Dailyhunt Logo
  • Light mode
    Follow system
    Dark mode
    • Play Story
    • App Story
ಅಜ್ಜಯ್ಯನ ಮಠದ ಮಾರ್ಗದರ್ಶನದಲ್ಲೇ ಡಿಕೆಶಿಯ ಸಿಎಂ ಪಯಣ: ಯಾರು ಈ ಅಜ್ಜಯ್ಯ ?

ಅಜ್ಜಯ್ಯನ ಮಠದ ಮಾರ್ಗದರ್ಶನದಲ್ಲೇ ಡಿಕೆಶಿಯ ಸಿಎಂ ಪಯಣ: ಯಾರು ಈ ಅಜ್ಜಯ್ಯ ?

ಸುದ್ದಿಒನ್, ಬೆಂಗಳೂರು, ಜೂನ್. 03 : ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಇಂದು ಪ್ರಮಾಣವಚನ ಸ್ವೀಕರಿಸಿದ್ದು, ಪ್ರತಿಜ್ಞಾವಿಧಿ ವೇಳೆ ನಡೆದ ಒಂದು ವಿಶೇಷ ಸಂಗತಿ ಎಲ್ಲರ ಗಮನ ಸೆಳೆದಿದೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಂದ ಪ್ರಮಾಣವಚನ ಸ್ವೀಕರಿಸಿದ ಡಿಕೆ ಶಿವಕುಮಾರ್, ತಮ್ಮ ಆರಾಧ್ಯ ದೈವವಾದ ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ಮಾಡಿದರು.

ರಾಜಕೀಯ ಜೀವನದ ಅತ್ಯಂತ ಮಹತ್ವದ ಕ್ಷಣದಲ್ಲಿ ತಮ್ಮ ನಂಬಿಕೆಯ ಕೇಂದ್ರವಾಗಿರುವ ಅಜ್ಜಯ್ಯನನ್ನು ಸ್ಮರಿಸಿದ ಡಿಕೆಶಿ, ಪ್ರಮಾಣವಚನ ಸಮಾರಂಭಕ್ಕೂ ಮುನ್ನ ವೇದಿಕೆಯಲ್ಲಿ ಇರಿಸಲಾಗಿದ್ದ ಅಜ್ಜಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕವೇ ಅವರು ಮುಖ್ಯಮಂತ್ರಿ ಹುದ್ದೆಯ ಪ್ರಮಾಣವಚನ ಸ್ವೀಕರಿಸಿದರು.

ಈ ಪದಗ್ರಹಣ ಸಮಾರಂಭದ ದಿನಾಂಕ ಮತ್ತು ಸಮಯವೂ ಅಜ್ಜಯ್ಯನ ಮಠದ ಸೂಚನೆಯಂತೆ ನಿಗದಿಯಾಗಿತ್ತು ಎನ್ನಲಾಗಿದೆ. ಮುಖ್ಯಮಂತ್ರಿ ಹುದ್ದೆಗೇರಿದ ಪ್ರಕ್ರಿಯೆಯುದ್ದಕ್ಕೂ ಅಜ್ಜಯ್ಯನ ಮಠದ ಪೀಠಾಧ್ಯಕ್ಷರಾದ ಡಾ. ಕರಿವೃಷಭ ಶಿವಯೋಗೀಶ್ವರ ಶ್ರೀಗಳ ಮಾರ್ಗದರ್ಶನವನ್ನು ಡಿಕೆ ಶಿವಕುಮಾರ್ ಅನುಸರಿಸಿದ್ದಾರೆ ಎಂದು ಅವರ ಆಪ್ತ ವಲಯ ತಿಳಿಸಿದೆ.

ಪ್ರಮಾಣವಚನದ ಮುನ್ನಾದಿನವಾದ ಮಂಗಳವಾರ ರಾತ್ರಿ ಕೂಡ ಡಿಕೆ ಶಿವಕುಮಾರ್ ಕುಟುಂಬ ಸಮೇತರಾಗಿ ಬೆಂಗಳೂರಿನ ನಾಗರಭಾವಿಯಲ್ಲಿರುವ ಅಜ್ಜಯ್ಯನ ಶಾಖಾ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಅಲ್ಲಿಯೇ ತಡರಾತ್ರಿವರೆಗೂ ಕಾಲ ಕಳೆದಿದ್ದ ಅವರು, ಆಶೀರ್ವಾದ ಪಡೆದು ಬಳಿಕ ಮುಂದಿನ ಕಾರ್ಯಕ್ರಮಗಳಿಗೆ ಸಿದ್ಧತೆ ನಡೆಸಿದ್ದರು.

ಎಲ್ಲಿದೆ ಅಜ್ಜಯ್ಯನ ಮಠ?
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿರುವ ಸೋಮೇಕಟ್ಟೆ ಶ್ರೀ ಕಾಡಸಿದ್ದೇಶ್ವರ ಮಠ, ಜನಪ್ರಿಯವಾಗಿ ‘ಅಜ್ಜಯ್ಯನ ಮಠ’ ಎಂದೇ ಪ್ರಸಿದ್ಧಿ ಪಡೆದಿದೆ. ಐತಿಹಾಸಿಕ ಮತ್ತು ಆಧ್ಯಾತ್ಮಿಕ ಮಹತ್ವ ಹೊಂದಿರುವ ಈ ಮಠ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ.
ಅಜ್ಜಯ್ಯನ ಮಠವು ಹಲವು ರಾಜಕೀಯ ನಾಯಕರು, ಉದ್ಯಮಿಗಳು ಹಾಗೂ ಸಾರ್ವಜನಿಕರ ನಂಬಿಕೆಯ ಕೇಂದ್ರವಾಗಿದ್ದು, ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಈ ಮಠದ ಭಕ್ತರಾಗಿದ್ದಾರೆ. ಮುಖ್ಯಮಂತ್ರಿ ಪದಗ್ರಹಣದಂತಹ ಮಹತ್ವದ ಸಂದರ್ಭದಲ್ಲಿ ಅಜ್ಜಯ್ಯನನ್ನು ಸ್ಮರಿಸಿರುವುದು ಡಿಕೆಶಿ ಅವರ ಭಕ್ತಿ ಮತ್ತು ಆಧ್ಯಾತ್ಮಿಕ ನಂಟನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Suddione