ದಾವಣಗೆರೆ: ಝೀರೋ ಟ್ರಾಫಿಕ್ ನಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗುತ್ತಿದ್ದ ಮೂರು ತಿಂಗಳ ಮುಗ್ಧ ಹೆಣ್ಣು ಮಗುವೊಂದು ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದ ದಾರುಣ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ದಾವಣಗೆರೆಯ ಬಾಪೂಜಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 3 ತಿಂಗಳ ಹೆಣ್ಣು ಮಗುವಿನ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿತ್ತು.
ವೈದ್ಯರ ಸಲಹೆಯಂತೆ ಮಗುವನ್ನು ತಕ್ಷಣವೇ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ರವಾನಿಸಲು ನಿರ್ಧರಿಸಲಾಗಿತ್ತು. ಪ್ರಯಾಣದ ಸಮಯವನ್ನು ಉಳಿಸಿ ಮಗುವಿನ ಪ್ರಾಣ ರಕ್ಷಿಸುವ ನಿಟ್ಟಿನಲ್ಲಿ ತುರ್ತಾಗಿ 'ಝೀರೋ ಟ್ರಾಫಿಕ್' ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.
ಆಂಬುಲೆನ್ಸ್ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೆಚ್.ಕಡದಕಟ್ಟೆ ಗ್ರಾಮದ ಬಳಿ ಸಂಚರಿಸುತ್ತಿದ್ದಾಗ ಹಠಾತ್ತಾಗಿ ಆಂಬುಲೆನ್ಸ್‌ನ ಟೈರ್ ಸ್ಪೋಟಗೊಂಡಿದೆ. ಘಟನೆಯನ್ನು ಗಮನಿಸಿದ ತಕ್ಷಣವೇ ಸ್ಥಳೀಯ ನಿವಾಸಿಗಳು ಓಡಿಬಂದು ಆಂಬುಲೆನ್ಸ್ ಟೈರ್ ಬದಲಾಯಿಸಲು ಸಹಾಯ ಮಾಡಿದರು. ಆದರೆ, ದುರದೃಷ್ಟವಶಾತ್ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಮಗು ಮಾರ್ಗಮಧ್ಯದಲ್ಲೇ ಪ್ರಾಣ ಬಿಟ್ಟಿದೆ.





