ಮಾನವನ ದೇಹದಲ್ಲಿ ಮೂತ್ರಪಿಂಡಗಳು (ಕಿಡ್ನಿ) ಅತ್ಯಂತ ಪ್ರಮುಖ ಅಂಗಗಳಾಗಿವೆ. ರಕ್ತದಲ್ಲಿರುವ ತ್ಯಾಜ್ಯ ವಸ್ತುಗಳನ್ನು ಶೋಧಿಸಿ ಮೂತ್ರದ ಮೂಲಕ ಹೊರಹಾಕುವುದರ ಜೊತೆಗೆ, ದೇಹದಲ್ಲಿ ನೀರು ಮತ್ತು ಸೋಡಿಯಂನಂತಹ ಎಲೆಕ್ಟ್ರೋಲೈಟ್ಗಳ ಸಮತೋಲನವನ್ನು ಕಾಪಾಡುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ.
ಇದಲ್ಲದೆ ರಕ್ತದೊತ್ತಡ ನಿಯಂತ್ರಣ ಹಾಗೂ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಂಬಂಧಿಸಿದ ಹಾರ್ಮೋನ್ಗಳ ಕಾರ್ಯನಿರ್ವಹಣೆಯಲ್ಲೂ ಕಿಡ್ನಿಗಳ ಪಾತ್ರ ಹಿರಿದು.
ಆದರೆ ನಾವು ನಿತ್ಯ ಸೇವಿಸುವ ಆಹಾರ ಪದ್ಧತಿಯು ನಮ್ಮ ಕಿಡ್ನಿಗಳ ಆರೋಗ್ಯದ ಮೇಲೆ ನೇರ ಪ್ರಭಾವ ಬೀರುತ್ತದೆ. ಮುಖ್ಯವಾಗಿ ನಿತ್ಯ ಬಳಕೆಯ ನಾಲ್ಕು ಬಿಳಿ ಆಹಾರ ಪದಾರ್ಥಗಳನ್ನು ಅತಿಯಾಗಿ ಸೇವಿಸುವುದರಿಂದ ಕಿಡ್ನಿಗಳ ಮೇಲೆ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸುತ್ತಾರೆ.
ಅತಿಯಾದ ಬಿಳಿ ಉಪ್ಪಿನ ಬಳಕೆ
ಉಪ್ಪಿನಲ್ಲಿರುವ ಸೋಡಿಯಂ ದೇಹಕ್ಕೆ ಅಗತ್ಯವಾಗಿದ್ದರೂ, ಅದನ್ನು ಮಿತಿಮೀರಿ ಸೇವಿಸಿದಾಗ ದೇಹದಲ್ಲಿ ದ್ರವ ಶೇಖರಣೆಯಾಗಿ ರಕ್ತದೊತ್ತಡ ಹೆಚ್ಚಾಗುತ್ತದೆ. ದೀರ್ಘಕಾಲದವರೆಗೆ ರಕ್ತದೊತ್ತಡ ನಿಯಂತ್ರಣದಲ್ಲಿ ಇಲ್ಲದಿದ್ದರೆ, ಮೂತ್ರಪಿಂಡಗಳಲ್ಲಿರುವ ಸೂಕ್ಷ್ಮ ರಕ್ತನಾಳಗಳು ಹಾನಿಗೊಳಗಾಗುತ್ತವೆ. ಇದರಿಂದಾಗಿ ಕಿಡ್ನಿಗಳ ರಕ್ತ ಶೋಧಿಸುವ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ. ಅಡುಗೆಯಲ್ಲಿ ಹೆಚ್ಚು ಉಪ್ಪು ಬಳಸುವುದರ ಜೊತೆಗೆ ಉಪ್ಪಿನಕಾಯಿ, ಹಪ್ಪಳ, ಚಿಪ್ಸ್, ಪ್ಯಾಕೆಟ್ ಸ್ನ್ಯಾಕ್ಸ್ ಹಾಗೂ ಇನ್ಸ್ಟಂಟ್ ನೂಡಲ್ಸ್ಗಳಂತಹ ಪದಾರ್ಥಗಳ ಮೂಲಕ ದೇಹಕ್ಕೆ ಅಪಾರ ಪ್ರಮಾಣದ ಸೋಡಿಯಂ ಸೇರುತ್ತದೆ. ಆದ್ದರಿಂದ ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡುವುದು ಮತ್ತು ರಕ್ತದೊತ್ತಡದ ಸಮಸ್ಯೆ ಇರುವವರು ವೈದ್ಯರ ಸಲಹೆಯಂತೆ ಮಿತವಾಗಿ ಉಪ್ಪು ಬಳಸುವುದು ಉತ್ತಮ.
ಬಿಳಿ ಸಕ್ಕರೆಯ ಅಡ್ಡಪರಿಣಾಮ
ಟೀ, ಕಾಫಿ, ಸಿಹಿತಿಂಡಿಗಳು ಹಾಗೂ ತಂಪು ಪಾನೀಯಗಳಲ್ಲಿ ಬಿಳಿ ಸಕ್ಕರೆಯ ಬಳಕೆ ಅಧಿಕವಾಗಿರುತ್ತದೆ. ಇವುಗಳನ್ನು ಅತಿಯಾಗಿ ಸೇವಿಸುವುದರಿಂದ ತೂಕ ಹೆಚ್ಚಾಗುವುದರ ಜೊತೆಗೆ ರಕ್ತದಲ್ಲಿ ಸಕ್ಕರೆ ಮಟ್ಟ ಗಣನೀಯವಾಗಿ ಏರುತ್ತದೆ. ಮಧುಮೇಹವು ದೀರ್ಘಕಾಲದವರೆಗೆ ನಿಯಂತ್ರಣಕ್ಕೆ ಬಾರದಿದ್ದರೆ ಕಿಡ್ನಿ ವೈಫಲ್ಯ ಅಥವಾ ಕಿಡ್ನಿ ಹಾನಿಯ ಅಪಾಯ ಗಣನೀಯವಾಗಿ ಹೆಚ್ಚುತ್ತದೆ. ಆದ್ದರಿಂದ ಸಕ್ಕರೆ ಬೆರೆಸಿದ ಪಾನೀಯಗಳು ಹಾಗೂ ಸ್ವೀಟ್ಗಳನ್ನು ನಿಯಂತ್ರಿಸುವುದು ಒಳ್ಳೆಯದು. ಸಿಹಿ ತಿನ್ನಬೇಕೆಂಬ ಹಂಬಲವಿದ್ದಾಗ ಹಣ್ಣುಗಳನ್ನು ಆಯ್ಕೆ ಮಾಡಿಕೊಳ್ಳಬಹುದು, ಆದರೆ ಜೇನುತುಪ್ಪ ಅಥವಾ ಖರ್ಜೂರಗಳಲ್ಲೂ ನೈಸರ್ಗಿಕ ಸಕ್ಕರೆ ಇರುವುದರಿಂದ ಮಧುಮೇಹಿಗಳು ಇವುಗಳನ್ನು ಕೂಡ ಮಿತವಾಗಿಯೇ ಸೇವಿಸಬೇಕು.
ಮೈದಾ ಹಿಟ್ಟಿನಿಂದ ತಯಾರಿಸಿದ ತಿನಿಸುಗಳು
ಸಂಸ್ಕರಿಸಿದ ಗೋಧಿ ಹಿಟ್ಟಿನಿಂದ ತಯಾರಾಗುವ ಮೈದಾದಲ್ಲಿ ನಾರಿನಂಶ (ಫೈಬರ್) ತೀರಾ ಕಡಿಮೆ ಇರುತ್ತದೆ. ಮೈದಾದಿಂದ ತಯಾರಾಗುವ ಬಿಸ್ಕತ್ತುಗಳು, ಕೇಕ್ಗಳು, ಪೇಸ್ಟ್ರಿಗಳು, ಪಿಜ್ಜಾ ಬೇಸ್ಗಳು ಹಾಗೂ ಬೇಕರಿ ತಿನಿಸುಗಳಲ್ಲಿ ಮೈದಾದೊಂದಿಗೆ ಸಕ್ಕರೆ, ಉಪ್ಪು ಮತ್ತು ಅನಾರೋಗ್ಯಕರ ಕೊಬ್ಬಿನ ಅಂಶಗಳು ಅಧಿಕವಾಗಿರುತ್ತವೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕ ಹೆಚ್ಚಳ, ರಕ್ತದೊತ್ತಡ ಮತ್ತು ರಕ್ತದಲ್ಲಿ ಸಕ್ಕರೆಯ ಮಟ್ಟದಲ್ಲಿ ಏರುಪೇರು ಉಂಟಾಗುತ್ತದೆ. ಈ ಸಮಸ್ಯೆಗಳು ದೀರ್ಘಾವಧಿಯಲ್ಲಿ ಕಿಡ್ನಿಯ ಕಾರ್ಯನಿರ್ವಹಣೆಗೆ ತೊಂದರೆ ಉಂಟುಮಾಡುತ್ತವೆ. ಆದ ಕಾರಣ ಮೈದಾ ಬದಲು ನಾರಿನಂಶ ಹೆಚ್ಚಿರುವ ಸಿರಿಧಾನ್ಯಗಳು ಹಾಗೂ ಕಾಳುಗಳಿಗೆ ಆದ್ಯತೆ ನೀಡುವುದು ಸೂಕ್ತ.
ಹೆಚ್ಚು ಸಂಸ್ಕರಿಸಿದ ಪ್ಯಾಕೆಟ್ ಆಹಾರಗಳು
ಮಾರುಕಟ್ಟೆಯಲ್ಲಿ ದೊರೆಯುವ ಬಿಳಿ ಸಾಸ್ಗಳು, ಪ್ಯಾಕ್ ಮಾಡಿದ ರೆಡಿಮೇಡ್ ಆಹಾರಗಳು ಮತ್ತು ಸಂಸ್ಕರಿಸಿದ ಆಹಾರ ಪದಾರ್ಥಗಳಲ್ಲಿ ಸಂರಕ್ಷಕಗಳಾಗಿ (ಪ್ರಿಸರ್ವೇಟಿವ್ಸ್) ಸೋಡಿಯಂ ಮತ್ತು ಕೃತಕ ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಇಂತಹ ಆಹಾರಗಳನ್ನು ಪದೇಪದೇ ಸೇವಿಸುವುದರಿಂದ ಬೊಜ್ಜು ಮತ್ತು ರಕ್ತದೊತ್ತಡ ಹೆಚ್ಚಾಗಿ, ಮೂತ್ರಪಿಂಡಗಳ ಮೇಲೆ ಹಠಾತ್ ಹೊರೆ ಬೀಳುತ್ತದೆ. ಕಿಡ್ನಿಗಳ ಆರೋಗ್ಯ ಕಾಪಾಡಿಕೊಳ್ಳಲು ಕೇವಲ ನೀರು ಕುಡಿದರೆ ಸಾಲದು, ಬದಲಿಗೆ ಸಂಸ್ಕರಿಸಿದ ಆಹಾರಗಳಿಂದ ದೂರವಿದ್ದು ತಾಜಾ ಹಾಗೂ ನೈಸರ್ಗಿಕ ಆಹಾರ ಪದಾರ್ಥಗಳಿಗೆ ಆದ್ಯತೆ ನೀಡುವುದು ಅತ್ಯಗತ್ಯ.






