Dailyhunt Logo
  • Light mode
    Follow system
    Dark mode
    • Play Story
    • App Story
ಹಿರಿಯೂರು:ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ವಿರೋಧಿಸಿ ತಹಸಿಲ್ದಾರ್‌ ಗೆ ಪೋಷಕರು, ವಿದ್ಯಾರ್ಥಿಗಳಿಂದ ಮನವಿ

ಹಿರಿಯೂರು:ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ವಿರೋಧಿಸಿ ತಹಸಿಲ್ದಾರ್‌ ಗೆ ಪೋಷಕರು, ವಿದ್ಯಾರ್ಥಿಗಳಿಂದ ಮನವಿ

ಸುದ್ದಿಒನ್, ಹಿರಿಯೂರು, ಜೂನ್‌. 01 : ಇಲ್ಲಿನ ಬಬ್ಬೂರ್ ಫಾರಂ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಇಂದು ಹಮ್ಮಿಕೊಂಡಿದ್ದ ಕೃಷಿ ಪ್ರಾಯೋಗಿಕ ಮರು ಪರೀಕ್ಷೆಯಲ್ಲಿ ಭಾರಿ ಗೊಂದಲ ಏರ್ಪಟ್ಟಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ದೊಡ್ಡ ಅನ್ಯಾಯವಾಗಿದೆ ಎಂದು ಆರೋಪಿಸಿ ಹಿರಿಯೂರು ತಾಲ್ಲೂಕು ತಹಸಿಲ್ದಾರ್ ಹಾಗೂ ದಂಡಾಧಿಕಾರಿಗಳಿಗೆ ಜಂಟಿ ಮನವಿ ಸಲ್ಲಿಸಲಾಗಿದೆ.

ವಿಶ್ವವಿದ್ಯಾಲಯದ ಈ ಗೊಂದಲಕಾರಿ ನಿರ್ಧಾರವನ್ನು ಖಂಡಿಸಿರುವ ಪೋಷಕರು ಮತ್ತು ವಿದ್ಯಾರ್ಥಿಗಳು, ಇಂದು ನಡೆಯುತ್ತಿರುವ ಮರು ಪರೀಕ್ಷೆಯನ್ನು ತಕ್ಷಣವೇ ಪರಿಶೀಲಿಸಿ ರದ್ದುಗೊಳಿಸಬೇಕು ಮತ್ತು ಈ ಹಿಂದೆ ಯಶಸ್ವಿಯಾಗಿ ನಡೆದಿದ್ದ ಪರೀಕ್ಷೆಯ ಫಲಿತಾಂಶವನ್ನೇ ಅಧಿಕೃತವಾಗಿ ಚಾಲ್ತಿಗೆ ತರಬೇಕು ಎಂದು ಕಟ್ಟುನಿಟ್ಟಿನ ಆಗ್ರಹ ಮಾಡಿದ್ದಾರೆ.
ಒಂದು ವೇಳೆ ಈ ಹಿಂದೆ ನಡೆದಿದ್ದ ಪರೀಕ್ಷೆಯಲ್ಲಿ ಏನಾದರೂ ಲೋಪದೋಷಗಳು ಅಥವಾ ಅಕ್ರಮಗಳು ನಡೆದಿದ್ದರೆ, ಅವುಗಳನ್ನು ಮುಚ್ಚಿಡದೆ ಪೋಷಕರು ಮತ್ತು ವಿದ್ಯಾರ್ಥಿಗಳ ಮುಂದೆ ಕೂಲಂಕುಶವಾಗಿ ಪ್ರದರ್ಶಿಸಬೇಕು. ತಪ್ಪುಗಳನ್ನು ಸಾಕ್ಷಿ ಸಮೇತ ಬಹಿರಂಗಪಡಿಸಿ, ತದನಂತರವಷ್ಟೇ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ ಮನವಿಯಲ್ಲಿ ಪ್ರಮುಖವಾಗಿ ಈ ಹಿಂದೆ ನಡೆದಿದ್ದ ಕೃಷಿ ಪ್ರಾಯೋಗಿಕ ಪರೀಕ್ಷೆಯ ಹಾಲ್ ಟಿಕೆಟ್‌ಗಳನ್ನು ರದ್ದು ಮಾಡದೇ, ಅದೇ ಹಳೆಯ ಹಾಲ್ ಟಿಕೆಟ್‌ಗಳ ಆಧಾರದ ಮೇಲೆ ಇಂದು ಮರು ಪರೀಕ್ಷೆ ನಡೆಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಈ ಕೃಷಿ ಪ್ರಾಯೋಗಿಕ ಪರೀಕ್ಷೆಯನ್ನು ಬಬ್ಬೂರ್ ಫಾರಂ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಮಾತ್ರ ನಡೆಸಲಾಗುತ್ತಿದೆ. ರಾಜ್ಯದ ಬೇರೆ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಇಂತಹ ಮರು ಪರೀಕ್ಷೆ ನಡೆಸುತ್ತಿಲ್ಲ. ಇದಕ್ಕೆ ಕೇವಲ ಬಬ್ಬೂರ್ ಫಾರಂ ಅನ್ನು ಮಾತ್ರ ಗುರಿ ಮಾಡಿರುವುದರ ಹಿಂದಿನ ಅಸಲಿ ಕಾರಣವನ್ನು ವಿಶ್ವವಿದ್ಯಾಲಯ ಪ್ರಕಟಿಸಬೇಕು ಎಂದು ಪೋಷಕರು ಪಟ್ಟು ಹಿಡಿದಿದ್ದಾರೆ.

ಹಗಲಿರುಳು ಕಷ್ಟಪಟ್ಟು ಓದುವ ರೈತರ ಮಕ್ಕಳು ಹಾಗೂ ಇತರೆ ಸಾಮಾನ್ಯ ವಿದ್ಯಾರ್ಥಿಗಳ ಭವಿಷ್ಯದ ಜೊತೆ ವಿಶ್ವವಿದ್ಯಾಲಯವು ಈ ರೀತಿ ಚೆಲ್ಲಾಟವಾಡಬಾರದು. ಈ ಹಿಂದೆ ನಡೆದ ಪರೀಕ್ಷಾ ಫಲಿತಾಂಶವನ್ನೇ ಪರಿಗಣಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಹಿರಿಯೂರು ತಾಲ್ಲೂಕು ದಂಡಾಧಿಕಾರಿಗಳಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳು ಅತ್ಯಂತ ಕಳಕಳಿಯಿಂದ ಮನವಿ ಮಾಡಿಕೊಂಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Suddione