Dailyhunt Logo
  • Light mode
    Follow system
    Dark mode
    • Play Story
    • App Story
ಮಂಗಳೂರು|  ಬಾವಿ ನೀರಿನಲ್ಲಿ ಡೀಸೆಲ್ ಪತ್ತೆ, ಕಾವೂರು ಜನತೆ ಆತಂಕ

ಮಂಗಳೂರು| ಬಾವಿ ನೀರಿನಲ್ಲಿ ಡೀಸೆಲ್ ಪತ್ತೆ, ಕಾವೂರು ಜನತೆ ಆತಂಕ

ಮಂಗಳೂರಿನ ಕಾವೂರು ಭಾಗದಲ್ಲಿ ಸ್ಥಳೀಯ ನಿವಾಸಿಗಳ ಮನೆಯ ಕುಡಿಯುವ ನೀರಿನ ಬಾವಿಗಳಲ್ಲಿ ದಿಢೀರನೆ ಡೀಸೆಲ್ ಮಿಶ್ರಿತ ನೀರು ಉಕ್ಕಿ ಬರುತ್ತಿದ್ದು, ಇಡೀ ಪ್ರದೇಶದ ಸಾರ್ವಜನಿಕರು ಹನಿ ನೀರಿಗೂ ಪರದಾಡುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಬಾವಿಯಿಂದ ಬರುತ್ತಿದ್ದ ನೀರಿನಿಂದ ತೀವ್ರವಾದ ಇಂಧನದ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ, ಸ್ಥಳೀಯರು ತಕ್ಷಣವೇ ಜಾಗರೂಕರಾಗಿ ಆ ನೀರನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು.

ಸದ್ಯ ಪ್ರಯೋಗಾಲಯದಿಂದ ಬಂದಿರುವ ವರದಿಯು ಎಲ್ಲರನ್ನೂ ಬೆಚ್ಚಿಬೀಳಿಸುವಂತಿದ್ದು, ಬಾವಿಯ ನೀರಿನಲ್ಲಿ ಬರೋಬ್ಬರಿ ಶೇಕಡಾ 28ರಷ್ಟು ಇಂಧನ ಇರುವುದು ಪತ್ತೆಯಾಗಿದೆ.

ಈ ಆಘಾತಕಾರಿ ಬೆಳವಣಿಗೆಗೆ ಸುತ್ತಮುತ್ತಲಿನ ಪೆಟ್ರೋಲ್ ಬಂಕ್‌ಗಳ ಭೂಗತ ಟ್ಯಾಂಕ್‌ಗಳಿಂದ ಇಂಧನ ಸೋರಿಕೆಯಾಗಿರುವುದು ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಬಂಕ್‌ಗಳ ಟ್ಯಾಂಕ್‌ನಿಂದ ಸೋರಿಕೆಯಾದ ಡೀಸೆಲ್ ಅಂತರ್ಜಲದ ಮೂಲಕ ಹರಿದು ಬಂದು ಇಲ್ಲಿನ ಬಾವಿಗಳನ್ನು ಸೇರಿರಬಹುದು ಎಂದು ಅಂದಾಜಿಸಲಾಗಿದೆ.

ಬಾವಿಯ ನೀರು ಈಗ ಸಂಪೂರ್ಣವಾಗಿ ಕಲುಷಿತಗೊಂಡಿರುವುದರಿಂದ ಕುಡಿಯಲು ಮಾತ್ರವಲ್ಲದೆ ದೈನಂದಿನ ಗೃಹ ಬಳಕೆಗೂ ಸಹ ಇಲ್ಲದಂತಾಗಿದೆ. ಅಷ್ಟೇ ಅಲ್ಲದೆ, ಬಾವಿಯ ತುಂಬಾ ಇಂಧನ ತುಂಬಿರುವುದರಿಂದ ಇಡೀ ಪ್ರದೇಶದಲ್ಲಿ ಯಾವುದೇ ಕ್ಷಣದಲ್ಲೂ ಬೆಂಕಿ ಅವಘಡ ಸಂಭವಿಸಬಹುದಾದ ಭೀತಿಯೂ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಉನ್ನತ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಮತ್ತು ಇಂಧನ ಸೋರಿಕೆಯಾಗುತ್ತಿರುವ ನಿಖರ ಮೂಲವನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾವೂರು ನಿವಾಸಿಗಳು ಒತ್ತಾಯಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: The Federal karnaataka