ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್' (Toxic: A Fairy Tale for Grown-Ups) ಸಿನಿಮಾ ಭರ್ಜರಿ ಆಯಕ್ಷನ್ ಹಾಗೂ ಹೈ-ವೋಲ್ಟೇಜ್ ಡ್ರಾಮಾಗಳಿಗೆ ಹೆಸರಾಗಿದ್ದರೂ, ಇದರ ಆತ್ಮ ಇರುವುದು ಆಧುನಿಕ ಪ್ರೀತಿ ಮತ್ತು ಸಂಬಂಧಗಳ ಕಥೆಯಲ್ಲಿ ಎಂದು ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ತಿಳಿಸಿದ್ದಾರೆ.
ಇತ್ತೀಚೆಗೆ ಮಾಧ್ಯಮವೊಂದರ ಜೊತೆ ಮಾತನಾಡಿದ ಕಿಯಾರಾ ಅಡ್ವಾಣಿ, 'ಟಾಕ್ಸಿಕ್' ಸಿನಿಮಾದಲ್ಲಿ ತಮ್ಮ ಪಾತ್ರದ ಕುರಿತು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅವರು 'ನಾಡಿಯಾ' ಎಂಬ ವಿಭಿನ್ನ ಶೇಡ್ ಹೊಂದಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
'ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ಕಥೆ ಹೇಳಿದಾಗ, ಸಾಂಪ್ರದಾಯಿಕ ಚೌಕಟ್ಟನ್ನು ಮೀರಿದ ಪ್ರೀತಿಯ ಹೊಸ ಆಯಾಮ ನನಗೆ ಅರ್ಥವಾಯಿತು. ಈ ಚಿತ್ರದಲ್ಲಿ ಗಂಡು ಮತ್ತು ಹೆಣ್ಣಿನ ನಡುವಿನ ಸಂಬಂಧವನ್ನು ನೋಡುವ ದೃಷ್ಟಿಕೋನವೇ ಸಂಪೂರ್ಣವಾಗಿ ಬದಲಾಗಲಿದೆ. ಇದು ಕೊಂಚ ಬೂದು (Grey) ಶೇಡ್ ಹೊಂದಿದ್ದರೂ, ಇದರಲ್ಲಿ ಒಂದು ರೀತಿಯ ಸ್ವಾತಂತ್ರ್ಯ ಮತ್ತು ಮುಕ್ತತೆ ಇದೆ' ಎಂದು ಕಿಯಾರಾ ಹೇಳಿದ್ದಾರೆ. ಸರ್ಕಸ್ ಹಿನ್ನೆಲೆಯ ಪೋಸ್ಟರ್‌ನಲ್ಲಿ ಗ್ಲಾಮರ್ ಜೊತೆಗೆ ಭಾವನಾತ್ಮಕ ತೀವ್ರತೆಯನ್ನು ಹೊಂದಿರುವ ನಾಡಿಯಾ ಪಾತ್ರ ತನ್ನ ಯೋಚನಾ ಲಹರಿಯನ್ನೇ ಬದಲಾಯಿಸಿತು ಎಂದು ಅವರು ಒಪ್ಪಿಕೊಂಡಿದ್ದಾರೆ.
'ಟಾಕ್ಸಿಕ್' ಚಿತ್ರವನ್ನು ಏಕಕಾಲದಲ್ಲಿ ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳಲ್ಲಿ ಚಿತ್ರೀಕರಿಸಲಾಗುತ್ತಿದೆ. ಮೊದಲು ಇಂಗ್ಲಿಷ್‌ನಲ್ಲಿ ದೃಶ್ಯವನ್ನು ಓಕೆ ಮಾಡಿ, ನಂತರ ಕನ್ನಡದಲ್ಲಿ ಶೂಟ್ ಮಾಡಲಾಗುತ್ತಿತ್ತು. ಕನ್ನಡ ತನ್ನ ಮಾತೃಭಾಷೆ ಅಲ್ಲದ ಕಾರಣ, ಚಿತ್ರೀಕರಣದ ಹಿಂದಿನ ರಾತ್ರಿ ಕುಳಿತು ಡೈಲಾಗ್‌ಗಳನ್ನು ಬಾಯಿಪಾಠ ಮಾಡಬೇಕಾಗುತ್ತಿತ್ತು. ಇದು ತಮ್ಮ ವೃತ್ತಿಜೀವನದ ಅತ್ಯಂತ ಸವಾಲಿನ ಕೆಲಸವಾಗಿತ್ತು ಎಂದು ಕಿಯಾರಾ ನೆನಪಿಸಿಕೊಂಡಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಹಾಗೂ ಯಶ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಜೂನ್ 4 ರಂದು ಬಿಡುಗಡೆಯಾಗಬೇಕಿದ್ದ ಈ ಪ್ಯಾನ್-ಇಂಡಿಯಾ ಸಿನಿಮಾ ಸದ್ಯ ಜಾಗತಿಕ ವಿತರಣೆಯ ಕಾರಣಗಳಿಂದಾಗಿ ಮುಂದೂಡಲ್ಪಟ್ಟಿದೆ.

