Dailyhunt Logo
  • Light mode
    Follow system
    Dark mode
    • Play Story
    • App Story
ನೀಟ್ ಅಕ್ರಮ ಖಂಡಿಸಿ ದೆಹಲಿಯಲ್ಲಿ ವಾಂಗ್‍ ಚುಕ್ ಧರಣಿ : ಚಿತ್ರದುರ್ಗದಲ್ಲಿ ವಿವಿಧ ಸಂಘಟನೆಗಳಿಂದ ಬೆಂಬಲ

ನೀಟ್ ಅಕ್ರಮ ಖಂಡಿಸಿ ದೆಹಲಿಯಲ್ಲಿ ವಾಂಗ್‍ ಚುಕ್ ಧರಣಿ : ಚಿತ್ರದುರ್ಗದಲ್ಲಿ ವಿವಿಧ ಸಂಘಟನೆಗಳಿಂದ ಬೆಂಬಲ

ಸುದ್ದಿಒನ್, ಚಿತ್ರದುರ್ಗ, ಜುಲೈ. 04 : ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮವನ್ನು ಸಮಗ್ರ ತನಿಖೆ ನಡೆಸಿ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಗಳ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ದೆಹಲಿಯ ಜಂತರ್ ಮಂತರ್‍ನಲ್ಲಿ ಬುಡಕಟ್ಟು ಆದಿವಾಸಿ ನಾಯಕ ಸೋನಮ್ ವಾಂಗ್‍ಚುಕ್ ಕಳೆದ ಆರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲದಿರುವುದನ್ನು ಖಂಡಿಸಿ ಹಿರಿಯ ಪತ್ರಕರ್ತ ಚಳ್ಳಕೆರೆ ಬಸವರಾಜ್ ಉಪವಾಸಕ್ಕೆ ಬೆಂಬಲ ಸೂಚಿಸಿದರು.

ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಉದ್ಯೋಗವಿಲ್ಲದೆ ಯುವಕರು ನೇಪಾಳ, ಶ್ರೀಲಂಕಾದಲ್ಲಿ ದಂಗೆ ಎದ್ದಿದ್ದಾರೆ. ಧರ್ಮೆಂದ್ರ ಪ್ರದಾನ್ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಬೇಕು. ಉಪವಾಸ ಧರಣಿ ನಡೆಸುತ್ತಿರುವ ಸೋನಮ್ ವಾಂಗ್ ಚುಕ್ ಬಳಿ ಹೋಗಿ ಸಮಸ್ಯೆಗಳನ್ನು ಆಲಿಸುವ ಸೌಜನ್ಯವನ್ನಾದದರೂ ತೋರಬೇಕೆಂದು ಒತ್ತಾಯಿಸಿದರು.

ನಿರುದ್ಯೋಗಿಗಳ ಕೈಗೆ ಕೆಲಸವಿಲ್ಲದೆ ತಪ್ಪು ದಾರಿ ಹಿಡಿಯುತ್ತಿದ್ದಾರೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ ಪ್ರಧಾನಿ ಮೋದಿರವರು ಇದುವರೆವಿಗೂ ಒಂದು ಉದ್ಯೋಗವನ್ನು ಸೃಷ್ಠಿಸಿಲ್ಲ ಎಂದು ಆಪಾದಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ ದೇಶದಲ್ಲಿ ಅಪರಾಧಗಳ ಸಂಖ್ಯೆ ಜಾಸ್ತಿಯಾಗುತ್ತಿದೆಯೆಂದರೆ ನಿರುದ್ಯೋಗವೇ ಕಾರಣ. ಯುವ ಜನಾಂಗ ಅರಿವಿಲ್ಲದೆ ತಪ್ಪು ಹೆಜ್ಜೆ ಇಡುತ್ತಿದೆ. ಇದರಿಂದ ಸಮಯ ವ್ಯರ್ಥವಾಗುತ್ತಿದೆ. ನೈತಿಕ ಬೆಂಬಲ ತುಂಬೇಕು. ನೀಟ್ ಅಕ್ರಮ ವಿರೋಧಿಸಿ ಧರಣಿಯಲ್ಲಿ ತೊಡಗಿರುವ ಸೋನಮ್ ವಾಂಗ್‍ಚುಕ್‍ಗೆ ನಮ್ಮ ಬೆಂಬಲವಿದೆ ಎಂದು ಹೇಳಿದರು.

ನಾಗರೀಕ ಹಿತರಕ್ಷಣಾ ವೇದಿಕೆ ಅಧ್ಯಕ್ಷರು ಹಾಗೂ ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಮಾತನಾಡುತ್ತ ಡಾ.ಬಿ.ಆರ್.ಅಂಬೇಡ್ಕರ್‍ರವರು ನೀಡಿರುವ ಸಂವಿಧಾನದಡಿಯಲ್ಲಿ ಪ್ರತಿಯೊಬ್ಬರು ತಮ್ಮ ಮೂಲಭೂತ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಹೋರಾಟ ಮಾಡಬೇಕಿದೆ. ನಿರುದ್ಯೋಗಿಗಳನ್ನು ಜಿರಳೆಗೆ ಹೋಲಿಸಿ ಅವಮಾನ ಮಾಡಲಾಗಿದೆ. ಬಡುಕಟ್ಟು ಸಮಾಜಕ್ಕೆ ಸೇರಿದವರಿಗೆ ನ್ಯಾಯ ಸಿಗುತ್ತಿಲ್ಲ. ನಿರುದ್ಯೋಗವನ್ನು ಹೋಗಲಾಡಿಸುವಂತೆ ಒತ್ತಾಯಿಸಿದರು.

ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್ ಮಾತನಾಡಿ ನೀಟ್ ಅಕ್ರಮ ಪರೀಕ್ಷೆಯಲ್ಲಿ 24 ಲಕ್ಷ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿರುವುದನ್ನು ಖಂಡಿಸಿ ಸೋನಮ್ ವಾಂಗ್‍ಚುಕ್ ಆರು ದಿನಗಳಿಂದಲೂ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಗಮನ ಹರಿಸುತ್ತಿಲ್ಲ. ದೇಶದ ನಾನಾ ಭಾಗಗಳಿಂದ ಅನೇಕರು ಸತ್ಯಾಗ್ರಹಕ್ಕೆ ಬೆಂಬಲಿಸುತ್ತಿದ್ದಾರೆ. ಬದುಕಿಗೆ ಖಾತ್ರಿಯಿಲ್ಲ, ಶಿಕ್ಷಣದಲ್ಲಿ ಗೊಂದಲವಿದೆ. ನಾಗರೀಕ ಸಮಾಜ, ವಿದ್ಯಾರ್ಥಿಗಳ ಪರವಾಗಿ ಜಂತರ್ ಮಂತರ್‍ನಲ್ಲಿ ಹೋರಾಟ ನಡೆಯುತ್ತಿರುವುದಕ್ಕೆ ನಮ್ಮ ಬೆಂಬಲಿವಿದೆ ಎಂದರು.

ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡುತ್ತ ನೀಟ್ ಪರೀಕ್ಷೆ ಅಕ್ರಮದಿಂದ ಹನ್ನೊಂದು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ ಹೊರಬೇಕು. ನಿರುದ್ಯೋಗಿಗಳ ಕೈಗೆ ಉದ್ಯೋಗ ಕೊಡುತ್ತಿಲ್ಲ. ವಿದ್ಯಾರ್ಥಿಗಳಿಗೆ ಭಯ ಹುಟ್ಟಿಸುತ್ತಿದೆ. ಉಚಿತ ಶಿಕ್ಷಣ, ಆರೋಗ್ಯ, ಉದ್ಯೋಗ ಕೊಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ವೆಂಕಟೇಶ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Suddione