Dailyhunt Logo
  • Light mode
    Follow system
    Dark mode
    • Play Story
    • App Story
ರೈತರು ಅಣೆಕಟ್ಟು ನೀರು ನಂಬಿಕೊಂಡು ಬೆಳೆ ಹಾಕಬೇಡಿ : ರೈತರಿಗೆ ಸಿಎಂ ಡಿ.ಕೆ. ಶಿವಕುಮಾರ್ ಮನವಿ

ರೈತರು ಅಣೆಕಟ್ಟು ನೀರು ನಂಬಿಕೊಂಡು ಬೆಳೆ ಹಾಕಬೇಡಿ : ರೈತರಿಗೆ ಸಿಎಂ ಡಿ.ಕೆ. ಶಿವಕುಮಾರ್ ಮನವಿ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ತೀವ್ರ ಕೈಕೊಟ್ಟಿರುವುದರಿಂದ ಬರಗಾಲದ ನೆರಳು ದಟ್ಟವಾಗುತ್ತಿದೆ. ಕೃಷ್ಣಾ ಮತ್ತು ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು ಸಂಪೂರ್ಣ ಕುಸಿದಿದ್ದು, ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ, ರೈತರು ಕೇವಲ ಅಣೆಕಟ್ಟಿನ ನೀರನ್ನೇ ನಂಬಿಕೊಂಡು ಹೊಸದಾಗಿ ಬಿತ್ತನೆ ಅಥವಾ ಬೆಳೆ ಬೆಳೆಯಲು ಮುಂದಾಗಬಾರದು ಎಂದು ಮುಖ್ಯಮಂತ್ರಿ ಡಿ.ಕೆ.

ಶಿವಕುಮಾರ್ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜಲಾನಯನ ಪ್ರದೇಶಗಳಲ್ಲಿ ಎದುರಾಗಿರುವ ಆತಂಕಕಾರಿ ಜಲಕ್ಷಾಮದ ಚಿತ್ರಣವನ್ನು ತೆರೆದಿಟ್ಟರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪರಿಸ್ಥಿತಿ ತೀರಾ ಚಿಂತಾಜನಕವಾಗಿದೆ. ಉತ್ತರ ಕರ್ನಾಟಕದ ಪ್ರಮುಖ ಜಲಮೂಲಗಳಾದ ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ನಾರಾಯಣಪುರ ಹಾಗೂ ಹಿರಿಯೂರಿನ ವಾಣಿವಿಲಾಸ ಸಾಗರ ಅಣೆಕಟ್ಟುಗಳಿಗೆ ಬರುತ್ತಿದ್ದ ನೀರಿನ ಪ್ರಮಾಣ ಪ್ರಸ್ತುತ ಶೂನ್ಯಕ್ಕೆ ಬಂದು ನಿಂತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಮತ್ತೊಂದೆಡೆ ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಕಾವೇರಿ ನದಿ ಪಾತ್ರದಲ್ಲೂ ಮಳೆಯಿಲ್ಲದೆ ಜಲಾಶಯಗಳು ಬತ್ತುತ್ತಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ ಹೇಮಾವತಿ ಜಲಾಶಯದಲ್ಲಿ 80 ಅಡಿಗಳಷ್ಟು ನೀರಿದ್ದರೆ, ಈ ಬಾರಿ ಅದು ಕೇವಲ 40 ಅಡಿಗೆ ಕುಸಿದಿದೆ. ಇನ್ನು ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದಲ್ಲಿ ಕಳೆದ ಬಾರಿ 100 ಅಡಿ ನೀರಿದ್ದು, ಪ್ರಸ್ತುತ 22 ಅಡಿಗೆ ತಲುಪಿದೆ. ಕಬಿನಿ ಜಲಾಶಯದ ಸ್ಥಿತಿಯೂ ಭಿನ್ನವಾಗಿಲ್ಲ; ಕಳೆದ ವರ್ಷ 79 ಅಡಿ ಇದ್ದ ನೀರಿನ ಮಟ್ಟ ಈಗ ಕೇವಲ 26 ಅಡಿಗೆ ಬಂದು ನಿಂತಿದೆ. ಒಟ್ಟಾರೆಯಾಗಿ ಈ ಭಾಗದ ಅಣೆಕಟ್ಟುಗಳ ಒಳಹರಿವು ಶೇ. 20 ರಷ್ಟು ಮಾತ್ರ ಉಳಿದುಕೊಂಡಿದೆ.

ಪ್ರಸ್ತುತ ಕಠಿಣ ಪರಿಸ್ಥಿತಿ ಇರುವುದರಿಂದ ನೀರು ಬಿಡುವಂತೆ ರೈತರು ಸರ್ಕಾರದ ಮೇಲೆ ಒತ್ತಡ ಹೇರಬಾರದು. ಮುಂಬರುವ ದಿನಗಳಲ್ಲಿ ಮಳೆಯ ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು ಬೆಳೆ ಯೋಜನೆ ರೂಪಿಸಬೇಕು. ಒಂದು ವೇಳೆ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿದರೆ, ಸರ್ಕಾರ ಖಂಡಿತವಾಗಿಯೂ ಕೃಷಿಗೆ ನೀರು ಒದಗಿಸಲು ಬದ್ಧವಾಗಿದೆ ಎಂದು ಭರವಸೆ ನೀಡಿದರು.

Dailyhunt
Disclaimer: This content has not been generated, created or edited by Dailyhunt. Publisher: Suddione