Dailyhunt
ಇಒ ಪ್ರಕಾಶ್ ವಿರುದ್ಧ ಕ್ರಮಕ್ಕೆ ಆಗ್ರಹ; ಜಿಪಂಗೆ ಮುತ್ತಿಗೆ ಹಾಕಿದ ರೈತ ಸಂಘ

ಇಒ ಪ್ರಕಾಶ್ ವಿರುದ್ಧ ಕ್ರಮಕ್ಕೆ ಆಗ್ರಹ; ಜಿಪಂಗೆ ಮುತ್ತಿಗೆ ಹಾಕಿದ ರೈತ ಸಂಘ

by suddionenews September 23, 2021, 1:47 PM 816 Views

ಸುದ್ದಿಒನ್, ಚಿತ್ರದುರ್ಗ, (ಸೆ.23) : ರೈತರಿಗೆ ನಿರಂತರ ವಂಚನೆ ಮಾಡುತ್ತಿರುವ ಇಒ ಪ್ರಕಾಶ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಅಖಿಲ ಭಾರತ ಕಿಸಾನ್ ಸಭಾ ಹಾಗೂ ಪ್ರಗತಿಪರ ಸಂಘಟನೆಗಳು ಗುರುವಾರ ಜಿಲ್ಲಾ ಪಂಚಾಯತ್‍ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದವು.

ನಗರದ ಸ್ಟೇಡಿಯಂ ರಸ್ತೆಯ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟ ನೂರಾರು ರೈತರು ಇಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾ ಪಂಚಾಯತ್ ಆವರಣದಲ್ಲಿ ಜಮಾಯಿಸಿ ಕ್ರಮಕ್ಕೆ ಪಟ್ಟು ಹಿಡಿದರು.

ಮೊಳಕಾಲ್ಮುರು ತಾಲ್ಲೂಕಿನಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಇ.ಓ. ಪ್ರಕಾಶ್‍ರವರು ರೈತರ 37 ಲಕ್ಷ ರು. ಹಣವನ್ನು ಗುಳುಂಮಾಡಿ ರೈತರಿಗೆ ಮೋಸ ಮಾಡಿದ್ದಾರೆ. ಈಗ ಚಳ್ಳಕೆರೆ ತಾಲ್ಲುಕಿನಲ್ಲಿಯೂ ಗ್ರೇಡ್-2 ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ಹೆಚ್ಚುವರಿ ಪಿ.ಡಿ.ಓ.ಆಗಿ ನಿಯೋಜನೆ ಮಾಡಿರುತ್ತಾರೆ. ಚಳ್ಳಕೆರೆ ತಾಲ್ಲೂಕಿನಲ್ಲಿ ಇ.ಓ. ಪ್ರಕಾಶ್‍ರವರು ಹಾಲಿ ಪಿ.ಡಿ.ಓ.ರವರನ್ನು ರಜಾ ಹಾಕುವುದಕ್ಕೆ ಒತ್ತಡ ಹಾಕುವುದು ಮತ್ತು ಪಿ.ಡಿ.ಓ.ರವರು ಹಣ ನೀಡದೆ ಇದ್ದರೆ ಒಂದು ಗ್ರಾಮ ಪಂಚಾಯಿತಿಯಿಂದ ಮತ್ತೊಂದು ಗ್ರಾಮ ಪಂಚಾಯಿತಿಗೆ ವರ್ಗಾವಣೆ ಮಾಡುವುದು ಇವರ ಹವ್ಯಾಸವಾಗಿರುತ್ತದೆ ಎಂದು ದೂರಿದರು.

ಕೆಲವು ಗ್ರಾಮ ಪಂಚಾಯಿತಿಗಳಿಗೆ 3ರಿಂದ 4 ತಿಂಗಳಲ್ಲಿ ಸುಮಾರು 4 ರಿಂದ 5 ಪಿ.ಡಿ.ಓ.ರನ್ನು ವರ್ಗಾವಣೆ ಮಾಡಿರುತ್ತಾರೆ. ಆದ್ದರಿಂದ ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲ್ಲೂಕುಗಳಲ್ಲಿ ಭಾರೀ ಭ್ರಷ್ಟಾಚಾರದಲ್ಲಿ ತೊಡಗಿರುವ ಇ.ಓ. ಪ್ರಕಾಶ್‍ರವರ ದುರ್ನಡತೆ ಭ್ರಷ್ಟಾಚಾರದ ವಿರುದ್ಧ ದಾಖಲೆಗಳ ಸಮೇತ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗದೆ ವಿಳಂಬವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಳ್ಳಕೆರೆ ತಾಲ್ಲೂಕು ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿ ಪಿ.ಡಿ.ಓ. ದುರ್ವತನೆ ಬಗ್ಗೆ ರೈತ ಸಂಘ ದೂರು ನೀಡಿದ್ದರೂ ಕ್ರಮ ತೆಗೆದು ಕೊಳ್ಳುವಲ್ಲಿ ವಿಳಂಬ ಮಾಡಿದ್ದರ ಪರಿಣಾಮ ಪಿ.ಡಿ.ಓ. ಮಾಲತೇಶ್ ಅವರ ಕಚೇರಿಯಲ್ಲಿಯೇ ಕಳೆದ 25 ದಿನಗಳ ಹಿಂದೆ ಗ್ರಾಮ ಪಂಚಾಯಿತಿಯ ಹಾಲಿ ದಲಿತ ಮಹಿಳಾ ಸದಸ್ಯರ ಬಗ್ಗೆ ಅನುಚಿತ ವರ್ತನೆ ದೌರ್ಜನ್ಯ ಜಾತಿ ನಿಂಧನೆ ಮಾಡಿರುವ ಬಗ್ಗೆ ಮಹಿಳೆ ದೂರು ನೀಡಿದ್ದರೂ ಸಹ ಪಿ.ಡಿ.ಓ. ಮಾಲತೇಶ್‍ರನ್ನು ಬಂಧಿಸಿಲ್ಲ ಎಂದು ದೂರಿದರು.

ಪಿ.ಡಿ.ಓ.ರವರು ಅಂದಿನಿಂದ ಕರ್ತವ್ಯಕ್ಕೆ ಗೈರು ಹಾಜರಾಗಿದ್ದರೂ ಸಹ ಇ.ಓ.ಪ್ರಕಾಶ್ ಮೇಲಾಧಿಕಾರಿಗಳ ಗಮನಕ್ಕೆ ಘಟನೆ ಬಗ್ಗೆ ವರದಿ ಸಲ್ಲಿಸದೆ ಇದ್ದು ಪರೋಕ್ಷವಾಗಿ ಅವರ ಬೆಂಬಲಕ್ಕೆ ನಿಂತಿರುವುದು ಮೇಲ್ನೋಟಕ್ಕೆ ತಿಳಿಯುತ್ತದೆ. ಕೂಡಲೇ ಇಒ ಪ್ರಕಾಶ್ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ, ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‍ಬಾಬು, ವರಕೇರಪ್ಪ, ಸಿ.ವೈ.ಶಿವರುದ್ರಪ್ಪ ಸೇರಿದಂತೆ ನೂರಾರು ಮುಖಂಡರು, ರೈತರು ಪಾಲ್ಗೊಂಡಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Suddione