Dailyhunt Logo
  • Light mode
    Follow system
    Dark mode
    • Play Story
    • App Story
ರಾಜೀನಾಮೆ ಬಳಿಕ ಸಿದ್ದರಾಮಯ್ಯ ಸುದ್ದಿಗೋಷ್ಠಿ: "ಹೈಕಮಾಂಡ್ ಮಾತಿಗೆ ಬದ್ಧನಾಗಿ ಸ್ಥಾನ ತ್ಯಜಿಸಿದೆ"

ರಾಜೀನಾಮೆ ಬಳಿಕ ಸಿದ್ದರಾಮಯ್ಯ ಸುದ್ದಿಗೋಷ್ಠಿ: "ಹೈಕಮಾಂಡ್ ಮಾತಿಗೆ ಬದ್ಧನಾಗಿ ಸ್ಥಾನ ತ್ಯಜಿಸಿದೆ"

ಸುದ್ದಿಒನ್, ಬೆಂಗಳೂರು, ಮೇ. 28 :

ರ್ನಾಟಕ ರಾಜಕೀಯದ ಮಹತ್ವದ ಬೆಳವಣಿಗೆಯ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಜೀನಾಮೆ ಸಲ್ಲಿಸಿದ ಬಳಿಕ ನಡೆಸಿದ ಸುದ್ದಿಗೋಷ್ಠಿ ಭಾರೀ ಗಮನ ಸೆಳೆಯಿತು. ಗೃಹ ಕಚೇರಿ 'ಕೃಷ್ಣಾ'ದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಕ್ಕೆ ಗೌರವ ಸೂಚಿಸಿ ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ್ದಾಗಿ ಸ್ಪಷ್ಟಪಡಿಸಿದರು.

"ಪಕ್ಷ ನನ್ನನ್ನು ಮುಖ್ಯಮಂತ್ರಿ ಮಾಡಿತ್ತು, ಈಗ ಪಕ್ಷವೇ ತೆಗೆದುಕೊಂಡ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಹೈಕಮಾಂಡ್ ಸೂಚನೆ ಮೇರೆಗೆ ರಾಜೀನಾಮೆ ನೀಡಿದ್ದೇನೆ" ಎಂದು ಸಿದ್ದರಾಮಯ್ಯ ಭಾವುಕರಾಗಿ ಹೇಳಿದರು.

"ಜನರ ಪ್ರೀತಿ ನನ್ನ ದೊಡ್ಡ ಶಕ್ತಿ"
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ತಮ್ಮ ಆಡಳಿತ ಅವಧಿಯಲ್ಲಿ ಜನರು ನೀಡಿದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು. "ರಾಜ್ಯದ ಜನತೆ ನನಗೆ ಅಪಾರ ಪ್ರೀತಿ ನೀಡಿದ್ದಾರೆ. ನಾನು ಯಾವಾಗಲೂ ಜನರ ನಾಯಕನಾಗಿಯೇ ಉಳಿಯುತ್ತೇನೆ" ಎಂದರು. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ಹಾಗೂ ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳನ್ನು ಅವರು ತಮ್ಮ ಆಡಳಿತದ ಪ್ರಮುಖ ಸಾಧನೆಗಳಾಗಿ ಉಲ್ಲೇಖಿಸಿದರು.

ಡಿಕೆಶಿಗೆ ಶುಭಾಶಯ :
ಉಪಮುಖ್ಯಮಂತ್ರಿ ಡಿ‌ ಕೆ ಶಿವಕುಮಾರ್ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಪರೋಕ್ಷವಾಗಿ ಬೆಂಬಲಿಸಿದ ಸಿದ್ದರಾಮಯ್ಯ, "ಮುಂದಿನ ನಾಯಕತ್ವ ಕುರಿತು ಪಕ್ಷ ತೀರ್ಮಾನ ಮಾಡುತ್ತದೆ. ಯಾರೇ ಮುಖ್ಯಮಂತ್ರಿಯಾದರೂ ಸರ್ಕಾರವನ್ನು ಯಶಸ್ವಿಯಾಗಿ ಮುನ್ನಡೆಸಲಿ" ಎಂದು ಹೇಳಿದರು. ಡಿಕೆ ಶಿವಕುಮಾರ್ ಜೊತೆ ಯಾವುದೇ ವೈಮನಸ್ಸಿಲ್ಲ ಎಂಬ ಸಂದೇಶವನ್ನೂ ಅವರು ನೀಡಿದರು.

"ಸುಗಮ ಅಧಿಕಾರ ಹಸ್ತಾಂತರ" :
ರಾಜೀನಾಮೆಗೂ ಮುನ್ನ 'ಕಾವೇರಿ' ನಿವಾಸದಲ್ಲಿ ನಡೆದ ಬ್ರೇಕ್‌ಫಾಸ್ಟ್ ಸಭೆಯಲ್ಲಿ ಸಚಿವರ ಜೊತೆ ಚರ್ಚೆ ನಡೆಸಿದ್ದ ಸಿದ್ದರಾಮಯ್ಯ, ರಾಜ್ಯದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಸುಗಮ ಅಧಿಕಾರ ಹಸ್ತಾಂತರವಾಗಬೇಕು ಎಂಬ ಉದ್ದೇಶದಿಂದಲೇ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ. ಸಭೆಯಲ್ಲಿ ಕೆಲ ಸಚಿವರು ಭಾವುಕರಾದರು ಎನ್ನಲಾಗಿದೆ.

ರಾಜ್ಯಪಾಲರ ಅನುಪಸ್ಥಿತಿಯಲ್ಲಿ ರಾಜೀನಾಮೆ
ಇಂದು ಮಧ್ಯಾಹ್ನ ಲೋಕಭವನಕ್ಕೆ ತೆರಳಿದ ಸಿದ್ದರಾಮಯ್ಯ, ರಾಜ್ಯಪಾಲ ಅವರ ಅನುಪಸ್ಥಿತಿಯಲ್ಲಿ ಕಾರ್ಯದರ್ಶಿ ಪ್ರಭು ಶಂಕರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ರಾಜ್ಯಪಾಲರು ಮುಂಬೈ ಪ್ರವಾಸದಲ್ಲಿರುವ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ನಡೆಯಿತು.

ಕಾಂಗ್ರೆಸ್‌ನಲ್ಲಿ ಮುಂದಿನ ಚಟುವಟಿಕೆ :
ಇದೀಗ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗುತ್ತಿದ್ದು, ಅಲ್ಲಿ ಡಿಕೆ ಶಿವಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ನಾಯಕತ್ವ ಬದಲಾವಣೆಯೊಂದಿಗೆ ಸಚಿವ ಸಂಪುಟ ಪುನರ್‌ರಚನೆಗೂ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Suddione