Dailyhunt Logo
  • Light mode
    Follow system
    Dark mode
    • Play Story
    • App Story
ಆ..2ಕ್ಕೆ 3400 ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಪರೀಕ್ಷೆ : ಅಭ್ಯರ್ಥಿಗಳಿಗೆ ಪ್ರಮುಖ ಮಾರ್ಗಸೂಚಿಗಳು ಹೀಗಿವೆ!

ಆ..2ಕ್ಕೆ 3400 ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಪರೀಕ್ಷೆ : ಅಭ್ಯರ್ಥಿಗಳಿಗೆ ಪ್ರಮುಖ ಮಾರ್ಗಸೂಚಿಗಳು ಹೀಗಿವೆ!

ಬೆಂಗಳೂರು.ಜುಲೈ.31: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 3,400 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಆಗಸ್ಟ್ 2 ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:00 ರವರೆಗೆ ರಾಜ್ಯಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಪರೀಕ್ಷಾ ಪ್ರಕ್ರಿಯೆಯನ್ನು ಸುಗಮವಾಗಿ ಮತ್ತು ಶಾಂತಿಯುತವಾಗಿ ನಡೆಸಲು ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷಾ ಕರ್ತವ್ಯಕ್ಕಾಗಿ ಮುಖ್ಯ ಅಧೀಕ್ಷಕರು, ವೀಕ್ಷಕರು, ಮಾರ್ಗಾಧಿಕಾರಿಗಳು ಹಾಗೂ ವಿಶೇಷ ಜಾಗೃತ ದಳಗಳನ್ನು ರಚಿಸಲಾಗಿದ್ದು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ಹೊಣೆಗಾರಿಕೆ ವಹಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಹಾಗೂ ಅಭ್ಯರ್ಥಿಗಳಿಗೆ ಅನಗತ್ಯ ಕಿರಿಕಿರಿ ಉಂಟಾಗದಂತೆ ನಿಗಾ ವಹಿಸಲು ಸಿಬ್ಬಂದಿಗೆ ಖಡಕ್ ಸೂಚನೆ ನೀಡಲಾಗಿದೆ. ಪರೀಕ್ಷೆಯ ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಮೆಸ್ಕಾಂ ಅಭಿಯಂತರರಿಗೂ ಮನವಿ ಮಾಡಲಾಗಿದೆ.

ಕಟ್ಟುನಿಟ್ಟಿನ ವಸ್ತ್ರಸಂಹಿತೆ ಮತ್ತು ಪರೀಕ್ಷಾ ನಿಯಮಗಳು:

ಪರೀಕ್ಷೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ವಸ್ತ್ರಸಂಹಿತೆಯನ್ನು (Dress Code) ಜಾರಿಗೆ ತರಲಾಗಿದೆ. ಅಭ್ಯರ್ಥಿಗಳು ಉದ್ದನೆ ತೋಳಿನ ಶರ್ಟ್ ಹಾಗೂ ಶೂಗಳನ್ನು ಧರಿಸಿಕೊಂಡು ಬರುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಇದರೊಂದಿಗೆ ಎಲೆಕ್ಟ್ರಾನಿಕ್ ಉಪಕರಣಗಳು, ಕ್ಯಾಲ್ಕುಲೇಟರ್, ಸ್ಮಾರ್ಟ್‌ವಾಚ್, ಮೊಬೈಲ್ ಫೋನ್, ನೋಟ್ಸ್‌ಗಳು, ಬ್ಯಾಗ್ ಹಾಗೂ ಆಹಾರ ಮತ್ತು ಪಾನೀಯಗಳನ್ನು ಪರೀಕ್ಷಾ ಕೇಂದ್ರದೊಳಗೆ ಕೊಂಡೊಯ್ಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಪರೀಕ್ಷೆಯ ದಿನದಂದು ಅಕ್ರಮಗಳನ್ನು ತಡೆಯಲು ಕೇಂದ್ರಗಳಲ್ಲಿ ಬ್ಲೂಟೂತ್ ಜಾಮರ್‌ಗಳನ್ನು ಅಳವಡಿಸಲಾಗುವುದು. ಅಲ್ಲದೆ, ಪ್ರತಿಯೊಂದು ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದ್ದು, 144ನೇ ಕಾಯ್ದೆಯಡಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಈ ವ್ಯಾಪ್ತಿಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ಸಂಚರಿಸುವುದು, ಗುಂಪುಗೂಡುವುದು, ಮೆರವಣಿಗೆ ಅಥವಾ ಸಭೆ-ಸಮಾರಂಭಗಳನ್ನು ನಡೆಸುವುದು ನಿಷಿದ್ಧವಾಗಿದೆ. ಸುರಕ್ಷತೆಯ ಮುನ್ನೆಚ್ಚರಿಕೆಯಾಗಿ ಪರೀಕ್ಷಾ ಸಮಯದವರೆಗೆ ಕೇಂದ್ರಗಳ ಸಮೀಪದಲ್ಲಿರುವ ಜೆರಾಕ್ಸ್ ಹಾಗೂ ಸೈಬರ್ ಕೆಫೆಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಅಭ್ಯರ್ಥಿಗಳು ನಿಗದಿಪಡಿಸಿದ ಸಮಯಕ್ಕಿಂತ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರ ತಲುಪುವಂತೆ ಸೂಚಿಸಲಾಗಿದೆ. ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವಂತೆ ಕೊಠಡಿಗಳಲ್ಲಿ ಶುದ್ಧ ಗಾಳಿ, ಬೆಳಕು, ಗೋಡೆ ಗಡಿಯಾರ, ಕುಡಿಯುವ ನೀರು ಹಾಗೂ ನೈರ್ಮಲ್ಯಯುತ ಶೌಚಾಲಯದ ವ್ಯವಸ್ಥೆಯನ್ನು ಒದಗಿಸಲು ಮೇಲ್ವಿಚಾರಕರಿಗೆ ಪ್ರಾಧಿಕಾರವು ನಿರ್ದೇಶನ ನೀಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Suddione