Dailyhunt Logo
  • Light mode
    Follow system
    Dark mode
    • Play Story
    • App Story
ಹಿರಿಯೂರು ಬೈಎಲೆಕ್ಷನ್: ಸಣ್ಣ ಚಿತ್ತಯ್ಯಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಮುಂದುವರಿದ ಶಕ್ತಿ ಪ್ರದರ್ಶನ

ಹಿರಿಯೂರು ಬೈಎಲೆಕ್ಷನ್: ಸಣ್ಣ ಚಿತ್ತಯ್ಯಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಮುಂದುವರಿದ ಶಕ್ತಿ ಪ್ರದರ್ಶನ

ಸುದ್ದಿಒನ್, ಹಿರಿಯೂರು, ಆಗಸ್ಟ್. 28 : ಮುಂಬರುವ ಹಿರಿಯೂರು ವಿಧಾನಸಭಾ ಉಪಚುನಾವಣೆಯಲ್ಲಿ ಹಿಂದುಳಿದ ಕಾಡುಗೊಲ್ಲ ಸಮುದಾಯದ ಪ್ರಮುಖರಾದ, ವಿಶ್ವೇಶ್ವರಯ್ಯ ಜಲನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಪಕ್ಷದ ವೀಕ್ಷಕರೆದುರು ಮುಖಂಡರು ಹಾಗೂ ಕಾರ್ಯಕರ್ತರು ಬೃಹತ್ ಶಕ್ತಿ ಪ್ರದರ್ಶನದೊಂದಿಗೆ ಆಗ್ರಹಿಸಿದರು.

​ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಕುಂದು-ಕೊರತೆಗಳ ಪರಿಶೀಲನೆಗಾಗಿ ನಗರಕ್ಕೆ ಆಗಮಿಸಿದ್ದ ಎಐಸಿಸಿ/ಕೆಪಿಸಿಸಿ ವೀಕ್ಷಕ ಹಾಗೂ ವಿಧಾನ ಪರಿಷತ್ ಸದಸ್ಯ ಪಿ.ವಿ. ಮೋಹನ್ ಅವರನ್ನು ನಗರದ ರಂಜಿತಾ ಹೋಟೆಲ್ ಮುಂಭಾಗ ನೂರಾರು ಮುಖಂಡರು ಮತ್ತು ಸಾವಿರಾರು ಅಭಿಮಾನಿಗಳು ಭೇಟಿಯಾದರು. ಈ ವೇಳೆ ಸಣ್ಣ ಚಿತ್ತಯ್ಯ ಅವರ ಪರ ಘೋಷಣೆ ಕೂಗಿ, ಅವರ ಭಾವಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಟಿಕೆಟ್ ನೀಡುವಂತೆ ಬಲವಾಗಿ ಒತ್ತಾಯಿಸಿದರು.

ಕಾಡುಗೊಲ್ಲರಿಗೆ ರಾಜಕೀಯ ಪ್ರಾತಿನಿಧ್ಯ ಕೂಗು : ಹಿರಿಯೂರು ಕ್ಷೇತ್ರದಲ್ಲಿ 50 ಸಾವಿರಕ್ಕೂ ಅಧಿಕ ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 3.5 ಲಕ್ಷ ಕಾಡುಗೊಲ್ಲ ಸಮುದಾಯದ ಮತದಾರರಿದ್ದಾರೆ. ಕಳೆದ 50 ವರ್ಷಗಳಿಂದ ಈ ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಹಿರಿಯೂರು ಮಾತ್ರವಲ್ಲದೆ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಡುಗೊಲ್ಲ ಸಮುದಾಯ ಪ್ರಮುಖ ಪಾತ್ರ ವಹಿಸುತ್ತದೆ. ಮಧ್ಯ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಕಾಡುಗೊಲ್ಲರ ಮತಗಳು ನಿರ್ಣಾಯಕವಾಗಿವೆ. ಸಣ್ಣ ಚಿತ್ತಯ್ಯ ಅವರಿಗೆ ಟಿಕೆಟ್ ನೀಡಿದರೆ ಮಧ್ಯ ಕರ್ನಾಟಕ ಭಾಗದ ಸೇರಿದಂತೆ ಸುಮಾರು 20 ವಿಧಾನಸಭಾ ಹಾಗೂ 2 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ನಿಶ್ಚಿತ ಎಂದು ಮುಖಂಡರು ವೀಕ್ಷಕರಿಗೆ ಮನವರಿಕೆ ಮಾಡಿಕೊಟ್ಟರು.

​ಇದೇ ವೇಳೆ ಮುಖಂಡ ಕೆ.ಆರ್. ಹಳ್ಳಿ ರವಿ ಮಾತನಾಡಿ, ಕಾಡುಗೊಲ್ಲ ಜನಾಂಗದ ಜೊತೆಗೆ, ಮಾದಿಗರು, ಒಕ್ಕಲಿಗರು ಸೇರಿದಂತೆ ಇತರೆ ಹಿಂದುಳಿದ ಸಮುದಾಯದ ಮತಗಳು ಸಣ್ಣಚಿತ್ತಯ್ಯ ಅವರ ಬೆಂಬಲಕ್ಕೆ ನಿಂತಿದ್ದಾರೆ. ಅಲ್ಲದೆ ಹಿರಿಯೂರು ಕ್ಷೇತ್ರದ ಅಭಿವೃದ್ಧಿಗೆ ಅಪಾರವಾದ ಕನಸು ಹೊಂದಿದ್ದಾರೆ. ಅದರಲ್ಲೂ, ಬರದ ನಾಡು ಹಿರಿಯೂರಿನ ನೀರಾವರಿ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಲಿದ್ದಾರೆ.
ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿದ್ರೆ ಮುಂಬರುವ 2028ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಬರಲಿದೆ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಈ ಉಪಚುನಾವಣೆಯಲ್ಲಿ ಕಾಡುಗೊಲ್ಲ ಸಮುದಾಯದ ಸಣ್ಣ ಚಿತ್ತಯ್ಯ ಅವರಿಗೆ ಪಕ್ಷದ ಅಭ್ಯರ್ಥಿಯಾಗಿ ಅವಕಾಶ ನೀಡಬೇಕು, ಎಂದು ಒತ್ತಾಯಿಸಿದರು.

​ಈ ವೇಳೆ ಕಾಂಗ್ರೆಸ್ ಪ್ರಮುಖರಾದ ವಕೀಲ ಯತೀಶ್, ಎಸ್.ಆರ್. ತಿಪ್ಪೇಸ್ವಾಮಿ, ತಿಮ್ಮರಾಯಪ್ಪ, ಮಹೇಶ್, ಎಸ್.ಟಿ ಮಂಜುನಾಥ್, ಗುರುಮೂರ್ತಿ, ಖಾಲಿದ್ ಹುಸೇನ್, ಪುಟ್ಟರಾಜು, ನಾಯಿದ್, ನೌಶಾದ್, ಬಿಕೆ. ಉಗ್ರಮೂರ್ತಿ, ಕೇಶವಮೂರ್ತಿ, ಪೆರಿಸ್ವಾಮಿ, ಕೃಷ್ಣಮೂರ್ತಿ, ಕೃಷ್ಣಾಪುರ ಅರಳಿಕೆರೆ ಕೃಷ್ಣಮೂರ್ತಿ, ಹನುಮಂತರಾಯ, ಚಿದಾನಂದ ಗೌಡ, ಕೂನಿಕೆರೆ ತಿಮ್ಮರಾಯಪ್ಪ, ಕೋಡಿಹಳ್ಳಿ ತಿಪ್ಪೇಸ್ವಾಮಿ, ಗೊಲ್ಲಹಳ್ಳಿ ಹನುಮಂತಪ್ಪ, ಜಿಎಲ್. ಮೂರ್ತಿ, ಪ್ರದೀಪ್, ಪಿಆರ್. ದಾಸ್, ರಂಗಸ್ವಾಮಿ, ಸೇರಿದಂತೆ ಸಣ್ಣ ಚಿತ್ತಯ್ಯ ಅವರ ನೂರಾರು ಬೆಂಬಲಿಗರು ಉಪಸ್ಥಿತರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Suddione