ಮೇ 12 ರಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರಿಗೆ ಭಾರತ-ಪಾಕಿಸ್ತಾನ ಸಂಬಂಧಗಳ ಬಗ್ಗೆ ಪ್ರಶ್ನೆಯನ್ನು ಕೇಳಲಾಯಿತು. ಆಡಳಿತಾರೂಢ ವ್ಯವಸ್ಥೆಯಲ್ಲಿ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಪ್ರಮುಖ ಸ್ಥಾನ ಹೊಂದಿರುವುದರಿಂದ, ಅವರ ಅಭಿಪ್ರಾಯಗಳು ಸೂಕ್ಷ್ಮ ಅವಲೋಕನಕ್ಕೆ ಅರ್ಹವಾಗಿವೆ.
ಅವರು ಪಾಕಿಸ್ತಾನದ ಬಗ್ಗೆ ಆರ್‌ಎಸ್‌ಎಸ್‌ನ ಸುಪ್ರಸಿದ್ಧ ನಿಲುವುಗಳಿಗೆ ಅನುಗುಣವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಈ ನೆರೆಯ ರಾಷ್ಟ್ರದೊಂದಿಗೆ ಭಾರತವು ಹೇಗೆ ವ್ಯವಹರಿಸಬೇಕು ಎಂಬುದರ ಕುರಿತು ಅವರು ಮಾಡಿದ ಕೆಲವು ಪ್ರಸ್ತಾಪಗಳು, ಅಟಲ್ ಬಿಹಾರಿ ವಾಜಪೇಯಿ ಅವರ ದೃಷ್ಟಿಕೋನ ಮತ್ತು ನರೇಂದ್ರ ಮೋದಿಯವರು ತಮ್ಮ ಪ್ರಧಾನಿ ಅವಧಿಯ ಮೊದಲ ಎರಡು ವರ್ಷಗಳಲ್ಲಿ ಅನುಸರಿಸಿದ ವಿಧಾನವನ್ನು ನೆನಪಿಸುವಂತಿದ್ದವು.
ಪಾಕಿಸ್ತಾನ ನೀತಿಯ ದೂರದೃಷ್ಟಿ
ಹೊಸಬಾಳೆ ಅವರ ಅಭಿಪ್ರಾಯಗಳನ್ನು ಈ ಕೆಳಗಿನಂತೆ ಸಂಕ್ಷಿಪ್ತಗೊಳಿಸಬಹುದು:
-"ಎಲ್ಲ ಪ್ರಯತ್ನವನ್ನೂ ಮಾಡಲಾಗಿದೆ ಮತ್ತು ಇಂತಹ ಇನ್ನೂ ಹೆಚ್ಚಿನ ಪ್ರಯತ್ನಗಳು ಮುಂದುವರಿಯುತ್ತಲೇ ಇರಬೇಕು."
- "ಪುಲ್ವಾಮಾದಲ್ಲಿ ಮಾಡಿದಂತೆ ಪಾಕಿಸ್ತಾನವು 'ಚುಚ್ಚುಮದ್ದು' ನೀಡುತ್ತಿರುತ್ತದೆ. ಪರಿಸ್ಥಿತಿಗೆ ತಕ್ಕಂತೆ ಭಾರತ ಅವುಗಳಿಗೆ ದಿಟ್ಟವಾಗಿ ಪ್ರತಿಕ್ರಿಯೆ ನೀಡಬೇಕು. ಯಾಕೆಂದರೆ ಅದು ರಾಷ್ಟ್ರದ ಭದ್ರತೆ ಹಾಗೂ ಸ್ವಾಭಿಮಾನದ ರಕ್ಷಣೆ. ಸರ್ಕಾರಗಳು ಇದನ್ನು ಗಮನಿಸಬೇಕು ಮತ್ತು ಇದರ ಬಗ್ಗೆ ಕಾಳಜಿ ವಹಿಸಬೇಕು."
-"ಬಾಗಿಲುಗಳನ್ನು ಯಾವತ್ತೂ ಮುಚ್ಚಬಾರದು. ನಾವು ಯಾವಾಗಲೂ ಸಂವಾದದಲ್ಲಿ ತೊಡಗಿಸಿಕೊಳ್ಳಲು ಸಿದ್ಧರಿರಬೇಕು. ರಾಜತಾಂತ್ರಿಕ ಸಂಬಂಧಗಳನ್ನು ಮುಂದುವರಿಸುವುದೇ ಅದಕ್ಕಾಗಿ. ವ್ಯಾಪಾರ ಮತ್ತು ವಾಣಿಜ್ಯ ವಹಿವಾಟು ನಡೆಯುತ್ತಿದೆ, ವೀಸಾಗಳನ್ನು ನೀಡಲಾಗುತ್ತಿದೆ. ಅದನ್ನು ನಾವು ನಿಲ್ಲಿಸಬಾರದು. ಸಂವಾದಕ್ಕೆ ಒಂದು ಕಿಟಕಿ (ಅವಕಾಶ) ಇದ್ದೇ ಇರಬೇಕು."
- "ಸಂಬಂಧಗಳ ವಿಷಯದಲ್ಲಿ, ಮುಂಬೈ ಮೇಲಿನ ದಾಳಿ ಒಂದು ಮಹತ್ವದ ತಿರುವು. ಅಂದಿನಿಂದ ಶಾಂತಿಯ ಅವಧಿ ತುಂಬಾ ತುಂಬಾ ಕಡಿಮೆಯಾಗಿದೆ. ಇತರ ವಿಷಯಗಳು ಮುಂದುವರಿಯುತ್ತಿದ್ದರೂ, 'ಪರಸ್ಪರ ನಂಬಿಕೆ ಇಲ್ಲದಂತಾಗಿದೆ'."
- "ಪಾಕಿಸ್ತಾನದ ಸೇನಾ ಮತ್ತು ರಾಜಕೀಯ ನಾಯಕತ್ವವು ಭಾರತೀಯ ರಾಜಕಾರಣದ ಬಗ್ಗೆ ದ್ವೇಷ ಅಥವಾ ವಿಮುಖತೆಯನ್ನು ಬೆಳೆಸಿಕೊಂಡಿದೆ, ಆದರೆ ನಾಗರಿಕ ಸಮಾಜವು ಸಂಬಂಧಗಳನ್ನು ವೃದ್ಧಿಸಲು ಮುಂದೆ ಬರಬಹುದು."
- "ನಾಗರಿಕ ಸಮಾಜದ ಸಂಬಂಧಗಳಲ್ಲಿ ನನಗೆ ಬಲವಾದ ನಂಬಿಕೆಯಿದೆ ಏಕೆಂದರೆ ನಮ್ಮ ನಡುವೆ ಸಾಂಸ್ಕೃತಿಕ ಸಂಬಂಧಗಳಿವೆ ಮತ್ತು ನಾವು ಒಂದೇ ರಾಷ್ಟ್ರವಾಗಿದ್ದೆವು. ಆದ್ದರಿಂದ ಕನಿಷ್ಠ ಕೆಲವರಾದರೂ ಇದನ್ನು ಒತ್ತಿಹೇಳಬೇಕಾಗಿದೆ. ಹೀಗಾಗಿ ನಾಗರಿಕ ಸಮಾಜವು ಉತ್ತಮ ಸಂಬಂಧಗಳಿಗೆ ದಾರಿ ಮಾಡಿಕೊಡಬಹುದು."
ಸಂವಾದದ ಸಂಕೇತಗಳನ್ನು ಸ್ವಾಗತಿಸಿದ ಪಾಕಿಸ್ತಾನ
ಮೇ 14 ರಂದು ನಡೆದ ಮಾಧ್ಯಮ ಗೋಷ್ಠಿಯಲ್ಲಿ, ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ತಾಹೀರ್ ಅಂದ್ರಬಿ ಅವರಿಗೆ, ಹೊಸಬಾಳೆ ಅವರ "ಸಂವಾದದ ಕರೆ"ಯನ್ನು ಮಾಜಿ ಭೂಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರು ಬೆಂಬಲ ನೀಡಿರುವ ಬಗ್ಗೆ ಪ್ರಶ್ನೆ ಕೇಳಲಾಯಿತು.
ಪಾಕಿಸ್ತಾನದ ಅತ್ಯಂತ ವಿಶ್ವಾಸಾರ್ಹ ದಿನಪತ್ರಿಕೆ 'ಡಾನ್' ವರದಿ ಮಾಡಿದಂತೆ ಅಂದ್ರಬಿ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ: "ಭಾರತದ ಒಳಗಿನಿಂದ ಮಾತುಕತೆಗಾಗಿ ಕೇಳಿಬರುತ್ತಿರುವ ಧ್ವನಿಗಳು ನಿಸ್ಸಂದೇಹವಾಗಿ ಒಂದು ಸಕಾರಾತ್ಮಕ ಬೆಳವಣಿಗೆ. ಭಾರತದಲ್ಲಿ ವಿವೇಕವು ಜಾಗೃತಗೊಳ್ಳುತ್ತದೆ ಮತ್ತು ಕಳೆದ ಹಲವು ತಿಂಗಳುಗಳಿಂದ ಹಾಗೂ ವರ್ಷಗಳಿಂದ ಹೊರಹೊಮ್ಮುತ್ತಿರುವ ಯುದ್ಧದ ಉನ್ಮಾದ ಮತ್ತು ಆಕ್ರಮಣಕಾರಿ ಧೋರಣೆಯು ಕಣ್ಮರೆಯಾಗಿ, ಇಂತಹ ಮತ್ತಷ್ಟು ಧ್ವನಿಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ನಾವು ಆಶಿಸುತ್ತೇವೆ."
ಭಾರತ ಮತ್ತು ಪಾಕಿಸ್ತಾನದ ನಡುವೆ ರಹಸ್ಯ ಮಾತುಕತೆಗಳು (ಹಿಂಬಾಗಿಲ ಮಾತುಕತೆ) ನಡೆಯುತ್ತಿವೆಯೇ ಎಂಬ ಬಗ್ಗೆಯೂ ಅಂದ್ರಬಿ ಅವರನ್ನು ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಅವರನ್ನು 'ಡಾನ್' ಪತ್ರಿಕೆ ಹೀಗೆ ಉಲ್ಲೇಖಿಸಿದೆ: "ಟ್ರಾಕ್ ಟು (Track Two) ಅಥವಾ ಬ್ಯಾಕ್ಚಾನೆಲ್ ಮಾತುಕತೆಗಳ ಬಗ್ಗೆ ಪ್ರಸ್ತಾಪ ಮಾಡುವುದಾದರೆ, ನನಗೆ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ನಾನು ಅವುಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಒಂದು ವೇಳೆ ನಾನು ಅದರ ಬಗ್ಗೆ ಪ್ರತಿಕ್ರಿಯೆ ನೀಡಿದರೆ, ಅದು ಬ್ಯಾಕ್ಚಾನೆಲ್ ಆಗಿ ಉಳಿಯುವುದಿಲ್ಲ. ಬ್ಯಾಕ್ಚಾನೆಲ್ ಅಥವಾ ಟ್ರಾಕ್ ಟು ಎಂಬ ಹೆಸರೇ ಅದರ ಅರ್ಥವನ್ನು ಸ್ಪಷ್ಟಪಡಿಸುತ್ತದೆ."
ಹೊಸಬಾಳೆ ಅವರ ಹೇಳಿಕೆಗಳನ್ನು ಬಳಸಿಕೊಂಡು ಮೋದಿ ಸರ್ಕಾರದ "ಆಕ್ರಮಣಶೀಲತೆ" ಮತ್ತು "ವೈಷಮ್ಯ"ವನ್ನು ಟೀಕಿಸುವ ಅವಕಾಶವನ್ನು ಅಂದ್ರಬಿ ಖಂಡಿತವಾಗಿಯೂ ಕೈಬಿಡಲಿಲ್ಲ. 2016ರ ಸರ್ಜಿಕಲ್ ಸ್ಟ್ರೈಕ್, ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ನಡೆದ ಬಾಲಾಕೋಟ್ ವಾಯುದಾಳಿ ಮತ್ತು 2019ರ ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ತರಲಾದ ಸಾಂವಿಧಾನಿಕ ಬದಲಾವಣೆಗಳ ನಂತರ, ಪಾಕಿಸ್ತಾನವು ಮೋದಿ ಅವರ ಧೋರಣೆಯನ್ನು ನಿರಂತರವಾಗಿ ಖಂಡಿಸುತ್ತಲೇ ಬಂದಿದೆ.
ನಾಗರಿಕ ಸಮಾಜ v/s ಸೈದ್ಧಾಂತಿಕ ನಿಲುವು
ಬಹುಶಃ ಹೊಸಬಾಳೆ ಅವರು ತಮ್ಮ ಉದಾರ ನಿಲುವಿನಲ್ಲಿ, ಆ ಸಮಯದಲ್ಲಿ ಪಾಕಿಸ್ತಾನವು ವಿಶ್ವಸಂಸ್ಥೆಯ ಮಹಾಸಭೆಯ ವೇದಿಕೆ ಸೇರಿದಂತೆ ವಿವಿಧೆಡೆ ಆರ್‌ಎಸ್‌ಎಸ್ ವಿರುದ್ಧ ಕಾರಿದ್ದ ವಿಷವನ್ನು ಮರೆತಿರಬಹುದು ಅಥವಾ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ವಹಿಸಿರಲೂಬಹುದು. ಖಂಡಿತವಾಗಿಯೂ, ಹೊಸಬಾಳೆ ಅವರು ಇದನ್ನು ನಿರ್ಲಕ್ಷಿಸಲು ಸಾಧ್ಯವಾಗಿರಬಹುದು ಏಕೆಂದರೆ ಅವರು ಒಂದು ಕಡೆ ಪಾಕಿಸ್ತಾನದ ರಾಜಕೀಯ ಮತ್ತು ಮಿಲಿಟರಿ ನಾಯಕತ್ವವನ್ನು, ಮತ್ತೊಂದು ಕಡೆ ಅಲ್ಲಿನ ನಾಗರಿಕ ಸಮಾಜವನ್ನು ಪ್ರತ್ಯೇಕವಾಗಿ ನೋಡಿದ್ದಾರೆ.
ಆದರೆ ವಾಸ್ತವವೆಂದರೆ, ಪಾಕಿಸ್ತಾನದ ಹೆಚ್ಚಿನ ನಾಗರಿಕ ಸಮಾಜವೂ ಕೂಡ ಆರ್‌ಎಸ್‌ಎಸ್ ಬಗ್ಗೆ ಅಲ್ಲಿನ ರಾಜಕೀಯ ಮತ್ತು ಮಿಲಿಟರಿ ನಾಯಕತ್ವ ಹೊಂದಿರುವ ಅದೇ ದೃಷ್ಟಿಕೋನವನ್ನೇ ಹೊಂದಿದೆ. ಪಹಲ್ಗಾಮ್ ದಾಳಿ ಮತ್ತು ಅದರ ಬೆನ್ನಲ್ಲೇ ನಡೆದ 'ಆಪರೇಷನ್ ಸಿಂಧೂರ್' ನಂತರ ಮೋದಿ ಅವರ ನೀತಿಗಳಿಂದ ಪಾಕಿಸ್ತಾನವು ವಿಶೇಷವಾಗಿ ತೊಂದರೆಗೆ ಒಳಗಾಗಿದೆ. ಈ ಮಿಲಿಟರಿ ಕಾರ್ಯಾಚರಣೆಯ ಹಗೆತನವು 88 ಗಂಟೆಗಳ ನಂತರ ನಿಂತಿತು. ಆದಾಗ್ಯೂ, ಸ್ಥಗಿತಗೊಂಡಿರುವ ಸಂವಾದ ಮತ್ತು ಪಾಕಿಸ್ತಾನವನ್ನು ಅತ್ಯಂತ ಹೆಚ್ಚು ಕಾಡುತ್ತಿರುವ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ (ಐಡಬ್ಲ್ಯುಟಿ) ಅಮಾನತು ಪ್ರಕ್ರಿಯೆ ಇನ್ನೂ ಮುಂದುವರಿದಿದೆ.
ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಸಂವಾದದ ಪುನರಾರಂಭವು ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಮರುಸ್ಥಾಪನೆಗೆ ದಾರಿ ಮಾಡಿಕೊಡುತ್ತದೆ ಎಂದು ಪಾಕಿಸ್ತಾನ ಆಶಿಸುತ್ತಿದೆ. ಸಾಧ್ಯವಾದಷ್ಟು ಅದು ಜಾರಿಗೆ ಬರಬೇಕು ಎಂದು ಬಯಸುತ್ತದೆ.ಗಮನಾರ್ಹ ಸಂಗತಿಯೆಂದರೆ, ಭಾರತ ಮತ್ತು ಪಾಕಿಸ್ತಾನ ಒಂದೇ ರಾಷ್ಟ್ರ ಎಂದು ಹೊಸಬಾಳೆ ಹೇಳಿದ್ದರ ಕುರಿತು ಅಂದ್ರಬಿ ಅವರ ಅಭಿಪ್ರಾಯವನ್ನು ಕೇಳಿರಲಿಲ್ಲ. ಒಂದು ವೇಳೆ ಕೇಳಿದ್ದರೆ, ಅವರು ಹೊಸಬಾಳೆ ಅವರ ವಿರುದ್ಧ ತೀವ್ರ ಆಕ್ರೋಶ ಹೊರಹಾಕುವ ಸಾಧ್ಯತೆ ಇತ್ತು. "ಒಂದು ರಾಷ್ಟ್ರ" ಎಂದು ಹೇಳುವ ಮೂಲಕ ಹೊಸಬಾಳೆ ಅವರು ಪಾಕಿಸ್ತಾನದ ಅಸ್ತಿತ್ವದ ಮೂಲ ಅಡಿಪಾಯಕ್ಕೇ ಪೆಟ್ಟು ಕೊಟ್ಟಿದ್ದರು. ಯಾಕೆಂದರೆ, ಪಾಕಿಸ್ತಾನವು 'ದ್ವಿರಾಷ್ಟ್ರ ಸಿದ್ಧಾಂತ'ದ ಆಧಾರದ ಮೇಲೆ ಸ್ಥಾಪಿತವಾದ ದೇಶವಾಗಿದೆ.
ಸರಳವಾಗಿ ಹೇಳುವುದಾದರೆ, ಹಿಂದೂಗಳು ಮತ್ತು ಮುಸ್ಲಿಮರು ಕೇವಲ ಎರಡು ಪ್ರತ್ಯೇಕ ರಾಷ್ಟ್ರಗಳು ಮಾತ್ರವಲ್ಲ, ಬದಲಿಗೆ ಪರಸ್ಪರ ವಿರೋಧಿ ರಾಷ್ಟ್ರಗಳೂ ಹೌದು ಎಂದು ಈ ಸಿದ್ಧಾಂತ ಪ್ರತಿಪಾದಿಸುತ್ತದೆ. ಭಾರತ-ಪಾಕಿಸ್ತಾನ ಸಂಬಂಧಗಳ ಸಹಜ ಸ್ಥಿತಿಗೆ ಮರಳುವುದು ಪಾಕಿಸ್ತಾನದ ಹಿತಾಸಕ್ತಿಗೆ ಒಳ್ಳೆಯದು ಎಂದು ನಂಬುವ ಪಾಕಿಸ್ತಾನಿ ಜನಾಂಗವೂ ಸಹ ಇದನ್ನು ನಿರಾಕರಿಸುವುದಿಲ್ಲ.
ಹಳೆಯ ಚರ್ಚೆ, ಹೊಸ ಸಂಕೇತಗಳು
ಕೆಲವು ಪಾಕಿಸ್ತಾನಿಗಳು ತಮ್ಮ ಹಿಂದೂ ಮೂಲವನ್ನು ನಿರಾಕರಿಸುವುದಿಲ್ಲ, ಆದರೂ ಹೆಚ್ಚಿನವರು-ಅದರಲ್ಲೂ ವಿಶೇಷವಾಗಿ ಸಾಂಪ್ರದಾಯಿಕ ಉನ್ನತ ವರ್ಗದವರು ಮತ್ತು ಹೊಸ ಗಣ್ಯರು-ತಮ್ಮ ಪೂರ್ವಜರನ್ನು ಇರಾನ್, ಮಧ್ಯ ಏಷ್ಯಾ ಮತ್ತು ಅರೇಬಿಯಾದಲ್ಲಿ ಹುಡುಕುತ್ತಾರೆ. ಇದು ಬಹುತೇಕ ಎಲ್ಲಾ ಪಾಕಿಸ್ತಾನಿಗಳು ದ್ವಿರಾಷ್ಟ್ರ ಸಿದ್ಧಾಂತವನ್ನು ತಮ್ಮ ಹೃದಯ ಮತ್ತು ಮನಸ್ಸಿಗೆ ಎಷ್ಟು ಹತ್ತಿರವಾಗಿ ಇಟ್ಟುಕೊಂಡಿದ್ದಾರೆ ಎಂಬುದನ್ನು ಮತ್ತೊಮ್ಮೆ ಸಾಕ್ಷೀಕರಿಸುತ್ತದೆ.
ಆದ್ದರಿಂದ, ಭಾರತ ಮತ್ತು ಪಾಕಿಸ್ತಾನದ ನಾಗರಿಕ ಸಮಾಜಗಳ ನಡುವಿನ ನಿರಂತರ ಸಂವಹನವು, "ಒಂದಾನೊಂದು ಕಾಲದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸಮಾನ ರಾಷ್ಟ್ರೀಯತೆ ಇತ್ತು" ಎಂಬ ಕಲ್ಪನೆಯನ್ನು ಪಾಕಿಸ್ತಾನಿಗಳ ಮನಸ್ಸಿನಲ್ಲಿ ಮೂಡಿಸುತ್ತದೆ ಎಂದು ಆಶಿಸಲು ಯಾವುದೇ ಅವಕಾಶವಿಲ್ಲ.
ಹೀಗಾಗಿ, ನಾಗರಿಕ ಸಮಾಜದ ಸಂವಹನವನ್ನು ಉತ್ತೇಜಿಸಿದರೂ ಕೂಡ, ಅದು ಭಾರತದ ಬಗ್ಗೆ ಪಾಕಿಸ್ತಾನದ ದೃಷ್ಟಿಕೋನದಲ್ಲಿ ಬದಲಾವಣೆ ತರುತ್ತದೆ ಎಂಬ ಯಾವುದೇ ಭ್ರಮೆ ಇಟ್ಟುಕೊಳ್ಳಬಾರದು.ಭಾರತ-ಪಾಕಿಸ್ತಾನ ಸಂವಾದದ ಕುರಿತು ಹೊಸಬಾಳೆ ಅವರ ಅಭಿಪ್ರಾಯಗಳು ಹಳೆಯ ನೀತಿಯನ್ನು ನೆನಪಿಸುತ್ತವೆ. ಆ ಹಳೆಯ ನೀತಿಯೇ ಭಯೋತ್ಪಾದಕ ದಾಳಿಗಳನ್ನು ಅಥವಾ ಹೊಸಬಾಳೆ ಅವರು ಹೇಳುವಂತೆ 'ಚುಚ್ಚುಮದ್ದು'ಗಳನ್ನು (ಉಪಟಳಗಳು) ನಿರ್ಲಕ್ಷಿಸಿ, ಸುಮಾರು ಎರಡು ದಶಕಗಳ ಕಾಲ ಭಾರತವು ಮತ್ತೆ ಮತ್ತೆ ಮಾತುಕತೆ ನಡೆಸುವಂತೆ ಮಾಡಿತ್ತು. ಕಾರ್ಯತಂತ್ರದ ದೃಷ್ಟಿಯಿಂದ ಅವು ಕೇವಲ ಚುಚ್ಚುಮದ್ದುಗಳಾಗಿರಬಹುದು, ಏಕೆಂದರೆ ಅವು ಭಾರತದ ಪ್ರಗತಿಯನ್ನು ತಡೆಯಲು ಏನನ್ನೂ ಮಾಡಲಾಗಿಲ್ಲ. ಆದರೆ ಅವು ದೇಶಕ್ಕೆ ಭಾರಿ ಸಾಮಾಜಿಕ ಮತ್ತು ರಾಜಕೀಯ ಬೆಲೆಯನ್ನು ತಂದೊಡ್ಡುತ್ತವೆ ಎಂಬುದನ್ನು ಮರೆಯುವಂತಿಲ್ಲ.
ಇಷ್ಟು ಮಾತ್ರವಲ್ಲದೆ, ಅವು ಭದ್ರತಾ ವಲಯದಲ್ಲಿನ ವೆಚ್ಚದ ಹೆಚ್ಚಳಕ್ಕೂ ಕಾರಣವಾಗುತ್ತವೆ.
ಕೊನೆಯದಾಗಿ, ಹೊಸಬಾಳೆ ಅವರ ಈ ಹೇಳಿಕೆಗಳು ಮೋದಿ ಸರ್ಕಾರವು ತನ್ನ ಪಾಕಿಸ್ತಾನ ನೀತಿಯ ಬಗ್ಗೆ ಹೊಸ ಆಲೋಚನೆಯನ್ನು ಹೊಂದಿದೆ ಎಂಬುದನ್ನು ಸೂಚಿಸುತ್ತವೆಯೇ? ಇದಕ್ಕೆ ಕಾಲವೇ ಉತ್ತರಿಸಬೇಕು.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

