Dailyhunt Logo
  • Light mode
    Follow system
    Dark mode
    • Play Story
    • App Story
ಸಂಪುಟ ಸೇರುವ ಆಸೆ ಬಹಿರಂಗಪಡಿಸಿದ ಸಮರ್ಥ ಶಾಮನೂರು

ಸಂಪುಟ ಸೇರುವ ಆಸೆ ಬಹಿರಂಗಪಡಿಸಿದ ಸಮರ್ಥ ಶಾಮನೂರು

ಸುದ್ದಿಒನ್, ದಾವಣಗೆರೆ, ಜೂನ್‌. 01 : ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತ ಚರ್ಚೆಗಳು ಜೋರಾಗಿರುವ ನಡುವೆಯೇ, ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ ಶಾಮನೂರು ತಮ್ಮ ಸಚಿವ ಸ್ಥಾನದ ಆಕಾಂಕ್ಷೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.

ಅವಕಾಶ ಸಿಕ್ಕರೆ ಸಚಿವರಾಗಿ ಜವಾಬ್ದಾರಿ ನಿರ್ವಹಿಸಲು ಸಂಪೂರ್ಣ ಸಿದ್ಧನಿದ್ದೇನೆ ಎಂದು ಅವರು ಹೇಳಿದ್ದಾರೆ.ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಮರ್ಥ ಶಾಮನೂರು, ಸಚಿವ ಸ್ಥಾನ ಸಿಕ್ಕರೆ ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ವೇಗ ನೀಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

"ಸಚಿವ ಸ್ಥಾನ ದೊರೆತರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬಹುದು. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಅಧಿಕಾರ ಸಹಕಾರಿಯಾಗುತ್ತದೆ. ಆದ್ದರಿಂದ ಅವಕಾಶ ಸಿಕ್ಕರೆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ" ಎಂದು ಅವರು ಹೇಳಿದರು.ಸಂಪುಟದಲ್ಲಿ ಮೊದಲ ಬಾರಿಗೆ ಆಯ್ಕೆಯಾದ ಶಾಸಕರಿಗೆ ಅವಕಾಶ ನೀಡುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ಸ್ಥಾನ ನೀಡುವುದು ಅಥವಾ ನೀಡದಿರುವುದು ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಷಯ ಎಂದು ಹೇಳಿದರು.

"ಪಕ್ಷದ ನಾಯಕತ್ವ ಯಾವ ನಿರ್ಧಾರ ಕೈಗೊಂಡರೂ ಅದನ್ನು ಗೌರವಿಸುತ್ತೇವೆ. ಆದರೆ ಜವಾಬ್ದಾರಿ ನೀಡಿದರೆ ಅದನ್ನು ನಿರ್ವಹಿಸಲು ನಾನು ಸಿದ್ಧನಿದ್ದೇನೆ" ಎಂದು ಸ್ಪಷ್ಟಪಡಿಸಿದರು.ತಮ್ಮ ರಾಜಕೀಯ ಆಕಾಂಕ್ಷೆಯನ್ನು ನೇರವಾಗಿ ವ್ಯಕ್ತಪಡಿಸಿದ ಸಮರ್ಥ ಶಾಮನೂರು, "ಸಚಿವ ಸ್ಥಾನ ಕೊಟ್ಟರೆ ಯಾರು ಬೇಡ ಎನ್ನುತ್ತಾರೆ? ರಾಜಕೀಯದಲ್ಲಿ ಇರುವ ಪ್ರತಿಯೊಬ್ಬರಿಗೂ ಹೆಚ್ಚಿನ ಜವಾಬ್ದಾರಿ ಹೊತ್ತು ಜನಸೇವೆ ಮಾಡುವ ಆಸೆ ಇರುತ್ತದೆ. ನನಗೂ ಅಂತಹ ಆಸೆಯಿದೆ. ಹೊಸ ಮುಖಗಳಿಗೆ ಅವಕಾಶ ನೀಡಿದರೆ ಹೊಸ ಉತ್ಸಾಹ ಮತ್ತು ಹೊಸ ಆಲೋಚನೆಗಳೊಂದಿಗೆ ಕೆಲಸ ಮಾಡಲು ಸಾಧ್ಯ" ಎಂದರು.

ದಾವಣಗೆರೆಯ ಪ್ರಭಾವಿ ರಾಜಕೀಯ ಕುಟುಂಬದ ಹಿನ್ನೆಲೆಯುಳ್ಳ ಸಮರ್ಥ ಶಾಮನೂರು, ಮೊದಲ ಅವಧಿಯ ಶಾಸಕರಾಗಿಯೇ ಸಚಿವ ಸ್ಥಾನ ಕುರಿತ ತಮ್ಮ ಆಸೆಯನ್ನು ಬಹಿರಂಗಪಡಿಸಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಮುಂಬರುವ ಸಂಪುಟ ವಿಸ್ತರಣೆಯಲ್ಲಿ ಯುವ ಶಾಸಕರಿಗೆ ಅವಕಾಶ ಸಿಗುತ್ತದೆಯೇ ಎಂಬ ಕುತೂಹಲವೂ ಹೆಚ್ಚಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Suddione