ಮಧ್ಯಪ್ರದೇಶದ ರಾಜ್ಯಸಭಾ ಚುನಾವಣಾ ಕಣದಲ್ಲಿ ಭಾರಿ ರಾಜಕೀಯ ಹೈಡ್ರಾಮಾ ಸೃಷ್ಟಿಯಾಗಿದೆ. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಹಿರಿಯ ನಾಯಕಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡಿರುವುದನ್ನು ತೀವ್ರವಾಗಿ ಖಂಡಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಇದು ಬಿಜೆಪಿಯ "ರಾಜಕೀಯ ಷಡ್ಯಂತ್ರ ಹಾಗೂ ಪ್ರಜಾಪ್ರಭುತ್ವದ ಅಣಕ" ಎಂದು ಆಕ್ರೋಶ ಹೊರಹಾಕಿದ್ದಾರೆ.
ಬುಧವಾರ (ಜೂ.10) ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಲೋಕಸಭೆಯಲ್ಲಿ ಕೃತಕ ಸಂಖ್ಯಾಬಲ ಸೃಷ್ಟಿಸಿಕೊಂಡು ಸಂವಿಧಾನ ವಿರೋಧಿ ಮಸೂದೆಗಳನ್ನು ಜಾರಿಗೊಳಿಸಲು ಬಿಜೆಪಿ ಇಂತಹ ಕಳ್ಳಮಾರ್ಗಗಳನ್ನು ಹಿಡಿದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕುದುರೆ ವ್ಯಾಪಾರ ವಿಫಲ
ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಕೇವಲ ಇಬ್ಬರು ಅಭ್ಯರ್ಥಿಗಳನ್ನು ಮಾತ್ರ ಗೆಲ್ಲಿಸಿಕೊಳ್ಳುವ ಸಂಖ್ಯಾಬಲ ಹೊಂದಿದ್ದರೂ, ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ದೊಡ್ಡ ಮೊತ್ತದ ಹಣದ ಆಮಿಷ ಒಡ್ಡಿ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಬಿಜೆಪಿ ಎಲ್ಲಾ ಸಿದ್ಧತೆ ನಡೆಸಿತ್ತು. ಆದರೆ ಕಾಂಗ್ರೆಸ್ ಶಾಸಕರು ಒಗ್ಗಟ್ಟು ಪ್ರದರ್ಶಿಸಿದ್ದರಿಂದ ಬಿಜೆಪಿಯ ಆಟ ನಡೆಯಲಿಲ್ಲ. ಕೊನೆಗೆ ಯಾವುದೇ ದಾರಿ ಕಾಣದ ಬಿಜೆಪಿ, ತನ್ನ 'ಕಪಿಮುಷ್ಠಿ'ಯಲ್ಲಿರುವ ಚುನಾವಣಾ ಆಯೋಗವನ್ನು ಬಳಸಿಕೊಂಡು ಅಂತಿಮ ಅಸ್ತ್ರವಾಗಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನೇ ತಿರಸ್ಕರಿಸುವಂತೆ ಮಾಡಿದೆ ಎಂದು ದೂರಿದ್ದಾರೆ.
ತಿರಸ್ಕಾರ ಕಾನೂನು ಬಾಹಿರ
ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷಗಳಿರಲಿಲ್ಲ. ಆದರೂ ಉದ್ದೇಶಪೂರ್ವಕವಾಗಿ ತಪ್ಪುಗಳನ್ನು ಸೃಷ್ಟಿಸಿ ಪಕ್ಷಪಾತದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ."ಮೀನಾಕ್ಷಿ ನಟರಾಜನ್ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ಕೇವಲ ಒಂದು ಖಾಸಗಿ ದೂರು ಕ್ರಿಮಿನಲ್ ಮೊಕದ್ದಮೆಯಾಗುವುದಿಲ್ಲ. ಅವರಿಗೆ ನ್ಯಾಯಾಲಯದಿಂದ ಬಂದಿರುವುದು ಕೇವಲ ಶೋಕಾಸ್ ನೋಟಿಸ್ ಮಾತ್ರ. ಇದನ್ನು ಅಫಿಡವಿಟ್‌ನಲ್ಲಿ ಉಲ್ಲೇಖಿಸುವ ಅಗತ್ಯವಿಲ್ಲ ಎಂದು ಚುನಾವಣಾ ಆಯೋಗದ ನಿಯಮಗಳೇ ಸ್ಪಷ್ಟಪಡಿಸುತ್ತವೆ. ಹೀಗಿದ್ದೂ ನಾಮಪತ್ರ ತಿರಸ್ಕರಿಸಿರುವುದು ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ ನಿರ್ಧಾರ." ಎಂದು ಹೇಳಿದ್ದಾರೆ.
'ಮತಗಳ್ಳತನ ಮತ್ತು ಸ್ಥಾನಗಳ್ಳತನ'
ಬಿಜೆಪಿಯು ಚುನಾವಣೆಗಳನ್ನು ಗೆಲ್ಲಲು ಇವಿಎಂ ಸೇರಿದಂತೆ ಅನೇಕ ಕಳ್ಳಮಾರ್ಗಗಳನ್ನು ಬಳಸುತ್ತಿದ್ದು, 'ಮತಗಳ್ಳತನ'ವನ್ನು ಒಂದು ಅಧಿಕೃತ ದಂಧೆಯನ್ನಾಗಿ ಮಾಡಿಕೊಂಡಿದೆ. ಪ್ರಾದೇಶಿಕ ಪಕ್ಷಗಳನ್ನು ಒಡೆಯುವುದು, ಕುದುರೆ ವ್ಯಾಪಾರ ಮಾಡುವುದು, ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವುದು ಮತ್ತು ಮತದಾರರನ್ನು ದಿಕ್ಕು ತಪ್ಪಿಸುವುದು ಈ ದಂಧೆಯ ಭಾಗವಾಗಿದೆ. ಈಗ ರಾಜ್ಯಸಭೆ ಚುನಾವಣೆಯಲ್ಲೂ ಅಕ್ರಮ ಎಸಗುವ ಮೂಲಕ ಬಿಜೆಪಿ 'ಸ್ಥಾನಗಳ್ಳತನ'ಕ್ಕೆ ಇಳಿದಿದೆ. ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಡೆಯುತ್ತಿರುವ ಈ ನಿರಂತರ ದಾಳಿಯನ್ನು ಕಾಂಗ್ರೆಸ್ ಪಕ್ಷವು ಬಲವಾಗಿ ವಿರೋಧಿಸುತ್ತದೆ ಹಾಗೂ ನಾಗರಿಕರ ಪರವಾಗಿ ನಿಂತು ಇಂತಹ ಪ್ರತಿಯೊಂದು ಅನ್ಯಾಯದ ವಿರುದ್ಧ ನಿರಂತರ ಹೋರಾಟ ನಡೆಸಲಿದೆ ಎಂದು ಸ್ಪಷ್ಟಪಡಿಸಿದೆ.

