Dailyhunt Logo
  • Light mode
    Follow system
    Dark mode
    • Play Story
    • App Story
ಮಳೆಗಾಲದಲ್ಲಿ ಹಣ್ಣು ಮತ್ತು ತರಕಾರಿಗಳು ದೀರ್ಘಕಾಲ ತಾಜಾವಾಗಿರಬೇಕೇ? ಹಾಗಾದರೆ ಈ ಸಲಹೆಗಳನ್ನು ಪಾಲಿಸಿ!

ಮಳೆಗಾಲದಲ್ಲಿ ಹಣ್ಣು ಮತ್ತು ತರಕಾರಿಗಳು ದೀರ್ಘಕಾಲ ತಾಜಾವಾಗಿರಬೇಕೇ? ಹಾಗಾದರೆ ಈ ಸಲಹೆಗಳನ್ನು ಪಾಲಿಸಿ!

ಳೆಗಾಲ ಆರಂಭವಾಗಿದೆ. ಈ ಋತುವಿನಲ್ಲಿ ವಾತಾವರಣವು ತಂಪಾಗಿದ್ದರೂ, ಗಾಳಿಯಲ್ಲಿ ತೇವಾಂಶ (Moisture) ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಈ ಅತಿಯಾದ ತೇವಾಂಶದ ಕಾರಣದಿಂದಾಗಿ ಮನೆಯಲ್ಲಿ ಸಂಗ್ರಹಿಸಿಡುವ ಹಣ್ಣು ಮತ್ತು ತರಕಾರಿಗಳು ಬೇಗನೆ ಹಾಳಾಗುವ, ಕೊಳೆಯುವ ಅಥವಾ ಬೂಷ್ಟು ಹಿಡಿಯುವ ಸಾಧ್ಯತೆ ಹೆಚ್ಚಿರುತ್ತದೆ.

ಮಾರುಕಟ್ಟೆಯಿಂದ ವಾರಕ್ಕೆ ಆಗುವಷ್ಟು ತಂದ ತರಕಾರಿಗಳು ಎರಡೇ ದಿನಕ್ಕೆ ಕೆಟ್ಟುಹೋದರೆ ಹಣವೂ ವ್ಯರ್ಥ, ಆರೋಗ್ಯಕ್ಕೂ ಹಾನಿ. ಹಾಗಾಗಿ, ಮಳೆಗಾಲದಲ್ಲಿ ಹಣ್ಣು-ತರಕಾರಿಗಳನ್ನು ದೀರ್ಘಕಾಲ ತಾಜಾವಾಗಿಡಲು ಕೆಲವು ಪ್ರಮುಖ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ.

ಖರೀದಿಸುವಾಗ ಮತ್ತು ಮನೆಗೆ ತಂದಾಗ ಜಾಗ್ರತೆ ವಹಿಸಿ:

ಮಾರುಕಟ್ಟೆಯಿಂದ ತರಕಾರಿ ತರುವಾಗ ಒಂದೊಮ್ಮೆ ಹಾಳಾದ ತರಕಾರಿಗಳು ಜೊತೆಯಲ್ಲಿ ಬಂದಿದ್ದರೆ, ಮನೆಗೆ ಬಂದ ತಕ್ಷಣ ಅವುಗಳನ್ನು ಬೇರ್ಪಡಿಸಿ. ಹಾಳಾದ ತರಕಾರಿಗಳಲ್ಲಿರುವ ಬ್ಯಾಕ್ಟೀರಿಯಾ ಇತರ ಒಳ್ಳೆಯ ತರಕಾರಿಗಳಿಗೂ ಹರಡಿ ಅವುಗಳನ್ನು ಹಾಳುಮಾಡುತ್ತದೆ.

ತರಕಾರಿಗಳನ್ನು ಅಡುಗೆ ಮಾಡುವ ಮುನ್ನವೇ ತೊಳೆಯಬೇಕು. ತೊಳೆದ ತಕ್ಷಣ ಫ್ರಿಡ್ಜ್‌ ನಲ್ಲಿ ಅಥವಾ ಹಾಗೆಯೇ ಸಂಗ್ರಹಿಸಿಡಬೇಡಿ. ತೇವಾಂಶದಿಂದಾಗಿ ಅವು ಬೇಗನೆ ಕೊಳೆಯುತ್ತವೆ.

ಒಣ ಹಾಗೂ ಗಾಳಿಯಾಡುವ ಸ್ಥಳದಲ್ಲಿ ಸಂಗ್ರಹಿಸಿ:

ಹಣ್ಣು ಮತ್ತು ತರಕಾರಿಗಳನ್ನು ಯಾವಾಗಲೂ ಸ್ವಚ್ಛವಾದ, ಒಣಗಿದ ಹಾಗೂ ಚೆನ್ನಾಗಿ ಗಾಳಿಯಾಡುವ ಜಾಗದಲ್ಲಿ ಇಡಬೇಕು.
ಫ್ರಿಡ್ಜ್‌ ನಲ್ಲಿ ಇಡುವಾಗ ಹಣ್ಣು ಮತ್ತು ತರಕಾರಿಗಳನ್ನು ಪ್ರತ್ಯೇಕ ಕವರ್ ಅಥವಾ ಬಾಕ್ಸ್‌ಗಳಲ್ಲಿ ಇಡಿ. ಕೆಲವು ಹಣ್ಣುಗಳು ಬೇಗನೆ ಹಣ್ಣಾಗುವುದರಿಂದ, ಅವುಗಳ ಜೊತೆ ತರಕಾರಿ ಇಟ್ಟರೆ ತರಕಾರಿಗಳೂ ಬೇಗನೆ ಹಣ್ಣಾಗಿ ಹಾಳಾಗಬಹುದು.

ಮಳೆಗಾಲದಲ್ಲಿ ಸೊಪ್ಪುಗಳನ್ನು ವಿಶೇಷವಾಗಿ ಕಾಳಜಿ ವಹಿಸಬೇಕು. ಸೊಪ್ಪನ್ನು ಒಣಗಿದ ಬಟ್ಟೆ ಅಥವಾ ಟಿಶ್ಯೂ ಪೇಪರ್‌ನಲ್ಲಿ ಸುತ್ತಿ ಇಡುವುದರಿಂದ ಹೆಚ್ಚುವರಿ ತೇವಾಂಶವನ್ನು ಅದು ಹೀರಿಕೊಳ್ಳುತ್ತದೆ ಮತ್ತು ಸೊಪ್ಪು ತಾಜಾವಾಗಿರುತ್ತದೆ.

ಈ ತಪ್ಪುಗಳನ್ನು ಮಾಡಬೇಡಿ:

ತರಕಾರಿಗಳನ್ನು ಪ್ಲಾಸ್ಟಿಕ್ ಕವರ್‌ ಗಳಲ್ಲಿ ಬಿಗಿಯಾಗಿ ಕಟ್ಟಿ ಇಡಬೇಡಿ. ಪ್ಲಾಸ್ಟಿಕ್ ಕವರ್‌ ನಲ್ಲಿ ಗಾಳಿಯಾಡದೆ ತೇವಾಂಶ ಹೆಚ್ಚಾಗಿ ತರಕಾರಿಗಳು ಬೇಗನೆ ಕೊಳೆಯುತ್ತವೆ. ಮೆಶ್ ಬ್ಯಾಗ್ (ರಂಧ್ರವಿರುವ ಚೀಲ) ಅಥವಾ ಕಾಟನ್ ಬ್ಯಾಗ್‌ ಗಳನ್ನು ಬಳಸಿ.

ಫ್ರಿಡ್ಜ್‌ ನಲ್ಲಿ ಇಡುವ ಮುನ್ನ ತರಕಾರಿಗಳು ಸಂಪೂರ್ಣವಾಗಿ ಒಣಗಿರಬೇಕು. ತರಕಾರಿಗಳ ನಡುವೆ ಸ್ವಲ್ಪ ಜಾಗವಿರಲಿ.

ಹಾಳಾಗಿರುವುದನ್ನು ಹೀಗೆ ಗುರುತಿಸಿ:

ಕೆಲವು ತರಕಾರಿಗಳು ಮೇಲ್ನೋಟಕ್ಕೆ ಚೆನ್ನಾಗಿ ಕಂಡರೂ ಒಳಗಿನಿಂದ ಕೊಳೆತಿರುತ್ತವೆ. ತರಕಾರಿ ಮೆತ್ತಗಾಗಿದ್ದರೆ, ಅದರಿಂದ ನೀರು ಬರುತ್ತಿದ್ದರೆ ಅಥವಾ ಬಣ್ಣ ಬದಲಾಗಿದ್ದರೆ ಅವುಗಳನ್ನು ಬಳಸಬೇಡಿ.

ಸೊಪ್ಪುಗಳು ಅಂಟು ಅಂಟಾಗಿದ್ದರೆ ಅಥವಾ ಬಾಡಿಹೋಗಿದ್ದರೆ ತಕ್ಷಣ ಎಸೆದುಬಿಡಿ. ಇಂತಹ ತರಕಾರಿಗಳನ್ನು ಸೇವಿಸುವುದರಿಂದ ಫುಡ್ ಪಾಯ್ಸನಿಂಗ್ (ಆಹಾರ ವಿಷಪೂರಿತವಾಗುವುದು) ಮತ್ತು ಹೊಟ್ಟೆಯ ಸೋಂಕುಗಳು ಉಂಟಾಗಬಹುದು.

ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಿರುವುದರಿಂದ, ಆಹಾರದ ತಾಜಾತನದ ಬಗ್ಗೆ ಹೆಚ್ಚಿನ ನಿಗಾ ವಹಿಸುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅವಶ್ಯಕವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Suddione