ಬೆಂಗಳೂರು: 2005-06 ಹಾಗೂ 2006-07ನೇ ಸಾಲಿನಲ್ಲಿ ನೇಮಕಾತಿ ಅಧಿಸೂಚನೆ ಹೊರಬಿದ್ದು, 2006ರ ಏಪ್ರಿಲ್ 1ರ ಪೂರ್ವದಲ್ಲಿ ಅಥವಾ ನಂತರ ಸೇವೆಯಲ್ಲಿ ಕರ್ತವ್ಯಕ್ಕೆ ಹಾಜರಾದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಹಳೆಯ ಡಿಫೈನ್ಡ್ ಪಿಂಚಣಿ (OPS) ಸೌಲಭ್ಯಕ್ಕೆ ಒಳಪಡಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಪ್ರಮುಖ ಜ್ಞಾಪನ ಪತ್ರವನ್ನು ಹೊರಡಿಸಿದೆ.
ರಾಜ್ಯದ ವಿವಿಧ ಜಿಲ್ಲೆಗಳ ಉಪನಿರ್ದೇಶಕರು ಸಲ್ಲಿಸಿದ್ದ ಶಿಫಾರಸುಗಳ ಆಧಾರದ ಮೇಲೆ ಈಗಾಗಲೇ ಪರಿಶೀಲನೆ ನಡೆಸಿ, ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಹಲವು ಹಂತಗಳಲ್ಲಿ ಸರ್ಕಾರವು ಅನುಮೋದನೆ ನೀಡಿ ಆದೇಶಗಳನ್ನು ಹೊರಡಿಸಿದೆ.
ಆದಾಗ್ಯೂ, ರಾಜ್ಯದ ಕೆಲವು ಜಿಲ್ಲೆಗಳಿಂದ ಈ ಕುರಿತ ಪ್ರಸ್ತಾವನೆಗಳು ಇನ್ನೂ ಆಯುಕ್ತರ ಕಚೇರಿಗೆ ಸ್ವೀಕೃತವಾಗುತ್ತಿವೆ. ಈ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ನಿಯಮದಡಿ ಅನುಮೋದನೆಗೆ ಅರ್ಹರಿರುವ ಶಿಕ್ಷಕರ ಸಂಪೂರ್ಣ ಮಾಹಿತಿಯ ಅಗತ್ಯವಿದ್ದು, ಬಾಕಿ ಉಳಿದಿರುವ ಅರ್ಹ ಶಿಕ್ಷಕರ ವಿವರಗಳನ್ನು ಸೂಕ್ತ ಶಿಫಾರಸಿನೊಂದಿಗೆ ತಕ್ಷಣವೇ ಕಚೇರಿಗೆ ಸಲ್ಲಿಸುವಂತೆ ಶಾಲಾ ಶಿಕ್ಷಣ ಇಲಾಖೆಯ (ಪ್ರಾಥಮಿಕ ಶಿಕ್ಷಣ) ನಿರ್ದೇಶಕರು ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರಿಗೆ (ಆಡಳಿತ) ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.







