ಸಿಲಿಕಾನ್ ಸಿಟಿ ಬೆಂಗಳೂರಿನ ಹೊರವಲಯದಲ್ಲಿ ಕ್ರೀಡಾ ಇತಿಹಾಸದಲ್ಲೇ ಹೊಸ ಮೈಲಿಗಲ್ಲೊಂದು ಸ್ಥಾಪನೆಯಾಗಿದೆ. ಆನೇಕಲ್ ತಾಲೂಕಿನ ಸೂರ್ಯನಗರದ ಇಂಡ್ಲವಾಡಿ ಗ್ರಾಮದಲ್ಲಿ ನಿರ್ಮಾಣವಾಗಲಿರುವ ದೇಶದ 2ನೇ ಅತಿ ದೊಡ್ಡ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಶಂಕುಸ್ಥಾಪನೆಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.
ಶಿವಕುಮಾರ್ ಶನಿವಾರ ನೆರವೇರಿಸಿದರು.
ಕರ್ನಾಟಕ ಗೃಹ ಮಂಡಳಿ (KHB) ವತಿಯಿಂದ ಬರೋಬ್ಬರಿ 100 ಎಕರೆ ವಿಶಾಲವಾದ ಜಾಗದಲ್ಲಿ, ಸುಮಾರು 900 ಕೋಟಿ ರೂ. ವೆಚ್ಚದಲ್ಲಿ ಈ ಅತ್ಯಾಧುನಿಕ ಹೈಟೆಕ್ ಸ್ಟೇಡಿಯಂ ತಲೆಎತ್ತಲಿದೆ. ಮುಂಬರುವ 2 ರಿಂದ 3 ವರ್ಷಗಳ ಅವಧಿಯಲ್ಲಿ ಇದರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಇದು ಬರೋಬ್ಬರಿ 80,000 ಆಸನ ಸಾಮರ್ಥ್ಯವನ್ನು ಹೊಂದಿರಲಿದೆ.

ಆನೇಕಲ್‌ನ ಸೂರ್ಯನಗರದಲ್ಲಿ ನಿರ್ಮಾಣವಾಗಲಿರುವ ನೂತನ ಕ್ರಿಕೆಟ್ ಕ್ರೀಡಾಂಗಣಕ್ಕೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು.
ಕ್ರೀಡಾಂಗಣದ ಪ್ರಮುಖ ಸೌಲಭ್ಯಗಳೇನು?
ಈ ಬಹುಪಯೋಗಿ ಕ್ರೀಡಾಂಗಣವು ಕೇವಲ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಿರದೆ, ಜಾಗತಿಕ ಮಟ್ಟದ ವಿವಿಧ ಕ್ರೀಡೆಗಳಿಗೆ ಆಸರೆಯಾಗಲಿದೆ. ವಿಶ್ವದರ್ಜೆಯ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ವಾಲಿಬಾಲ್, ಹ್ಯಾಂಡ್‌ಬಾಲ್, ಟೇಬಲ್ ಟೆನ್ನಿಸ್, ಸ್ಕ್ಯಾಷ್, ಕಬಡ್ಡಿ, ಖೋ-ಖೋ, ಜುಡೋ, ಟೈಕ್ವಾಂಡೋ, ಕುಸ್ತಿ, ಫೆನ್ಸಿಂಗ್ ಮತ್ತು ವೇಟ್ ಲಿಫ್ಟಿಂಗ್ ಸೇರಿದಂತೆ ಒಟ್ಟು 11 ಪ್ರಮುಖ ಕ್ರೀಡೆಗಳಿಗೆ ಇಲ್ಲಿ ಅಂತರಾಷ್ಟ್ರೀಯ ಮಟ್ಟದ ಅಖಾಡ ಸಿದ್ಧವಾಗಲಿದೆ.
ಬಹುಮಹಡಿ ಪಾರ್ಕಿಂಗ್ ನಿರ್ಮಾಣ
ಕ್ರೀಡಾಪಟುಗಳಿಗಾಗಿ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ಹಾಗೂ ಇತ್ತೀಚಿನ ಟ್ರೆಂಡ್ ಆಗಿರುವ ಪಾಡೆಲ್ ಮತ್ತು ಪಿಕಲ್‌ಬಾಲ್ ಅಂಕಣಗಳು ಇರಲಿವೆ. ಈಜುಪಟುಗಳಿಗಾಗಿ ಒಲಂಪಿಕ್ ಗಾತ್ರದ ಈಜುಕೊಳ, ಹೈ-ಡೈವಿಂಗ್ ಪೂಲ್ ಮತ್ತು ಪ್ರತ್ಯೇಕ ಅಭ್ಯಾಸ ಕೊಳ ನಿರ್ಮಾಣವಾಗಲಿದೆ. ಏಕಕಾಲಕ್ಕೆ 500ಕ್ಕೂ ಹೆಚ್ಚು ವಾಹನ ನಿಲ್ಲಿಸಬಹುದಾದ ಬಹುಮಹಡಿ ಪಾರ್ಕಿಂಗ್, ವಾಣಿಜ್ಯ ಮಳಿಗೆಗಳು, ಕ್ರೀಡಾ ಪರಿಕರಗಳ ಅಂಗಡಿಗಳು, ವಿಶಾಲವಾದ ಉಪಹಾರ ಗೃಹಗಳು, ಆಟಗಾರರು ಮತ್ತು ಸಿಬ್ಬಂದಿಗೆ ಹೈಟೆಕ್ ವಸತಿ ಗೃಹಗಳು, ಗಣ್ಯರಿಗಾಗಿ ಹೆಲಿಪ್ಯಾಡ್ ಹಾಗೂ ಸುತ್ತಲೂ ಆಕರ್ಷಕ ಹಸಿರು ವಲಯ ಇರಲಿದೆ.
ದೇಶದ ಪ್ರಮುಖ ಕ್ರಿಕೆಟ್ ಕ್ರೀಡಾಂಗಣ
ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣವು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಸುಮಾರು 1,32,000 ಆಸನ ಸಾಮರ್ಥ್ಯವನ್ನು ಹೊಂದಿದೆ. ಕೋಲ್ಕತ್ತಾದಲ್ಲಿರುವ ಈಡನ್ ಗಾರ್ಡನ್ಸ್ ಕ್ರೀಡಾಂಗಣ ಭಾರತದ ಅತ್ಯಂತ ಹಳೆಯ ಮತ್ತು ಐತಿಹಾಸಿಕ ಕ್ರೀಡಾಂಗಣಗಳಲ್ಲಿ ಒಂದಾಗಿದೆ. ಮುಂಬೈನಲ್ಲಿರುವ ವಾಂಖೆಡೆ ಕ್ರೀಡಾಂಗಣ 2011ರ ವಿಶ್ವಕಪ್ ಫೈನಲ್ ಪಂದ್ಯ ನಡೆದ ಸ್ಥಳವಾಗಿದ್ದು, ಇದು ಆಧುನಿಕ ವಿನ್ಯಾಸದ ಕ್ರೀಡಾಂಗಣವಾಗಿದೆ. ನವದೆಹಲಿಯಲ್ಲಿರುವ ಅರುಣ್ ಜೇಟ್ಲಿ ಕ್ರೀಡಾಂಗಣ ಇದು ದೆಹಲಿಯ ಪ್ರಮುಖ ಕ್ರೀಡಾಂಗಣವಾಗಿದೆ. ಚೆನ್ನೈನಲ್ಲಿರುವ ಎಂ.ಎ. ಚಿದಂಬರಂ ಕ್ರೀಡಾಂಗಣ ಭಾರತದ ಅತ್ಯಂತ ಹಳೆಯ ಕ್ರೀಡಾಂಗಣಗಳಲ್ಲಿ ಒಂದಾಗಿದೆ.
ಎಂ. ಚಿನ್ನಸ್ವಾಮಿ ಮೈದಾನದ ವಿಶೇಷತೆ
ಉದ್ಯಾನನರಿ, ಬೆಂಗಳೂರಿನ ಹೃದಯಭಾಗದಲ್ಲಿರುವ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಪ್ರಸಿದ್ಧವಾಗಿದೆ. 1969ರಲ್ಲಿ ಸ್ಥಾಪಿತವಾದ ಈ ಕ್ರೀಡಾಂಗಣ ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತವರು ಮೈದಾನವಾಗಿದೆ ಮತ್ತು ಅತ್ಯಾಧುನಿಕ ಸೌರಶಕ್ತಿ ವ್ಯವಸ್ಥೆಯನ್ನು ಹೊಂದಿದೆ. ಪ್ರಪಂಚದ ಮೊದಲ ಸೌರಶಕ್ತಿ ಚಾಲಿತ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಒಂದಾಗಿದ್ದು, 1996ರ ವಿಶ್ವಕಪ್ ಕ್ವಾರ್ಟರ್ ಫೈನಲ್, 2011ರ ವಿಶ್ವಕಪ್ ಪಂದ್ಯಗಳು ಮತ್ತು ಐಪಿಎಲ್ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಬ್ಯಾಟಿಂಗ್ ಸ್ನೇಹಿ ಮೈದಾನವಾಗಿದ್ದು, ಸಣ್ಣ ಬೌಂಡರಿಗಳಿಂದಾಗಿ ಈ ಮೈದಾನದಲ್ಲಿ ಹೆಚ್ಚಿನ ರನ್ ದಾಖಲಾಗುತ್ತದೆ.

