Dailyhunt Logo
  • Light mode
    Follow system
    Dark mode
    • Play Story
    • App Story
ನಮ್ಮ ಊರು ನಮ್ಮ ಹೆಮ್ಮೆ | ತುಮಕೂರು ಜಿಲ್ಲೆಯ ವಿಘ್ನಸಂತೆಯ ಬಾಲಲಿಂಗೇಶ್ವರ ದೇವಾಲಯ

ನಮ್ಮ ಊರು ನಮ್ಮ ಹೆಮ್ಮೆ | ತುಮಕೂರು ಜಿಲ್ಲೆಯ ವಿಘ್ನಸಂತೆಯ ಬಾಲಲಿಂಗೇಶ್ವರ ದೇವಾಲಯ

ವಿಶೇಷ ಲೇಖನ : ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಹೊಯ್ಸಳರು ಕನ್ನಡ ನಾಡಿಗೆ ನೀಡಿದ ಅತ್ಯಪರೂಪ ಶಿಲ್ಪಕಲಾ ವೈಭವವನ್ನು ಜಗತ್ತು ಎಂದಿಗೂ ಮರೆಯಲು ಸಾಧ್ಯವಿಲ್ಲ. ಹಾಸನ ಚಿಕ್ಕಮಗಳೂರು, ತುಮಕೂರು ಮೈಸೂರು ಹೀಗೆ ಹತ್ತಾರು ಜಿಲ್ಲೆಗಳಲ್ಲಿ ಇಂದಿಗೂ ಹೊಯ್ಸಳರ ಶಿಲ್ಪಕಲಾ ವೈಭವವನ್ನು ತುಂಬಿಕೊಂಡಿರುವ ದೇವಾಲಯಗಳನ್ನು ಕಾಣಬಹುದು.

ಇದರಲ್ಲಿ ತುಮಕೂರು ಜಿಲ್ಲೆಯಲ್ಲೂ ಕೂಡ ಹೊಯ್ಸಳರ ಅಪ್ರತಿಮ ಕಲಾ ಶ್ರೀಮಂತಿಕೆಯ ದೇವಾಲಯಗಳಿವೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕು ನೊಣವಿನಕೆರೆ ಹೋಬಳಿ ವಿಘ್ನಸಂತೆ ಗ್ರಾಮವು ಹೊಯ್ಸಳರ ಒಂದು ಶಿಲಾ ಶ್ರೀಮಂತಿಕೆ ತುಂಬಿಕೊಂಡಿರುವ ದೇವಾಲಯಗಳಿಂದ ತುಂಬಿರುವ ಗ್ರಾಮವಾಗಿದೆ. ಅದರಲ್ಲಿ ಪ್ರಮುಖವಾದದ್ದು ಇಲ್ಲಿರುವ ಶ್ರೀ ಬಾಲಲಿಂಗೇಶ್ವರ (ಕಲ್ಲೇಶ್ವರ) ದೇವಾಲಯ.

ಈ ಗ್ರಾಮವು ತಿಪಟೂರು- ತುರುವೇಕೆರೆ ರಾಜ್ಯ ಹೆದ್ದಾರಿಯ ನೊಣವಿನಕೆರೆ ಗ್ರಾಮದಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿದೆ.
ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ 1500 ದೇವಾಲಯಗಳಲ್ಲಿ ಅತಿ ಹೆಚ್ಚಿನ ದೇವಾಲಯಗಳು ನೆಲೆಗೊಂಡಿರುವುದು ಹಾಸನ ಜಿಲ್ಲೆಯಲ್ಲಿ. ಹಾಸನ ನಂತರ ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಿನ ದೇವಾಲಯಗಳು ಕಂಡುಬರುತ್ತವೆ. ತುಮಕೂರು ಜಿಲ್ಲೆಯಲ್ಲಿ ವಿಶೇಷವಾಗಿ ತುರುವೇಕೆರೆ-ತಿಪಟೂರು ಭಾಗದಲ್ಲಿ 30 ಕ್ಕಿಂತ ಹೆಚ್ಚಿನ ದೇವಾಲಯಗಳು ದಾಖಲಾಗಿವೆ. ತಂಡಗ, ನೊಣವಿನಕೆರೆ, ಅರಳಗುಪ್ಪೆ , ಕೊಂಡಜ್ಜಿ, ಸಂಪಿಗೆ, ನಾಗಲಾಪುರ, ಹುಲಿಕಲ್, ಹೊಸಹಳ್ಳಿ ಮತ್ತು ಗೋವಿಂದಘಟ್ಟಗಳಲ್ಲಿ ಹೊಯ್ಸಳರ ದೇವಾಲಯಗಳು ಇರುವಂತೆ ವಿಘ್ನಸಂತೆ ಎಂಬ ವಿಶಿಷ್ಟ ಹೆಸರಿನ ಗ್ರಾಮದಲ್ಲಿಯೂ ಸಹ ಎರಡು ಹೊಯ್ಸಳ ದೇವಾಲಯಗಳಿವೆ.

ಗ್ರಾಮದ ಈಶಾನ್ಯ ದಿಕ್ಕಿನಲ್ಲಿ ಬಾಲಲಿಂಗೇಶ್ವರ ಎಂಬ ದೇವಾಲಯವಿದ್ದು ಪ್ರಚಾರದ ಕೊರತೆಯಿಂದ ಮರೆಯಾಗಿಯೇ ಇದೆ.
ತುರುವೇಕೆರೆಯಿಂದ 18 ಕಿ ಮೀ ಮತ್ತು ತಿಪಟೂರಿನಿಂದ 17 ಕಿ ಮೀ ದೂರದಲ್ಲಿರುವ ವಿಘ್ನಸಂತೆ ಗ್ರಾಮವನ್ನು ಇಲ್ಲಿನ ಶಾಸನಗಳಲ್ಲಿ ‘ಇಗಣಸಂತೆ’ , ‘ಶ್ರೀ ವಿಜಯಗೋಪಾಲಪುರ’ ಎಂಬುದಾಗಿ ಉಲ್ಲೇಖಿಸಲಾಗಿದೆ.
ಹೊಯ್ಸಳರ ಕಾಲಕ್ಕೆ ಈ ಗ್ರಾಮವು ಅಗ್ರಹಾರವಾಗಿತ್ತು.

ಬಾಲಲಿಂಗೇಶ್ವರ ದೇವಾಲಯವು ಪೂರ್ವಾಭಿಮುಖವಾಗಿದ್ದು ಗರ್ಭಗುಡಿ, ತೆರೆದ ಶುಕನಾಸಿ ಮತ್ತು ನವರಂಗವನ್ನೊಳಗೊಂಡಿದೆ. ದುಸ್ಥಿತಿಯಲ್ಲಿದ್ದ ದೇವಾಲಯವನ್ನು 2016 ರಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ.
ದೇವಾಲಯವನ್ನು ವಿಜಯನಗರ ಅಥವಾ ಪಾಳೇಗಾರರ ಕಾಲದಲ್ಲೇ ಒಮ್ಮೆ ನವೀಕರಿಸಿದಂತೆ ತೋರುತ್ತದೆ. ಬಾಲಲಿಂಗೇಶ್ವರ ದೇವಾಲಯದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ಶಾಸನಗಳು ಲಭ್ಯವಿಲ್ಲವಾದರೂ ಇದೂ ಸಹ ಗ್ರಾಮದ ಒಳಗಿರುವ ಲಕ್ಷ್ಮೀನರಸಿಂಹ ದೇವಾಲಯದ ನಿರ್ಮಾಣದ ಸಮಯದಲ್ಲೇ (ಸಾ.ಶ 1286) ನಿರ್ಮಾಣವಾಗಿರಬಹುದೆಂದು ಊಹಿಸಬಹುದು. ದೇವಾಲಯದ ಗರ್ಭಗುಡಿಯಲ್ಲಿ ಎರಡು ಅಡಿ ಎತ್ತರದ ಬಾಲಲಿಂಗೇಶ್ವರನ ಲಿಂಗವಿದೆ.

ಲಿಂಗದ ಪೀಠವು ವೃತ್ತಾಕಾರವಾಗಿದೆ. ಗರ್ಭಗುಡಿಯ ದ್ವಾರವು ಸರಳವಾದ ರಚನೆಯಿಂದ ಕೂಡಿದೆ. ನವರಂಗದಲ್ಲಿ ರುದ್ರಕಾಂತ ಶೈಲಿಯ ನಾಲ್ಕು ಕಂಬಗಳಿವೆ. ಕಂಬಗಳ ಮಧ್ಯೆ ಶಿವಲಿಂಗಕ್ಕೆ ಅಭಿಮುಖವಾಗಿ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ನಂದಿ ವಿಗ್ರಹವಿದೆ. ನವರಂಗದ ಛಾವಣಿಯಲ್ಲಿ ಪದ್ಮಮಂಡಲದ ವಿತಾನ (ಭುವನೇಶ್ವರಿ) ಗಳಿವೆ. ಹಿಂದೊಮ್ಮೆ ಇಲ್ಲಿದ್ದ ಹಲವು ವಿಗ್ರಹಗಳು ಕಾಣೆಯಾಗಿದ್ದು ಅವುಗಳ ಪೀಠಗಳ ಮೇಲೆ ಹೊಸ ವಿಗ್ರಹಗಳನ್ನು ಇಡಲಾಗಿದೆ. ಅವುಗಳಲ್ಲಿ ಕಾಲಭೈರವನ ಮೂರ್ತಿಯು ಒಂದಾಗಿದೆ.

ಇದೇ ಸ್ಥಳದಲ್ಲಿ ಗಣಪತಿ ಮೂರ್ತಿಯನ್ನು ಕೂಡ ಇಡಲಾಗಿದೆ.
ನವರಂಗದ ಈಚೆಗೆ ವಿಜಯನಗರ / ಪಾಳೇಗಾರರ ಕಾಲದಲ್ಲಿ ಸೇರಿಸಿದಂತೆ ತೋರುವ ಮಂಟಪವಿದೆ. ಇಲ್ಲಿ ಚೌಕಾಕಾರದ ರಚನೆಯಿರುವ ಕಂಬಗಳಿವೆ. ದೇವಾಲಯದ ಹೊರಭಾಗವು ಸರಳವಾದ ರಚನೆಯಿಂದ ಕೂಡಿದೆ. ಗೋಡೆಗಳು ಸಪಾಟಾಗಿದ್ದು ಬಹುಶಃ ಹಿಂದೆ ನಡೆದ ಜೀರ್ಣೋದ್ಧಾರದ ಸಂದರ್ಭಗಳಲ್ಲಿ ಈ ರೀತಿಯ ಕಲ್ಲುಗಳನ್ನು ಹಾಕಿಸಿರುವ ಸಾಧ್ಯತೆಯಿದೆ. ದೇವಾಲಯವು ತ್ರಿಕೂಟ ಶೈಲಿಯಲ್ಲಿದ್ದು ಮೂಲ ಗರ್ಭಗುಡಿಯ ಮೇಲೆ ಮಾತ್ರ ಶಿಖರವು ನಿರ್ಮಾಣವಾಗಿದೆ. ಶಿಖರವು ಆಕರ್ಷಕವಾದ ಪಾಂಸನ / ಕದಂಬ ನಾಗರ ಶೈಲಿಯಲ್ಲಿದ್ದು ಮೆಟ್ಟಿಲಿನ ರಚನೆಯಿಂದ ಕೂಡಿದೆ. ಶಿಖರದ ಮೇಲ್ಭಾಗವು ಘಂಟಾ ಮಾದರಿಯಲ್ಲಿದೆ. ಇದರ ನಾಲ್ಕು ಕಡೆ ಕೀರ್ತಿಮುಖಗಳ ಕೆತ್ತನೆಗಳಿವೆ. ಶಿಖರದ ಮುಂಭಾಗದ ಶುಕನಾಸಿಯಲ್ಲಿ ಹುಲಿಯನ್ನು ಕೊಲ್ಲುತ್ತಿರುವ ಸಳನ ಶಿಲ್ಪವಿದೆ.

ದೇವಾಲಯದಲ್ಲಿ ನಿತ್ಯ ಪೂಜಾಧಿಗಳು ನಡೆಯುತ್ತಿದ್ದರೂ ಸಹ ದೇವಾಲಯದ ಸುತ್ತಮುತ್ತ ಸ್ವಚ್ಛತೆಯ ಕೊರತೆಯಿದೆ. ಗಿಡಗಂಟಿಗಳು ಬೆಳೆದು ದೇವಾಲಯದ ಅಂದವು ಮರೆಯಾಗುತ್ತಿದೆ. ಸ್ಥಳೀಯ ಗ್ರಾಮ ಪಂಚಾಯಿತಿಯವರು ಇಲ್ಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾದ ಅವಶ್ಯಕತೆಯಿದೆ.
ತಿಪಟೂರು- ತುರುವೇಕೆರೆ ಮಾರ್ಗದ ನೊಣವಿನಕೆರೆಗೆ ರಾಜ್ಯದ ಹಲವಾರು ಪ್ರಮುಖ ನಗರಗಳಿಂದ ಸಾರಿಗೆ ಸೇವೆ ಇದ್ದು ನೊಣವಿನಕೆರೆಯಿಂದ ಇಲ್ಲಿಗೆ ಆಟೋ ಸೇವೆ ಪಡೆಯಬಹುದು. ಬೆಳಗಿನ ಹಾಗೂ ಸಂಜೆಯ ಸಮಯದಲ್ಲಿ ಮಾತ್ರ ದೇವಾಲಯ ತೆರೆದಿರುತ್ತದೆ. ವಿಶೇಷ ದಿನಗಳಂದು ವಿಶೇಷ ಪೂಜಾದಿಗಳು ನಡೆಯುತ್ತವೆ.

ಪೂರಕ ಮಾಹಿತಿ:
ಶಶಿಧರ ಎಚ್‌.ಜಿ.
ಹೊಯ್ಸಳರ ವಾಸ್ತು ಶಿಲ್ಪ ಅವಲೋಕನ ಪುಸ್ತಕ.

Dailyhunt
Disclaimer: This content has not been generated, created or edited by Dailyhunt. Publisher: Suddione