Dailyhunt Logo
  • Light mode
    Follow system
    Dark mode
    • Play Story
    • App Story
ನೇಪಾಳದಲ್ಲಿ ಭೀಕರ ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 1,127ಕ್ಕೆ ಏರಿಕೆ : 4,858 ಮಂದಿ ನಾಪತ್ತೆ

ನೇಪಾಳದಲ್ಲಿ ಭೀಕರ ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 1,127ಕ್ಕೆ ಏರಿಕೆ : 4,858 ಮಂದಿ ನಾಪತ್ತೆ

ಠ್ಮಂಡು.ಸೆಪ್ಟೆಂಬರ್ 02: ನೇಪಾಳದಲ್ಲಿ ಭೋತೆ ಕೋಶಿ ನದಿಯಿಂದ ಉಂಟಾದ ಭೀಕರ ಪ್ರವಾಹ, ಭೂಕುಸಿತ ಹಾಗೂ ಮಣ್ಣಿನ ಕುಸಿತದ ಪರಿಣಾಮ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 1,127ಕ್ಕೆ ಏರಿಕೆಯಾಗಿದೆ. ಇನ್ನೂ 4,858 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಸಂಭವಿಸಿದ ಭಾರೀ ಹಿಮ ಮತ್ತು ಬಂಡೆಗಳ ಕುಸಿತವೇ ಈ ಭೀಕರ ದುರಂತಕ್ಕೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹದ ರಭಸಕ್ಕೆ ಹಲವು ಜಿಲ್ಲೆಗಳಲ್ಲಿ ಮನೆಗಳು, ರಸ್ತೆಗಳು, ಗಡಿ ವ್ಯಾಪಾರ ಕೇಂದ್ರಗಳು ಹಾಗೂ ಜಲವಿದ್ಯುತ್ ಯೋಜನೆಗಳ ಮೂಲಸೌಕರ್ಯಗಳು ಭಾರೀ ಪ್ರಮಾಣದಲ್ಲಿ ಹಾನಿಗೊಳಗಾಗಿವೆ.

ಚಿತ್ವಾನ್‌ನಲ್ಲಿ ಅತಿ ಹೆಚ್ಚು ಮೃತದೇಹಗಳ ಪತ್ತೆ

ನೇಪಾಳ ಪೊಲೀಸರ ಪ್ರಕಾರ, ಸೆಪ್ಟೆಂಬರ್ 2ರ ವೇಳೆಗೆ ಹಲವು ಜಿಲ್ಲೆಗಳು ಹಾಗೂ ನೆರೆಯ ಭಾರತದಿಂದ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಚಿತ್ವಾನ್‌ನಲ್ಲಿ 348, ನವಲ್ಪರಾಸಿ ಪೂರ್ವದಲ್ಲಿ 217, ನವಲ್ಪರಾಸಿ ಪಶ್ಚಿಮದಲ್ಲಿ 190 ಹಾಗೂ ನುವಾಕೋಟ್‌ನಲ್ಲಿ 155 ಮೃತದೇಹಗಳು ಪತ್ತೆಯಾಗಿವೆ.

ಇದರ ಜೊತೆಗೆ ಗೋರಖಾದಲ್ಲಿ 66, ಧಾದಿಂಗ್‌ನಲ್ಲಿ 59, ರಾಸುವಾದಲ್ಲಿ 45, ತನಹುನ್‌ನಲ್ಲಿ 38 ಹಾಗೂ ಭಾರತದಲ್ಲಿ 9 ಮೃತದೇಹಗಳು ಪತ್ತೆಯಾಗಿವೆ.

911 ಗುರುತಿಸಲಾಗದ ಮೃತದೇಹಗಳು

ಅಧಿಕಾರಿಗಳ ಪ್ರಕಾರ, 1,113 ಮೃತದೇಹಗಳ ಕಾನೂನುಬದ್ಧ ಗುರುತು ಪತ್ತೆ ಮತ್ತು ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ. ಈ ಪೈಕಿ 95 ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಇನ್ನೂ 911 ಗುರುತಿಸಲಾಗದ ಮೃತದೇಹಗಳ ಮಾಹಿತಿಯನ್ನು ನೇಪಾಳ ಪೊಲೀಸರು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ನಾಪತ್ತೆಯಾಗಿರುವ ತಮ್ಮ ಕುಟುಂಬ ಸದಸ್ಯರನ್ನು ಪತ್ತೆಹಚ್ಚಲು ಕುಟುಂಬಗಳಿಗೆ ನೆರವಾಗುತ್ತಿದೆ.

ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ

ದುರಂತ ಪೀಡಿತ ಪ್ರದೇಶಗಳಲ್ಲಿ ಸುಮಾರು 7,912 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ, ಪರಿಹಾರ ವಿತರಣೆ ಹಾಗೂ ಮೃತದೇಹಗಳ ನಿರ್ವಹಣೆಯಲ್ಲಿ ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ.

ಇದುವರೆಗೆ 6,541 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಇನ್ನೂ ನಾಪತ್ತೆಯಾಗಿರುವ 4,858 ಮಂದಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಅಪಾಯಕಾರಿ ಪ್ರದೇಶಗಳಲ್ಲಿರುವ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು ಹಾಗೂ ಅವಶೇಷಗಳಿಂದ ಬಂದ್ ಆಗಿರುವ ರಸ್ತೆಗಳನ್ನು ತೆರವುಗೊಳಿಸುವ ಕಾರ್ಯವೂ ನಡೆಯುತ್ತಿದೆ.

ಶೋಧ ಕಾರ್ಯಾಚರಣೆ ವೇಳೆ ಮತ್ತಷ್ಟು ಮೃತದೇಹಗಳು ಪತ್ತೆಯಾಗುವ ಸಾಧ್ಯತೆ ಇರುವುದರಿಂದ ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Suddione