ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪನಿ ಆಪಲ್, ಕೇವಲ ಎರಡು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಬ್ಲೂಮ್‌ಬರ್ಗ್ ವರದಿಯನ್ನು ಉಲ್ಲೇಖಿಸಿ ಮಾಧ್ಯಮಗಳು ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಕಂಪನಿಯು ಕಳೆದ ವಾರ ತನ್ನ ಫಿಟ್‌ನೆಸ್ ಪ್ಲಸ್ ತಂಡದಲ್ಲಿದ್ದ ಕೆಲ ಉದ್ಯೋಗಿಗಳಿಗೆ ಮನೆಗೆ ಹೋಗುವಂತೆ ಸೂಚಿಸಿತ್ತು.
ಈ ಬಾರಿಯ ಉದ್ಯೋಗ ವಜಾ ಪ್ರಕ್ರಿಯೆಯು ಪ್ರಮುಖವಾಗಿ ಫಿಟ್‌ನೆಸ್ ಪ್ಲಸ್ ಸೇವೆಯ ಆಡಿಯೊ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯ ಮೇಲೆ ಪರಿಣಾಮ ಬೀರಿದೆ. ಈ ತಂಡವು ಆಪಲ್ ವಾಚ್ ಬಳಕೆದಾರರಿಗೆ ಮಾರ್ಗದರ್ಶಿತ ವ್ಯಾಯಾಮ ಅನುಭವವನ್ನು ಒದಗಿಸುವ 'ಟೈಂ ಟು ಟಾಕ್' ಮತ್ತು 'ಟೈಂ ಟು ರನ್' ನಂತಹ ಜನಪ್ರಿಯ ಆಡಿಯೊ ಫೀಚರ್‌ಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿತ್ತು.
ಫಿಟ್‌ನೆಸ್ ಪ್ಲಸ್ ಸೇವೆ ಸ್ಥಗಿತಗೊಳ್ಳುವುದಿಲ್ಲ
ಸಿಬ್ಬಂದಿ ವಜಾ ನಡೆದಿದ್ದರೂ ಸಹ ಫಿಟ್‌ನೆಸ್ ಪ್ಲಸ್ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಯಾವುದೇ ಯೋಜನೆಯಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಆದರೆ, ಮುಂದಿನ ದಿನಗಳಲ್ಲಿ ಈ ವೇದಿಕೆಯಲ್ಲಿ ಹೊಸ ಆಡಿಯೊ ಕಂಟೆಂಟ್‌ಗಳ ಬಿಡುಗಡೆಯ ಪ್ರಮಾಣ ಹಾಗೂ ವೇಗ ಕಡಿಮೆಯಾಗುವ ಸಾಧ್ಯತೆಯಿದೆ. ಆಪಲ್‌ನ ಚಂದಾದಾರಿಕೆ ಆಧಾರಿತ ಈ ಸೇವೆಯು Apple Watch ಮೂಲಕ ಬಳಕೆದಾರರಿಗೆ ವಿವಿಧ ರೀತಿಯ ವರ್ಕೌಟ್ ಕಾರ್ಯಕ್ರಮಗಳನ್ನು ಒದಗಿಸುತ್ತಿದೆ.
ಆಗಸ್ಟ್‌ನಲ್ಲೂ ನಡೆದಿತ್ತು ಬೃಹತ್ ಉದ್ಯೋಗ ಕಡಿತ
ಇದಕ್ಕೂ ಮುನ್ನ ಆಗಸ್ಟ್ ತಿಂಗಳಿನಲ್ಲಿ ಆಪಲ್ 200ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಆ ಸಮಯದಲ್ಲಿಸಿರಿ, ವಿಷನ್ ಪ್ರೋ ಸೇರಿದಂತೆ ವಿವಿಧ ವಿಭಾಗಗಳ ಮೇಲೆ ಈ ನಿರ್ಧಾರದ ನೇರ ಪರಿಣಾಮ ಬೀರಿದ್ದು, ವಿಷನ್ ಪ್ರೋ ತಂಡ ಒಂದರಲ್ಲೇ ಸುಮಾರು 100 ಹುದ್ದೆಗಳು ಹಾಗೂ ಸಿರಿ ಸೇರಿದಂತೆ ಇತರ ಸಾಫ್ಟ್‌ವೇರ್ ತಂಡಗಳಲ್ಲಿ 100ಕ್ಕೂ ಹೆಚ್ಚು ಹುದ್ದೆಗಳನ್ನು ರದ್ದುಗೊಳಿಸಲಾಗಿತ್ತು. ಕಂಪನಿಯ ಅಭಿವೃದ್ಧಿ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಈ ಪುನರ್‌ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಆಪಲ್ ಆ ಸಂದರ್ಭದಲ್ಲಿ ಸಮರ್ಥಿಸಿಕೊಂಡಿತ್ತು.
ಹೆಲ್ತ್ ಆಯಪ್‌ನೊಂದಿಗೆ ಫಿಟ್‌ನೆಟ್ ಪ್ಲಸ್ ವಿಲೀನಗೊಳ್ಳುವ ಸಾಧ್ಯತೆ
ಫಿಟ್‌ನೆಸ್ ಪ್ಲಸ್ ಸೇವೆಯಲ್ಲಿ ಕಂಟೆಂಟ್ ನಿರ್ಮಾಣಕ್ಕೆ ಸತತವಾಗಿ ಹೆಚ್ಚಿನ ಉತ್ಪಾದನಾ ವೆಚ್ಚ ತಗುಲುತ್ತಿರುವುದು ಮತ್ತು ಚಂದಾದಾರರ ಸಂಖ್ಯೆಯಲ್ಲಿನ ಏರಿಳಿತಗಳು ಕಂಪನಿಯ ಮೇಲೆ ಪರಿಣಾಮ ಬೀರಿವೆ. ಹೀಗಾಗಿ ಆಪಲ್ ತನ್ನ ಹೆಲ್ತ್ ಆಯಪ್‌ನಲ್ಲೇ ಆರೋಗ್ಯ ಮಾರ್ಗದರ್ಶನ ಮತ್ತು ವಿವಿಧ ಮಾನದಂಡಗಳನ್ನು ವಿವರಿಸುವ ವೀಡಿಯೊಗಳನ್ನು ಪರಿಚಯಿಸಲು ಚಿಂತಿಸುತ್ತಿದೆ. ಈ ಕಾರಣದಿಂದಾಗಿ ಮುಂದಿನ ದಿನಗಳಲ್ಲಿಫಿಟ್‌ನೆಸ್ ಪ್ಲಸ್ ಸೇವೆಯನ್ನು ಹೆಲ್ತ್ ಆಯಪ್‌ನೊಂದಿಗೆ ಸಂಪೂರ್ಣವಾಗಿ ಸಂಯೋಜಿಸುವ ಅಥವಾ ವಿಲೀನಗೊಳಿಸುವ ಚರ್ಚೆಗಳು ತಜ್ಞರ ವಲಯದಲ್ಲಿ ನಡೆಯುತ್ತಿವೆ.

