Dailyhunt Logo
  • Light mode
    Follow system
    Dark mode
    • Play Story
    • App Story
ಜಗಳೂರು ಅಭಿವೃದ್ಧಿಗೆ ಅನುದಾನ ನೀಡಿಲ್ಲ, ಬರಪಟ್ಟಿಯಿಂದಲೂ ಕೈಬಿಟ್ಟಿದ್ದೀರಿ: ಶಾಸಕ ದೇವೇಂದ್ರಪ್ಪ ಆಕ್ರೋಶ

ಜಗಳೂರು ಅಭಿವೃದ್ಧಿಗೆ ಅನುದಾನ ನೀಡಿಲ್ಲ, ಬರಪಟ್ಟಿಯಿಂದಲೂ ಕೈಬಿಟ್ಟಿದ್ದೀರಿ: ಶಾಸಕ ದೇವೇಂದ್ರಪ್ಪ ಆಕ್ರೋಶ

ಗಳೂರು, ಆ.30: ಜಗಳೂರು ಕ್ಷೇತ್ರದ ಅಭಿವೃದ್ಧಿಗೆ ಸಮರ್ಪಕ ಅನುದಾನ ನೀಡದಿರುವುದು ಹಾಗೂ ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "30 ವರ್ಷಗಳ ಬಳಿಕ ಜಿಲ್ಲೆಯ ಜನರು ಕಾಂಗ್ರೆಸ್‌ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ.

ಒಂದೇ ಮನೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಇದ್ದಾರೆ. ಜಗಳೂರು ಕ್ಷೇತ್ರದ ಅಭಿವೃದ್ಧಿಗೆ ಇದುವರೆಗೆ ಎಷ್ಟು ಅನುದಾನ ನೀಡಿದ್ದೀರಿ?" ಎಂದು ಪ್ರಶ್ನಿಸಿದರು.

ಜಗಳೂರು ಅತ್ಯಂತ ಹಿಂದುಳಿದ ಹಾಗೂ ಬರಪೀಡಿತ ತಾಲೂಕಾಗಿದ್ದರೂ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪಿಸಿದ ಅವರು, "ಮೂರು ವರ್ಷಗಳಲ್ಲಿ ಕ್ಷೇತ್ರದ ಸ್ಥಿತಿಗತಿಗಳನ್ನು ಒಮ್ಮೆಯಾದರೂ ತಿರುಗಿ ನೋಡಿದ್ದೀರಾ? ಜಗಳೂರನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವ ಬಗ್ಗೆ ಸೌಜನ್ಯಕ್ಕಾದರೂ ನನಗೆ ಕರೆ ಮಾಡಿ ವಿಚಾರಿಸಿದ್ದೀರಾ?" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವಂತೆ ಸಂಸದರನ್ನು ಒತ್ತಾಯಿಸಿದ ದೇವೇಂದ್ರಪ್ಪ, ಕ್ಷೇತ್ರಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಜಗಳೂರಿನ ಪಾಲಿನ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

"ನೀವು ರೂಪಿಸಿರುವ ವ್ಯವಸ್ಥೆಯೇ ನನ್ನನ್ನು ಮಾತನಾಡುವಂತೆ ಮಾಡಿದೆ. ಆಗಿರುವ ಅನ್ಯಾಯವನ್ನು ಸರಿಪಡಿಸಿ ನಮ್ಮ ಪಾಲನ್ನು ನಮಗೆ ನೀಡಿದರೆ ಕೈಮುಗಿದು ನಮಿಸುತ್ತೇವೆ. ಇಲ್ಲವಾದರೆ ಜಗಳೂರನ್ನು ಕಲ್ಯಾಣ ಕರ್ನಾಟಕಕ್ಕೆ ಸೇರಿಸುವ ಹೊಸ ದಾರಿಯತ್ತ ಹೊರಡಬೇಕಾಗುತ್ತದೆ" ಎಂದು ಶಾಸಕ ದೇವೇಂದ್ರಪ್ಪ ಎಚ್ಚರಿಕೆ ನೀಡಿದರು.ಜಗಳೂರು ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವ ಕುರಿತು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಜಗಳೂರಿಗೆ ಬಂದು ಸ್ಪಷ್ಟನೆ ನೀಡಬೇಕು ಎಂದು ದೇವೇಂದ್ರಪ್ಪ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಬೆಂಗಳೂರಿಗೆ ತೆರಳಿದ್ದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಗೆ ಆಗಮಿಸಿದ್ದ ಅಪರ ಜಿಲ್ಲಾಧಿಕಾರಿ ಶೀಲವಂತ ಕುಮಾರ್‌ ಅವರ ಮೂಲಕ ಜಿಲ್ಲಾಧಿಕಾರಿಗೆ ಕರೆ ಮಾಡಿಸಿದ ಶಾಸಕರು, "ಸೋಮವಾರ ಜಗಳೂರಿಗೆ ಬಂದು ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ಜಿಲ್ಲಾಮಟ್ಟದ ಯಾವುದೇ ಕೆಡಿಪಿ ಸಭೆಗೆ ನಾನು ಹಾಜರಾಗುವುದಿಲ್ಲ. ಅಗತ್ಯವಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ" ಎಂದು ಎಚ್ಚರಿಸಿದರು.
ಜಗಳೂರು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರುವುದು ಖಚಿತ ಎಂದು ಹೇಳಿದ ಅವರು, ಈಗಾಗಲೇ ಡಿಸಿಎಂ ಡಾ.ಜಿ.ಪರಮೇಶ್ವರ್‌ ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಅಗತ್ಯಬಿದ್ದರೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ರೈತರ ನಿಯೋಗವನ್ನೂ ಕರೆದೊಯ್ಯುವುದಾಗಿ ತಿಳಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Suddione