Dailyhunt Logo
  • Light mode
    Follow system
    Dark mode
    • Play Story
    • App Story
ಅಮೆರಿಕದಿಂದ ವಾಪಸ್‌ ಬಂದ ಬಳಿಕ ಸ್ಫೋಟಕ ವಿಚಾರ ಬಹಿರಂಗ: 'ದೇಶವೇ ಅಲ್ಲೋಲ ಕಲ್ಲೋಲ ಆಗುತ್ತೆ' ಎಂದ ಹೆಚ್‌ಡಿಕೆ

ಅಮೆರಿಕದಿಂದ ವಾಪಸ್‌ ಬಂದ ಬಳಿಕ ಸ್ಫೋಟಕ ವಿಚಾರ ಬಹಿರಂಗ: 'ದೇಶವೇ ಅಲ್ಲೋಲ ಕಲ್ಲೋಲ ಆಗುತ್ತೆ' ಎಂದ ಹೆಚ್‌ಡಿಕೆ

ಬೆಂಗಳೂರು, ಆ.30: ಅಕ್ಕ ಸಮ್ಮೇಳನದ ಹಿನ್ನೆಲೆಯಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳುತ್ತಿರುವ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಪ್ರವಾಸದಿಂದ ಮರಳಿದ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುವ ಹಲವು ವಿಚಾರಗಳನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, "ಅಮೆರಿಕದಿಂದ ಬಂದ ಬಳಿಕ ದೇಶವೇ ಅಲ್ಲೋಲ ಕಲ್ಲೋಲ ಆಗುವಂತಹ ವಿಚಾರವನ್ನು ಹೇಳುತ್ತೇನೆ.

ಪ್ರಾಮಾಣಿಕವಾಗಿ ಜನರ ಮುಂದೆ ಹಲವು ದಾಖಲೆಗಳನ್ನು ಇಡುತ್ತೇನೆ. ದಿನಕ್ಕೊಂದು ಸುದ್ದಿ ನೀಡುತ್ತೇನೆ. ಆಗ ಎಚ್‌.ಡಿ. ಕುಮಾರಸ್ವಾಮಿ ಯಾರು ಎಂಬುದು ಗೊತ್ತಾಗುತ್ತದೆ" ಎಂದು ಹೇಳಿದರು.

ಕೆಪಿಎಸ್‌ಸಿ ಅಕ್ರಮಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಮುಖ್ಯಮಂತ್ರಿ ನೀಡಿದ್ದ ಉತ್ತರದ ದಾಖಲೆಗಳನ್ನು ಬಿಡುಗಡೆ ಮಾಡಿದ ಕುಮಾರಸ್ವಾಮಿ, ಪರೀಕ್ಷೆಯಲ್ಲಿನ ಅಕ್ರಮದ ಆರೋಪಗಳ ಬಗ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು."ಆರ್ಡರ್‌ ಕಾಪಿ ನೀಡಬೇಡಿ ಎಂದು ಕೆಪಿಎಸ್‌ಸಿ ಕಾರ್ಯದರ್ಶಿಯೇ ಹೇಳಿದ್ದರು. ಆದರೂ ಸರ್ಕಾರ ಈ ವಿಚಾರದಲ್ಲಿ ಯಾವುದೇ ಮೇಲ್ಮನವಿ ಸಲ್ಲಿಸಿಲ್ಲ. ನೀವು ಯಾರನ್ನು ರಕ್ಷಿಸಲು ಮುಂದಾಗಿದ್ದೀರಿ? OMR ತಿದ್ದಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಕಾಪಾಡುತ್ತಿದ್ದೀರಾ?" ಎಂದು ಪ್ರಶ್ನಿಸಿದರು.
ಕೆಪಿಎಸ್‌ಸಿ ಸಂಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ನಂಬಿಕೆ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ ಅವರು, ಸಂಸ್ಥೆಯನ್ನು ಶುದ್ಧೀಕರಿಸುವ ಉದ್ದೇಶದಿಂದ ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. ಆದರೆ ಇದೀಗ ಕೆಪಿಎಸ್‌ಸಿ ವ್ಯವಸ್ಥೆ ಹದಗೆಟ್ಟಿದೆ ಎಂದು ಟೀಕಿಸಿದರು.

ತಾವು ಮುಖ್ಯಮಂತ್ರಿಯಾಗಿದ್ದ ಅವಧಿ ಕಡಿಮೆಯಾಗಿದ್ದರೂ, ಕಾನೂನುಬಾಹಿರವಾಗಿ ಯಾವುದೇ ಸೂಚನೆ ನೀಡಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು."ಕಾನೂನು ಮೀರಿ ಯಾರನ್ನೂ ರಕ್ಷಿಸುವಂತೆ ನಾನು ಸೂಚನೆ ನೀಡಿಲ್ಲ. ನಾನು ಸಿಎಂ ಆಗಿದ್ದಾಗ ದಲಿತ ಸಮುದಾಯದ ವ್ಯಕ್ತಿಯನ್ನು ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ಮಾಡಿದ್ದೆ. ನನ್ನ ಸಂಬಂಧಿಕರು ಅಥವಾ ಆಪ್ತರನ್ನು ಆ ಸ್ಥಾನಕ್ಕೆ ನೇಮಕ ಮಾಡಿರಲಿಲ್ಲ" ಎಂದು ಹೇಳಿದರು.ಕೆಪಿಎಸ್‌ಸಿ ಬಗ್ಗೆ ಸಾರ್ವಜನಿಕರಲ್ಲಿ ಅಸಹ್ಯಕರ ಭಾವನೆ ಮೂಡಿದೆ ಎಂದು ಆರೋಪಿಸಿದ ಅವರು, ಪ್ರಶ್ನೆಪತ್ರಿಕೆ ಸೋರಿಕೆಯಾದ ಸಂದರ್ಭದಲ್ಲೂ ತಾವು ಅದರ ವಿರುದ್ಧ ಧ್ವನಿ ಎತ್ತಿದ್ದಾಗಿ ತಿಳಿಸಿದರು.

ತಮ್ಮ ವಿರುದ್ಧ ಎಷ್ಟೇ ಟೀಕೆಗಳು ಬಂದರೂ ಸಮರ್ಥವಾಗಿ ಉತ್ತರಿಸುವುದಾಗಿ ಹೇಳಿದ ಕುಮಾರಸ್ವಾಮಿ, "ಬೇರೆಯವರಂತೆ ಪಲಾಯನ ಮಾಡುವುದಿಲ್ಲ. ಏನೇ ಬಂದರೂ ಒಬ್ಬನೇ ನಿಂತು ಎದುರಿಸುತ್ತೇನೆ. ನನ್ನ ಪರವಾಗಿ ಹೇಳಿಕೆ ನೀಡುವಂತೆ ಯಾರಿಗೂ ಹೇಳುವುದಿಲ್ಲ" ಎಂದು ಕಿಡಿಕಾರಿದರು.

Dailyhunt
Disclaimer: This content has not been generated, created or edited by Dailyhunt. Publisher: Suddione