Dailyhunt Logo
  • Light mode
    Follow system
    Dark mode
    • Play Story
    • App Story
ಎಥೆನಾಲ್ ಮಿಶ್ರಿತ E20 ಪೆಟ್ರೋಲ್ ಬಳಕೆಯ ಬಗ್ಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟನೆ

ಎಥೆನಾಲ್ ಮಿಶ್ರಿತ E20 ಪೆಟ್ರೋಲ್ ಬಳಕೆಯ ಬಗ್ಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟನೆ

ದೆಹಲಿ.ಜುಲೈ.31: ದೇಶದಲ್ಲಿ ಇಥನಾಲ್ ಮಿಶ್ರಿತ E20 ಪೆಟ್ರೋಲ್ ಬಳಕೆಯಿಂದ ವಾಹನಗಳ ಇಂಜಿನ್ ಹಾಳಾಗುತ್ತದೆ ಹಾಗೂ ಮೈಲೇಜ್ ಕಡಿಮೆಯಾಗುತ್ತದೆ ಎಂಬ ಹರಿದಾಡುತ್ತಿರುವ ವದಂತಿಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ವೈಜ್ಞಾನಿಕ ಆಧಾರಗಳು ಹಾಗೂ ಕೋಟ್ಯಂತರ ವಾಹನಗಳ ತಾಂತ್ರಿಕ ದತ್ತಾಂಶಗಳನ್ನು (ಡೇಟಾ) ಪರಿಶೀಲಿಸಿದ ನಂತರ E20 ಇಂಧನ ಬಳಕೆಯಿಂದ ವಾಹನದ ಇಂಜಿನ್‌ಗೆ ಯಾವುದೇ ಅಪಾಯವಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.

ಕಳೆದ ಎರಡೂವರೆ ವರ್ಷಗಳಿಂದ ದೇಶದಲ್ಲಿ E19-E20 ಪೆಟ್ರೋಲ್ ಬಳಕೆಯಲ್ಲಿದೆ. ಈ ಅವಧಿಯಲ್ಲಿ ಇಥನಾಲ್‌ನಿಂದಾಗಿ ಯಾವುದೇ ವಾಹನದ ಇಂಜಿನ್ ಹಾಳಾಗಿದೆ ಎಂಬುದು ಸಾಬೀತಾಗಿಲ್ಲ.ದೇಶದಲ್ಲಿ ಪ್ರತಿದಿನ ಸುಮಾರು 8 ಕೋಟಿ ವಾಹನಗಳು ಪೆಟ್ರೋಲ್ ಬಂಕ್‌ಗಳಿಗೆ ಭೇಟಿ ನೀಡುತ್ತಿವೆ.ಇದುವರೆಗೆ 20 ಕೋಟಿಗೂ ಹೆಚ್ಚು ದ್ವಿಚಕ್ರ ವಾಹನಗಳು ಮತ್ತು 3 ಕೋಟಿಗೂ ಹೆಚ್ಚು ಕಾರುಗಳು ಈ ಇಂಧನದಿಂದ ಯಶಸ್ವಿಯಾಗಿ ಚಲಿಸುತ್ತಿವೆ.

ಮಾರುತಿ ಸುಜುಕಿ ಕಂಪನಿಯು 2025-26ರ ಹಣಕಾಸು ವರ್ಷದಲ್ಲಿ ಸರ್ವೀಸ್ ಮಾಡಿದ 2.84 ಕೋಟಿ ವಾಹನಗಳ ಪೈಕಿ, E20 ಪ್ರಮಾಣಪತ್ರವಿಲ್ಲದ 1.5 ಕೋಟಿ ಹಳೆಯ ವಾಹನಗಳಲ್ಲೂ ಇಂಜಿನ್‌ಗೆ ತೂತು ಬೀಳುವುದು ಅಥವಾ ಭಾಗಗಳು ಸವೆಯುವುದು ಕಂಡುಬಂದಿಲ್ಲ.

ಮೈಲೇಜ್ ಮೇಲೇನು ಪರಿಣಾಮ?

E20 ಇಂಧನದಿಂದಾಗಿ ಕೆಲವು ಹಳೆಯ ವಾಹನಗಳಲ್ಲಿ ಮೈಲೇಜ್ ಶೇ. 3 ರಿಂದ 5 ರಷ್ಟು ಮಾತ್ರ ಕಡಿಮೆಯಾಗಬಹುದು. ಆದರೆ ಮೈಲೇಜ್ ಕೇವಲ ಇಂಧನದ ಮೇಲಷ್ಟೇ ಆಧಾರಿತವಾಗಿರುವುದಿಲ್ಲ; ವಾಹನ ಚಾಲನೆ ಮಾಡುವ ರೀತಿ, ಟ್ರಾಫಿಕ್, ಟೈರ್ ಗಾಳಿಯ ಒತ್ತಡ ಹಾಗೂ ವಾಹನದ ನಿರ್ವಹಣೆ (ಮೇಂಟನೆನ್ಸ್) ಮೇಲೆಯೂ ನಿರ್ಭರವಾಗಿರುತ್ತದೆ.

E20 ನ ಪ್ರಮುಖ ಅನುಕೂಲಗಳು:

ಹೆಚ್ಚಿನ ಆಕ್ಟೇನ್ ರೇಟಿಂಗ್ (Octane Rating)

ಸುಗಮ ಇಂಜಿನ್ ಕಾರ್ಯಕ್ಷಮತೆ (Smooth Performance)

ಉತ್ತಮ ಆಕ್ಸಿಲರೇಷನ್

ಪರಿಸರ ಮಾಲಿನ್ಯದಲ್ಲಿ ಗಣನೀಯ ಇಳಿಕೆ

ಸರ್ಕಾರ ಒತ್ತಡ ಹೇರುತ್ತಿರುವುದರಿಂದ ವಾಹನ ತಯಾರಿಕಾ ಸಂಸ್ಥೆಗಳು E20ಗೆ ಒಪ್ಪಿಕೊಂಡಿವೆ” ಎಂಬ ಆರೋಪವನ್ನೂ ಕೇಂದ್ರ ತಳ್ಳಾಕಿದೆ. ಟೊಯೋಟಾ, ಮಾರುತಿ ಸುಜುಕಿ, ಹೀರೋ ಮೋಟೋಕಾರ್ಪ್, ಹ್ಯುಂಡೈ, ಟಿವಿಎಸ್ ಮತ್ತು ಬಜಾಜ್ ಆಟೋದಂತಹ ದೈತ್ಯ ಕಂಪನಿಗಳು ಮಾಧ್ಯಮ ಗೋಷ್ಠಿ ನಡೆಸಿ E20 ಬಳಕೆಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ಜೊತೆಗೆ UNECE ಅಂತರರಾಷ್ಟ್ರೀಯ ಮಾನದಂಡಗಳ ಪ್ರಕಾರ ಕಠಿಣ ಪರೀಕ್ಷೆ ನಡೆಸಿಯೇ E20 ಇಂಧನವನ್ನು ಪರಿಚಯಿಸಲಾಗಿದೆ. E20 ಬಳಸುವ ವಾಹನಗಳಿಗೆ ಕಂಪನಿಗಳು ಎಂದಿನಂತೆ ವಾರಂಟಿ ನೀಡಲಿವೆ.

ವದಂತಿಗಳನ್ನು ನಂಬಬೇಡಿ!

2013-14 ರಲ್ಲಿ ಪೆಟ್ರೋಲ್‌ನಲ್ಲಿ ಇಥನಾಲ್ ಪ್ರಮಾಣ ಕೇವಲ ಶೇ. 1.53 ರಷ್ಟಿತ್ತು. ಅದನ್ನು ಹಂತ ಹಂತವಾಗಿ ಹೆಚ್ಚಿಸಿ 2025-26ರ ವೇಳೆಗೆ ಶೇ. 20 ಕ್ಕೆ (E20) ತಲುಪಿಸಲಾಗಿದೆ. ತೈಲ ಕಂಪನಿಗಳು ದೇಶಾದ್ಯಂತ 30,000ಕ್ಕೂ ಹೆಚ್ಚು ರಿಟೇಲ್ ಔಟ್‌ಲೆಟ್‌ಗಳಲ್ಲಿ ಗುಣಮಟ್ಟ ತನಿಖೆ ನಡೆಸುತ್ತಿದ್ದು, BIS ಮಾನದಂಡಗಳಿಗೆ ಬದ್ಧವಾಗಿ ಇಂಧನ ಪೂರೈಸುತ್ತಿವೆ.

ಆದ್ದರಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಯಾವುದೇ ಆಧಾರರಹಿತ ವದಂತಿಗಳನ್ನು ಸಾರ್ವಜನಿಕರು ನಂಬಬಾರದು, E20 ಸಂಪೂರ್ಣ ಸುರಕ್ಷಿತ ಹಾಗೂ ಪರಿಸರಸ್ನೇಹಿ ಇಂಧನವಾಗಿದೆ ಎಂದು ಸರ್ಕಾರ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Suddione