Tuesday, 15 Sep, 9.41 pm Tamil News

Posts
ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಬಿಡದ ಕೊರೊನಾ: ಮತ್ತೆ ಅದೇ ಆಟಗಾರನಿಗೆ ಕೋವಿಡ್-19 ಪಾಸಿಟಿವ್‌!

ಹೊಸದಿಲ್ಲಿ: ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗಲೇ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಮತ್ತೊಮ್ಮೆ ಆಘಾತಕ್ಕೆ ಸಿಲುಕಿದೆ. ಯುವ ಬ್ಯಾಟ್ಸ್‌ಮನ್‌ ಋತುರಾಜ್‌ ಗಾಯಕ್ವಾಡ್‌ ಅವರ ಕೋವಿಡ್‌-19 ಟೆಸ್ಟ್‌ನಲ್ಲಿ ಮತ್ತೊಮ್ಮೆ ಪಾಸಿಟಿವ್‌ ವರದಿ ಬಂದಿದೆ.
ಈ ಹಿನ್ನೆಲೆಯಲ್ಲಿ ಋತುರಾಜ್‌ ಗಾಯಕ್ವಾಡ್‌ ಅವರು ಸಹ ಆಟಗಾರರು ಅಥವಾ ಸಹಾಯಕ ಸಿಬ್ಬಂದಿಯನ್ನು ಸಂಪರ್ಕಿಸುವಂತಿಲ್ಲ ಹಾಗೂ ಕ್ವಾರಂಟೈನ್‌ನಲ್ಲಿ ಮುಂದುವರಿಸಿದ್ದಾರೆ. ಸೆ.19 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆರಂಭಿಕ ಪಂದ್ಯಕ್ಕೆ ಋತುರಾಜ್‌ ಗಾಯಕ್ವಾಡ್‌ ಅವರನ್ನು ಚೆನ್ನೈ ಫ್ರಾಂಚೈಸಿ ತಯಾರಿ ಮಾಡಿಕೊಂಡಿತ್ತು. ಆದರೆ, ಇತ್ತೀಚಿನ ಬೆಳವಣಿಗೆಗಳಿಂದ ಸಿಎಸ್‌ಕೆ ಇದೀಗ ಮತ್ತೊಮ್ಮೆ ತಂಡವನ್ನು ಪರಿಷ್ಕರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಇದಕ್ಕೂ ಮುನ್ನ ಸ್ಟಾರ್‌ ವೇಗಿ ದೀಪಕ್‌ ಚಹರ್‌ ಅವರಿಗೂ ಕೊರೊನಾ ವೈರಸ್‌ ಸೋಂಕು ಇರುವುದು ದೃಢಪಟ್ಟಿತ್ತು. ಆದರೆ, ನಂತರ ನಡೆಸಿದ್ದ ಟೆಸ್ಟ್‌ನಲ್ಲಿ ಅವರ ವರದಿ ನೆಗೆಟಿವ್‌ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ತಂಡದೊಂದಿಗೆ ಅಭ್ಯಾಸಕ್ಕೆ ಅವಕಾಶ ಮಾಡಿಕೊಡಲಾಯಿತು. ಗಾಯಕ್ವಾಡ್‌ ಆರಂಭದಿಂದಲೂ ಕೋವಿಡ್‌-19 ಲಕ್ಷಣ ರಹಿತರಾಗಿದ್ದಾರೆ ಎನ್ನುವುದು ಚೆನ್ನೈ ಫ್ರಾಂಚೈಸಿ ಪಾಲಿಗೆ ಶುಭ ಸುದ್ದಿಯಾಗಿದೆ.

ಕಳೆದ ಹಲವು ವಾರಗಳ ಹಿಂದೆ ಹಿರಿಯ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ ವೈಯಕ್ತಿಕ ಕಾರಣಗಳಿಂದ ಚೆನ್ನೈ ಸೂಪರ್‌ ಕಿಂಗ್ಸ್ ಕ್ಯಾಂಪ್‌ನಿಂದ ಹೊರ ನಡೆದಿದ್ದರು ಹಾಗೂ ಅವರ ಸ್ಥಾನಕ್ಕೆ ಋತುರಾಜ್‌ ಗಾಯಕ್ವಾಡ್‌ ಅವರನ್ನು ಆಡಿಸಲು ಟೀಮ್‌ ಮ್ಯಾನೇಜ್‌ಮೆಂಟ್‌ ನಿರೀಕ್ಷೆಯಲ್ಲಿತ್ತು. ಆದರೆ ಇತ್ತೀಚಿನ ಕೋವಿಡ್‌-19 ಪಾಸಿಟಿವ್‌ ವರದಿ, ಸಿಎಸ್‌ಕೆಯ ಆರಂಭಿಕ ಪಂದ್ಯಕ್ಕೆ ಹೊಡೆತ ನೀಡಿದೆ.

ಇತ್ತೀಚಿನ ಬೆಳವಣಿಗೆಗಳಿಂದಾಗಿ ಅಂಬಾಟಿ ರಾಯುಡು ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಬಹುದಾಗಿದೆ. ಕಳೆದ ಆವೃತ್ತಿಯಲ್ಲಿ 282 ರನ್‌ಗಳನ್ನು ಗಳಿಸಿದ್ದ ಬಲಗೈ ಬ್ಯಾಟ್ಸ್‌ಮನ್‌ಗೆ ಈ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ತೋರುವ ಅನಿವಾರ್ಯತೆ ಇದೆ.

ಈ ಹಿಂದೆ ಐಪಿಎಲ್‌ ವೃತ್ತಿ ಜೀವನದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ್ದ ಅಂಬಾಟಿ ರಾಯುಡು, 30.81ರ ಸರಾಸರಿಯಲ್ಲಿ ರನ್‌ ಗಳಿಸಿದ್ದರು. 2018ರ ಆವೃತ್ತಿಯಲ್ಲಿ ಅಂಬಾಟಿ ರಾಯುಡು ತೋರಿದ್ದ ಪ್ರದರ್ಶನವನ್ನು ಎಂಎಸ್ ಧೋನಿ ಬಳಗ ಈ ಬಾರಿ ನಿರೀಕ್ಷಿಸುತ್ತಿದೆ. 2018ರ ಆವೃತ್ತಿಯಲ್ಲಿ ರಾಯುಡು 43ರ ಸರಾಸರಿಯಲ್ಲಿ 602 ರನ್‌ಗಳನ್ನು ಗಳಿಸಿದ್ದರು.
ಕಳೆದ ಆವೃತ್ತಿಯ ಫೈನಲ್‌ ಹಣಾಹಣಿಯಲ್ಲಿ ಸೋಲು ಅನುಭವಿಸಿದ್ದ ಮುಂಬೈ ಇಂಡಿಯನ್ಸ್ ವಿರುದ್ಧದ ಆರಂಭಿಕ ಪಂದ್ಯಕ್ಕೆ ಚೆನ್ನೈ ಸೂಪರ್‌ ಕಿಂಗ್ಸ್‌ ಪೂರ್ಣ ಪ್ರಮಾಣದ ತಂಡ ಕಣಕ್ಕೆ ಇಳಿಯಲಿದೆ. ಹಾಲಿ ಚಾಂಪಿಯನ್ಸ್‌ ಸವಾಲು ಎದುರಿಸಲು ಚೆನ್ನೈ ಫ್ರಾಂಚೈಸಿ ಸನ್ನದ್ದವಾಗಿದೆ ಎಂದು ಸಿಎಸ್‌ಕೆ ಮೂಲಗಳು ತಿಳಿಸಿವೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Tamil News
Top