ಅಯೋಧ್ಯಾ:ವಿಶ್ವವಿಖ್ಯಾತ ಅಯೋಧ್ಯೆಯ ರಾಮಮಂದಿರದ ದೇಣಿಗೆ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಅಯೋಧ್ಯಾ ಪೊಲೀಸರು, ಈಗ ಬರೋಬ್ಬರಿ 15 ಲಕ್ಷ ರೂಪಾಯಿಗಳ ಆರ್ಥಿಕ ವಹಿವಾಟಿನ ಜಾಲವನ್ನು ಪತ್ತೆಹಚ್ಚಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ, ಮಂದಿರದ ದೇಣಿಗೆ ಎಣಿಕೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅವಿನಾಶ್ ಶುಕ್ಲಾ ಎಂಬಾತನಿಗೆ ಲಿಂಕ್ ಆಗಿರುವ ದೊಡ್ಡ ಮೊತ್ತದ ವರ್ಗಾವಣೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಪೊಲೀಸ್ ತನಿಖೆಯ ಪ್ರಕಾರ, ಆರೋಪಿ ಅವಿನಾಶ್ ಶುಕ್ಲಾ ಕದ್ದ ಹಣವನ್ನು ತಾನೊಬ್ಬನೇ ಇಟ್ಟುಕೊಳ್ಳದೆ ತನ್ನ ಆಪ್ತರಿಗೆ ಹಂಚಿರುವುದು ಬೆಳಕಿಗೆ ಬಂದಿದೆ. ಈತ ತನ್ನ ಮಹಿಳಾ ಸ್ನೇಹಿತೆಯೊಬ್ಬಳಿಗೆ ಬರೋಬ್ಬರಿ 2 ಲಕ್ಷ ರೂಪಾಯಿ ನಗದು ಮತ್ತು ಒಂದು ಅತ್ಯಂತ ದುಬಾರಿ ಮೊಬೈಲ್ ಫೋನ್ ಅನ್ನು ಉಡುಗೊರೆಯಾಗಿ ನೀಡಿದ್ದ ಎನ್ನಲಾಗಿದೆ.
ಯೋಗ ಕೇಂದ್ರದ ರಹಸ್ಯ ಲಿಂಕ್: ಆರೋಪಿ ಅವಿನಾಶ್ ಶುಕ್ಲಾನ ಸಹೋದರ ಅಭಿಷೇಕ್ ಪೊಲೀಸರಿಗೆ ನೀಡಿರುವ ಮಾಹಿತಿ ಇಡೀ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಕೊಟ್ಟಿದೆ. ಅವಿನಾಶ್ ಮಂದಿರದ ಡ್ಯೂಟಿ ಮುಗಿದ ನಂತರ ಪ್ರತಿದಿನ ತಡರಾತ್ರಿ ಭಾರಿ ಪ್ರಮಾಣದ ನಗದನ್ನು ಚೀಲಗಳಲ್ಲಿ ತುಂಬಿಕೊಂಡು ಸ್ಥಳೀಯ ಯೋಗ ಕೇಂದ್ರವೊಂದಕ್ಕೆ ಹೋಗುತ್ತಿದ್ದನು. ಇದನ್ನು ಗಮನಿಸಿ ಸಹೋದರ ಪ್ರಶ್ನಿಸಿದಾಗ ಅವಿನಾಶ್ ಸರಿಯಾದ ಉತ್ತರ ನೀಡಿರಲಿಲ್ಲ. ನಂತರ ಈ ಬಗ್ಗೆ ಮತ್ತೊಬ್ಬ ಆರೋಪಿ ಅನುಕಲ್ಪ್ ಬಳಿ ಕೇಳಿದಾಗ, 'ಮಂದಿರಕ್ಕೆ ಬರುವ ಭಕ್ತರು ಖುಷಿಯಿಂದ ನೀಡುವ ಟಿಪ್ಸ್ ಹಾಗೂ ವಿಐಪಿ ದರ್ಶನ ಮಾಡಿಸಿಕೊಡಲು ಭಕ್ತರು ಕೊಡುವ ಹಣವಿದು' ಎಂದು ಹಾದಿ ತಪ್ಪಿಸುವ ಉತ್ತರ ನೀಡಿದ್ದ ಎನ್ನಲಾಗಿದೆ.
ಸದ್ಯ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ ಸೇರಿದಂತೆ ಎಂಟು ಆರೋಪಿಗಳು 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೀಗ ಜೈಲಿನೊಳಗೆ ಹೋಗಿ ಐದು ಪ್ರಮುಖ ಆರೋಪಿಗಳನ್ನು ಅಧಿಕೃತವಾಗಿ ವಿಚಾರಣೆ ನಡೆಸಲು ನ್ಯಾಯಾಲಯ ಪೊಲೀಸರಿಗೆ ಅನುಮತಿ ನೀಡಿದೆ.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಕೃಷ್ಣ ಮೋಹನ್ ಈಗಾಗಲೇ ಪೊಲೀಸರಿಗೆ ಅಧಿಕೃತ ಹೇಳಿಕೆ ದಾಖಲಿಸಿದ್ದಾರೆ. ಜುಲೈ ಮೂರನೇ ವಾರದಲ್ಲಿ ಟ್ರಸ್ಟ್‌ನ ಇತರ ಪ್ರಮುಖ ಸದಸ್ಯರಿಗೂ ಪೊಲೀಸರು ಸಮನ್ಸ್ ನೀಡುವ ಸಾಧ್ಯತೆಯಿದೆ. ಈ ಇಡೀ ಹಗರಣದ ಮಾಸ್ಟರ್ ಮೈಂಡ್ ಯಾರು ಎಂಬುದನ್ನು ಪತ್ತೆಹಚ್ಚಲು ಅಯೋಧ್ಯಾ ಪೊಲೀಸರು ಜಾಲ ಬೀಸಿದ್ದಾರೆ.

