Dailyhunt Logo
  • Light mode
    Follow system
    Dark mode
    • Play Story
    • App Story
ಕೆಪಿಎಸ್‌ಸಿ ಅಕ್ರಮ; ಪ್ರಿಯಾಂಕ್‌ ಖರ್ಗೆ ವಿರುದ್ಧ ಎಚ್‌ಡಿಕೆ ಗಂಭೀರ ಆರೋಪ

ಕೆಪಿಎಸ್‌ಸಿ ಅಕ್ರಮ; ಪ್ರಿಯಾಂಕ್‌ ಖರ್ಗೆ ವಿರುದ್ಧ ಎಚ್‌ಡಿಕೆ ಗಂಭೀರ ಆರೋಪ

ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಮತ್ತು ಜೆಡಿಎಸ್ ಪ್ರತ್ಯೇಕ ಕಾರ್ಯತಂತ್ರ ರೂಪಿಸಿವೆ. ವಾಲ್ಮೀಕಿ ಹಗರಣದಲ್ಲಿ ಬಿಜೆಪಿಯು ಹೋರಾಟ ತೀವ್ರಗೊಳಿಸಿರುವ ಬೆನ್ನಲ್ಲೇ, ಎನ್ಡಿಎ ಮೈತ್ರಿಯಲ್ಲಿ ತನ್ನ ಅಸ್ತಿತ್ವ ಸಾಬೀತುಪಡಿಸಲು ಜೆಡಿಎಸ್ ಧುಮುಕಿದೆ.

ಬಿಡದಿ ಟೌನ್‌ಶಿಪ್‌, ನೈಸ್ ಅಕ್ರಮ ಹಾಗೂ ಕೆಪಿಎಸ್ಸಿ ಅವ್ಯವಹಾರ ಎತ್ತಿಹಿಡಿಯಲು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಯೋಜನೆ ರೂಪಿಸಿದ್ದಾರೆ.

ಇತ್ತೀಚೆಗೆ ಆರ್‌ಎಸ್‌ಎಸ್‌ ವಿಚಾರದಲ್ಲಿ ಮೃದು ಧೋರಣೆ ತಳೆದಿರುವ ಕುಮಾರಸ್ವಾಮಿ, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೆಪಿಎಸ್ಸಿ ನೇಮಕಾತಿ ಅಕ್ರಮದ ಗಂಭೀರ ಆರೋಪ ಮಾಡಿದ್ದಾರೆ. ಪಶು ವೈದ್ಯಾಧಿಕಾರಿ ಹಾಗೂ ಆರ್ಡಿಪಿಆರ್ ಇಲಾಖೆಯ ಎಇಇ ಹುದ್ದೆಗಳ ನೇಮಕಾತಿಯಲ್ಲಿ OMR ತಿದ್ದುಪಡಿ ಸೇರಿದಂತೆ ಸಾಲು ಸಾಲು ಅಕ್ರಮ ನಡೆದಿರುವುದು ಸಿಐಡಿ ತನಿಖೆಯಿಂದ ಸಾಬೀತಾಗಿದೆ ಎಂದು ದಾಖಲೆ ಬಿಡುಗಡೆ ಮಾಡಿರುವ ಅವರು, ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ನಾಪತ್ತೆಯಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ದಿಢೀರ್ ಸಿಐಡಿ ವಿಚಾರಣೆಗೆ ಹಾಜರಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಈ ಮಧ್ಯೆ, ಕುಮಾರಸ್ವಾಮಿ ಆರೋಪಗಳಿಗೆ ತಿರುಗೇಟು ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, "ಅಧಿಕಾರಕ್ಕಾಗಿ ಸಿದ್ಧಾಂತ ಮರೆತು ಬಿಜೆಪಿಯೊಂದಿಗೆ ಕೈಜೋಡಿಸಿರುವ ಅವರಿಂದ ನಾನು ಕಲಿಯಬೇಕಾದುದು ಏನೂ ಇಲ್ಲ" ಎಂದಿದ್ದಾರೆ.

ಕಣ್ಣೀರು ತರಿಸುತ್ತಿರುವ ಈರುಳ್ಳಿ

ರಾಜ್ಯದಲ್ಲಿ ಸಕ್ಕರೆ ಮತ್ತು ಅಕ್ಕಿ ಬೆಲೆ ಏರಿಕೆಯ ಬೆನ್ನಲ್ಲೇ ಈರುಳ್ಳಿ ದರ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಕಳೆದ ತಿಂಗಳು ಕೆ.ಜಿ.ಗೆ 25-30 ರೂ.ಗಳಷ್ಟಿದ್ದ ಈರುಳ್ಳಿ ಚಿಲ್ಲರೆ ದರ, ಪ್ರಸ್ತುತ ಮಾರುಕಟ್ಟೆಯಲ್ಲಿ 60 ರಿಂದ 70 ರೂ.ಗಳಿಗೆ ಏರಿಕೆಯಾಗಿದೆ.

ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಹಾಗೂ ಎಲ್ ನಿನೋ ಪರಿಣಾಮ ಈರುಳ್ಳಿ ಬಿತ್ತನೆ ಪ್ರಮಾಣ 25 ಸಾವಿರ ಹೆಕ್ಟೇರ್ನಿಂದ 8-9 ಸಾವಿರ ಹೆಕ್ಟೇರ್ಗೆ ಕುಸಿದಿದೆ. ಎಕರೆಗೆ ಬರುತ್ತಿದ್ದ ಇಳುವರಿಯೂ ಶೇ.50ಕ್ಕಿಂತ ಕಡಿತಗೊಂಡಿರುವುದೇ ಈ ಬೆಲೆ ಜಿಗಿತಕ್ಕೆ ಮುಖ್ಯ ಕಾರಣ. ಪ್ರಸ್ತುತ ಮಹಾರಾಷ್ಟ್ರ ಹಾಗೂ ವಿಜಯಪುರದಿಂದ ಮಾರುಕಟ್ಟೆಗೆ ಆವಕವಾಗುತ್ತಿದ್ದರೂ, ಮುಂಬರುವ ಹಬ್ಬದ ಸೀಸನ್ನಲ್ಲಿ ಬೇಡಿಕೆ ಹೆಚ್ಚಾಗುವುದರಿಂದ ಬೆಲೆ 100 ರೂ. ಗಡಿ ದಾಟುವ ಆತಂಕ ಎದುರಾಗಿದೆ.

ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಈರುಳ್ಳಿ ದರ 5 ಸಾವಿರ ರೂ. ದಾಟಿದ್ದರೂ, ಇಳುವರಿ ಕೊರತೆ ಹಾಗೂ ಉಗ್ರಾಣ ಸೌಲಭ್ಯ ಇಲ್ಲದಿರುವುದರಿಂದ ಬೆಲೆ ಏರಿಕೆಯ ಲಾಭ ರೈತರಿಗೆ ಸಿಗದಿರುವುದು ದುರಂತ. ಡಿಸೆಂಬರ್-ಜನವರಿಯಲ್ಲಿ ಹೊಸ ಬೆಳೆ ಮಾರುಕಟ್ಟೆಗೆ ಬರುವವರೆಗೂ ಈರುಳ್ಳಿ ಘಾಟು ಮುಂದುವರಿಯಲಿದೆ.

ಮೈಸೂರಿಗೆ ಬಂದ ದಸರಾ ಗಜಪಡೆ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು 9 ಆನೆಗಳು ಶುಕ್ರವಾರ ಮೈಸೂರು ಅರಮನೆ ಅಂಗಳಕ್ಕೆ ಆಗಮಿಸಿದ್ದು, ಅದ್ಧೂರಿ ಸ್ವಾಗತ ಕೋರಲಾಯಿತು.

ಸತತ 6 ಬಾರಿ ಚಿನ್ನದ ಅಂಬಾರಿ ಹೊತ್ತು ಯಶಸ್ವಿಯಾಗಿದ್ದ ಹಿರಿಯ ಆನೆ 'ಅಭಿಮನ್ಯು'ಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಇತ್ತೀಚೆಗೆ ಭಾವನಾತ್ಮಕ ಬೀಳ್ಕೊಡುಗೆ ನೀಡಿದೆ. ಹೀಗಾಗಿ ಈ ಬಾರಿಯ ಚಿನ್ನದ ಅಂಬಾರಿ ಹೊರಲಿರುವ ಆನೆ ಯಾವುದು ಎಂಬ ಕುತೂಹಲ ಸಾರ್ವಜನಿಕರಲ್ಲಿ ಹೆಚ್ಚಾಗಿದೆ.

ಅರಣ್ಯ ಇಲಾಖೆಯ ಮಾಹಿತಿಯಂತೆ ಧನಂಜಯ, ಮಹೇಂದ್ರ ಹಾಗೂ ಪ್ರಶಾಂತ ಆನೆಗಳ ನಡುವೆ ಅಂಬಾರಿ ಹೊರಲು ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಆನೆಗಳ ತೂಕ, ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಸ್ಥೈರ್ಯವನ್ನು ಪರಿಶೀಲಿಸಿ ಅಂತಿಮ ಆಯ್ಕೆ ಮಾಡಲಾಗುತ್ತದೆ. ಆನೆಗಳ ಆಗಮನದೊಂದಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿದ್ಯುತ್ ದೀಪಾಲಂಕಾರ, ಪ್ರದರ್ಶನ ಮೈದಾನ ಹಾಗೂ ಸಾಂಸ್ಕೃತಿಕ ವೇದಿಕೆಗಳ ಸಿದ್ಧತೆಗಳು ಚುರುಕುಗೊಂಡಿವೆ.

Dailyhunt
Disclaimer: This content has not been generated, created or edited by Dailyhunt. Publisher: The Federal karnaataka