ದೇಶದಲ್ಲಿ ಇಂಧನ ದರ ಏರಿಕೆ ಮತ್ತೆ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳಿನಿಂದ ವಾಹನ ಸವಾರರಿಗೆ ಸರಣಿ ಶಾಕ್ ನೀಡುತ್ತಿರುವ ಕೇಂದ್ರ ಸರ್ಕಾರ, ಇದೀಗ ಮತ್ತೊಮ್ಮೆ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.
ತಾಜಾ ಪರಿಷ್ಕರಣೆಯ ಪ್ರಕಾರ, ಪ್ರತಿ ಲೀಟರ್ ಪೆಟ್ರೋಲ್ ಮೇಲ ₹2.61 ಹಾಗೂ ಡೀಸೆಲ್ ಮೇಲ ₹2.71 ಹೆಚ್ಚಳ ಮಾಡಲಾಗಿದೆ.
ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈಗಾಗಲೇ ಕಳೆದ ಕೆಲ ವಾರಗಳಲ್ಲಿ ಮೂರು ಹಂತಗಳಲ್ಲಿ ಇಂಧನ ದರ ಏರಿಕೆ ಮಾಡಲಾಗಿದ್ದು, ನಿರಂತರವಾಗಿ ಹೆಚ್ಚುತ್ತಿರುವ ಬೆಲೆಗಳು ವಾಹನ ಸವಾರರ ಜೇಬಿಗೆ ಭಾರವಾಗುತ್ತಿವೆ. ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದ ಸಾರಿಗೆ ವೆಚ್ಚ ಹೆಚ್ಚಳವಾಗುವ ಸಾಧ್ಯತೆ ಇದ್ದು, ಅದರ ಪರಿಣಾಮವಾಗಿ ಅಗತ್ಯ ವಸ್ತುಗಳ ಬೆಲೆಗಳೂ ಏರಬಹುದು ಎಂಬ ಆತಂಕ ವ್ಯಕ್ತವಾಗಿದೆ.ನಗರ ಪ್ರದೇಶಗಳಲ್ಲಷ್ಟೇ ಅಲ್ಲದೆ ಗ್ರಾಮೀಣ ಭಾಗಗಳಲ್ಲೂ ಇಂಧನ ದರ ಏರಿಕೆಯ ಪರಿಣಾಮ ಕಾಣಿಸಿಕೊಳ್ಳುತ್ತಿದೆ. ಖಾಸಗಿ ವಾಹನ ಸವಾರರು, ಆಟೋ ಚಾಲಕರು, ರೈತರು ಹಾಗೂ ಲಾರಿಗಳ ಮೂಲಕ ಸರಕು ಸಾಗಣೆ ಮಾಡುವ ವಲಯಗಳು ಹೆಚ್ಚಿದ ವೆಚ್ಚದಿಂದ ಸಂಕಷ್ಟಕ್ಕೆ ಸಿಲುಕಿವೆ.
ಆರ್ಥಿಕ ತಜ್ಞರ ಪ್ರಕಾರ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ, ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತ ಹಾಗೂ ತೆರಿಗೆ ಭಾರ ಇಂಧನ ದರ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ. ಇಂಧನ ದರ ನಿರಂತರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

