪ್ರಶ್ನಿಸಿದರು. ಇದಕ್ಕೆ ನೆರೆದಿದ್ದ ಜನಸಾಗರದಿಂದ 'ಖಂಡಿತವಾಗಿಯೂ ಗಡಿಯತ್ತ ಮುನ್ನಡೆಯೋಣ' ಎಂಬ ಭಾರಿ ಬೆಂಬಲ ವ್ಯಕ್ತವಾಯಿತು. ಅಷ್ಟೇ ಅಲ್ಲದೆ, 'ಹಮ್ ಲೇಕರ್ ರಹೆಂಗೆ ಆಜಾದಿ' (ನಾವು ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತೇವೆ) ಎಂಬ ಘೋಷಣೆಗಳು ಮೊಳಗಿದವು.

'ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಪಾಕಿಸ್ತಾನದ ಭಾಗವಲ್ಲ. ನಮಗೆ ಪಾಕಿಸ್ತಾನದ ಅಗತ್ಯವಿಲ್ಲ, ಬದಲಿಗೆ ಪಾಕಿಸ್ತಾನಕ್ಕೇ ನಮ್ಮ ಅಗತ್ಯವಿದೆ' ಎಂದು ಖಾನ್ ಗುಡುಗಿದ್ದಾರೆ. ಕೇವಲ ಆರ್ಥಿಕ ಬಿಕ್ಕಟ್ಟಿನಿಂದ ಆರಂಭವಾದ ಈ ಹೋರಾಟ, ಈಗ ಪಾಕ್ ಆಡಳಿತದಿಂದ ದಶಕಗಳಿಂದ ನಡೆಯುತ್ತಿರುವ ರಾಜಕೀಯ ನಿರ್ಲಕ್ಷ್ಯ, ಆರ್ಥಿಕ ಶೋಷಣೆ ಮತ್ತು ಆಡಳಿತಾತ್ಮಕ ದಬ್ಬಾಳಿಕೆಯ ವಿರುದ್ಧದ ಬೃಹತ್ ರಾಜಕೀಯ ಚಳವಳಿಯಾಗಿ ಮಾರ್ಪಟ್ಟಿದೆ.

ಸಂಪನ್ಮೂಲಗಳ ಶೋಷಣೆ: PoK ಭಾಗದಲ್ಲಿ ಭಾರಿ ಪ್ರಮಾಣದ ಜಲವಿದ್ಯುತ್ ಉತ್ಪಾದನೆಯಾಗುತ್ತಿದ್ದರೂ, ಅದನ್ನು ಪಾಕಿಸ್ತಾನದ ಇತರ ಪ್ರಾಂತ್ಯಗಳಿಗೆ ಬಳಸಲಾಗುತ್ತಿದೆ. ಆದರೆ ಸ್ಥಳೀಯ ಜನರಿಗೆ ಮಾತ್ರ ದುಬಾರಿ ವಿದ್ಯುತ್ ಬಿಲ್ ನೀಡಲಾಗುತ್ತಿದೆ.

ಭಾರೀ ಹಣದುಬ್ಬರ: ಗೋಧಿ, ಹಿಟ್ಟು ಸೇರಿದಂತೆ ದೈನಂದಿನ ಅಗತ್ಯ ವಸ್ತುಗಳ ಮೇಲಿನ ಸಬ್ಸಿಡಿಯನ್ನು ಪಾಕ್ ಸರ್ಕಾರ ಕಡಿತಗೊಳಿಸಿದೆ.

ಪಾಕ್ ಸಚಿವರ ಹೇಳಿಕೆಗೆ ಆಕ್ರೋಶ: ರಾವಲಕೋಟ್ ಮತ್ತು ಮಿರ್ಪುರ್ ನಿವಾಸಿಗಳು 'ನಿಜವಾದ ಕಾಶ್ಮೀರಿಗಳಲ್ಲ' ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ನೀಡಿರುವ ಹೇಳಿಕೆ ಪ್ರತಿಭಟನೆಯ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದೆ.

ಈಗಾಗಲೇ ಈ ಹಿಂಸಾಚಾರದಲ್ಲಿ ಡಜನ್‌ಗೂ ಹೆಚ್ಚು ಮಂದಿ ಮೃತಪಟ್ಟಿದ್ದು, ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಪಾಕ್ ಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕಲು ಕಟು ಕ್ರಮಗಳನ್ನು ಕೈಗೊಂಡಿದೆ.

ಪ್ರತಿಭಟನೆಯ ಮುಂಚೂಣಿಯಲ್ಲಿರುವ JAAC ಸಂಘಟನೆಯನ್ನು ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ನಿಷೇಧಿಸಲಾಗಿದ್ದು, ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅಲ್ಲದೆ, ಇಲ್ಲಿನ ನೈಜ ಚಿತ್ರಣ ಜಗತ್ತಿಗೆ ತಿಳಿಯಬಾರದು ಎಂಬ ಕಾರಣಕ್ಕೆ ಜೂನ್ ಆರಂಭದಿಂದಲೇ PoK ಯ ಹಲವು ಭಾಗಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಮಾತುಕತೆಯ ಭರವಸೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಪಾಕ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Suddikshana