Dailyhunt
Iran War| ಇರಾನ್‌ನಿಂದ ಭಾರತದ ಹಡಗುಗಳಿಗೆ ಗ್ರೀನ್ ಸಿಗ್ನಲ್; ಹಾರ್ಮುಜ್ ಜಲಸಂಧಿ ದಾಟಿದ 8 ನೌಕೆಗಳು

Iran War| ಇರಾನ್‌ನಿಂದ ಭಾರತದ ಹಡಗುಗಳಿಗೆ ಗ್ರೀನ್ ಸಿಗ್ನಲ್; ಹಾರ್ಮುಜ್ ಜಲಸಂಧಿ ದಾಟಿದ 8 ನೌಕೆಗಳು

ಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಕವಿದಿದ್ದರೂ, ಜಾಗತಿಕ ತೈಲ ಮತ್ತು ಅನಿಲ ಸಾಗಣೆಯ ಅತ್ಯಂತ ನಿರ್ಣಾಯಕ ಮಾರ್ಗವಾದ 'ಹಾರ್ಮುಜ್ ಜಲಸಂಧಿ'ಯನ್ನು ಭಾರತದ ಧ್ವಜ ಹೊಂದಿರುವ ಎಂಟು ಹಡಗುಗಳು ಯಶಸ್ವಿಯಾಗಿ ದಾಟಿವೆ.

ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿದ ನಂತರ ಈ ಜಲಮಾರ್ಗದಲ್ಲಿ ಸಂಚಾರ ವ್ಯತ್ಯಯಗೊಂಡಿತ್ತು.

ಕಳೆದ 35 ದಿನಗಳಿಂದ ಯುದ್ಧ ನಡೆಯುತ್ತಿದ್ದು, ಇರಾನ್ ಮತ್ತು ಓಮನ್ ನಡುವೆ ಇರುವ ಈ ಜಲಸಂಧಿಯ ಮೇಲೆ ಇರಾನ್ ತನ್ನ ಹಿಡಿತವನ್ನು ಬಿಗಿಗೊಳಿಸಿದೆ. ಆದರೂ, ಭಾರತ ಸೇರಿದಂತೆ ತನ್ನ 'ಸ್ನೇಹಿ ರಾಷ್ಟ್ರಗಳ' ಹಡಗುಗಳಿಗೆ ಸಂಚಾರಕ್ಕೆ ಇರಾನ್ ಅವಕಾಶ ನೀಡಿದೆ.

"ಭಾರತೀಯ ಸ್ನೇಹಿತರು ಸುರಕ್ಷಿತ": ಇರಾನ್ ರಾಯಭಾರ ಕಚೇರಿ

ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿಯು ಗುರುವಾರ ತನ್ನ 'X' (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದು, "ನಮ್ಮ ಭಾರತೀಯ ಸ್ನೇಹಿತರು ಸುರಕ್ಷಿತ ಕೈಗಳಲ್ಲಿದ್ದಾರೆ, ಆತಂಕ ಬೇಡ" ಎಂದು ಭರವಸೆ ನೀಡಿದೆ. ಇರಾನ್ ಪ್ರಸ್ತುತ ಭಾರತ, ಚೀನಾ, ರಷ್ಯಾ, ಪಾಕಿಸ್ತಾನ ಮತ್ತು ಇರಾಕ್ ದೇಶಗಳ ಹಡಗುಗಳಿಗೆ ಮಾತ್ರ ಈ ಮಾರ್ಗದಲ್ಲಿ ಸಂಚರಿಸಲು ಅನುಮತಿ ನೀಡುತ್ತಿದೆ.

ಸುರಕ್ಷಿತವಾಗಿ ದಾಟಿದ ಭಾರತೀಯ ಹಡಗುಗಳು

ವರದಿಗಳ ಪ್ರಕಾರ, ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದ ಎಂಟು ಹಡಗುಗಳ ಪಟ್ಟಿಯಲ್ಲಿ ಶಿವಾಲಿಕ್, ನಂದಾದೇವಿ, ಜಗ್ ಲಾಡ್ಕಿ, ಪೈನ್ ಗ್ಯಾಸ್, ಜಗ್ ವಸಂತ್, BW ಟೈರ್, BW ಎಲ್ಮ್ ಮತ್ತು ಗ್ರೀನ್ ಸಾನ್ವಿ ಸೇರಿವೆ.

ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯವು ಶುಕ್ರವಾರ ಮಾಹಿತಿ ನೀಡಿದ್ದು, ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಹಡಗುಗಳು ಮತ್ತು ನಾವಿಕರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಪ್ರಸ್ತುತ 485 ಭಾರತೀಯ ನಾವಿಕರನ್ನು ಒಳಗೊಂಡ ಒಟ್ಟು 18 ಭಾರತೀಯ ಹಡಗುಗಳು ಪಶ್ಚಿಮ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿವೆ.

ವಿಶ್ವಸಂಸ್ಥೆಯಲ್ಲಿ ನಿರ್ಣಾಯಕ ಮತದಾನ

ಇನ್ನೊಂದೆಡೆ, ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯುವ ಕುರಿತು ಬಹ್ರೇನ್ ಪ್ರಸ್ತಾಪಿಸಿರುವ ಕರಡು ನಿರ್ಣಯದ ಮೇಲೆ ಶನಿವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಮತದಾನ ನಡೆಯಲಿದೆ.

ಹಾರ್ಮುಜ್ ಜಲಸಂಧಿಯು ಎಲ್ಲಾ ಹಡಗುಗಳ ಸಂಚಾರಕ್ಕೆ ಮುಕ್ತವಾಗಿದೆ ಮತ್ತು ಯಾವುದೇ ದೇಶವು ಇದನ್ನು ಮುಚ್ಚುವ ಅಥವಾ ನಿಯಂತ್ರಿಸುವ ಹಕ್ಕನ್ನು ಹೊಂದಿಲ್ಲ ಎಂದು ಈ ನಿರ್ಣಯ ಹೇಳುತ್ತದೆ. ಅಂತರಾಷ್ಟ್ರೀಯ ಹಡಗು ಸಂಚಾರಕ್ಕೆ ಅಡ್ಡಿಪಡಿಸುವ ಕೃತ್ಯಗಳನ್ನು ತಡೆಯಲು ರಾಷ್ಟ್ರಗಳು "ಕೇವಲ ರಕ್ಷಣಾತ್ಮಕ ಕ್ರಮಗಳನ್ನು" ತೆಗೆದುಕೊಳ್ಳಲು ಇದು ಅನುಮತಿಸುತ್ತದೆ.

ಚೀನಾ-ರಷ್ಯಾ ನಿಲುವು ಈ ಹಿಂದೆ ಬಲಪ್ರಯೋಗಕ್ಕೆ ಅವಕಾಶ ನೀಡುವ ಅಂಶಗಳನ್ನು ಒಳಗೊಂಡಿದ್ದ ಕರಡು ಪಠ್ಯಕ್ಕೆ ರಷ್ಯಾ ಮತ್ತು ಚೀನಾ ವಿರೋಧ ವ್ಯಕ್ತಪಡಿಸಿದ್ದವು. ಪಶ್ಚಿಮ ಏಷ್ಯಾದ ಈ ಸಂಘರ್ಷದ ನಡುವೆಯೂ ಭಾರತದ ತೈಲ ಆಮದು ಮತ್ತು ಕಡಲ ವ್ಯಾಪಾರಕ್ಕೆ ಧಕ್ಕೆಯಾಗದಂತೆ ಕೇಂದ್ರ ಸರ್ಕಾರವು ನಿರಂತರವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: The Federal karnaataka