Dailyhunt
ಮುರಿದು ಬಿತ್ತೇ ಕದನ ವಿರಾಮ? ಇರಾನ್ ತೈಲ ಸಂಸ್ಕರಣಾಗಾರದ ಮೇಲೆ ದಾಳಿ?

ಮುರಿದು ಬಿತ್ತೇ ಕದನ ವಿರಾಮ? ಇರಾನ್ ತೈಲ ಸಂಸ್ಕರಣಾಗಾರದ ಮೇಲೆ ದಾಳಿ?

ಮೆರಿಕ ಮತ್ತು ಇರಾನ್ ನಡುವೆ ಕೇವಲ ಎರಡು ವಾರಗಳ ಕದನ ವಿರಾಮ ಜಾರಿಗೆ ಬಂದ ಕೆಲವೇ ಗಂಟೆಗಳಲ್ಲಿ, ಬುಧವಾರ ಇರಾನ್‌ನ 'ಲಾವನ್ ದ್ವೀಪ'ದಲ್ಲಿರುವ ತೈಲ ಸಂಸ್ಕರಣಾಗಾರದ ಮೇಲೆ ದಾಳಿ ನಡೆದಿದೆ. ಇರಾನ್ ಅಧಿಕಾರಿಗಳು ಇದನ್ನು "ಶತ್ರು ದಾಳಿ" ಎಂದು ಹೇಳಿದ್ದು, ಕದನ ವಿರಾಮ ಒಪ್ಪಂದವು ಪ್ರಾರಂಭದಲ್ಲೇ ಮುರಿದುಬೀಳುವ ಲಕ್ಷಣಗಳು ಗೋಚರಿಸುತ್ತಿವೆ.

ಇರಾನ್‌ನ ತೈಲ ಸಚಿವಾಲಯದ ಸುದ್ದಿ ಸಂಸ್ಥೆ 'ಶಾನಾ' (Shana) ವರದಿ ಮಾಡಿರುವಂತೆ, 'ನ್ಯಾಷನಲ್ ಇರಾನಿಯನ್ ಆಯಿಲ್ ರಿಫೈನಿಂಗ್ ಅಂಡ್ ಡಿಸ್ಟ್ರಿಬ್ಯೂಷನ್ ಕಂಪನಿ' ಈ ಘಟನೆಯನ್ನು ದೃಢಪಡಿಸಿದೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 10. 00 ಗಂಟೆ ಸುಮಾರಿಗೆ ಈ ತೈಲ ಸಂಸ್ಕರಣಾ ಸೌಲಭ್ಯವು ಹಾನಿಗೊಳಗಾಗಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಮತ್ತು ಭದ್ರತಾ ತಂಡಗಳು ಬೆಂಕಿಯನ್ನು ನಂದಿಸಿ, ಪರಿಸ್ಥಿತಿಯನ್ನು ಹತೋಟಿಗೆ ತಂದಿವೆ. ಅಮೆರಿಕ ಮತ್ತು ಇರಾನ್ ನಡುವೆ ಮಂಗಳವಾರವಷ್ಟೇ ಕದನ ವಿರಾಮ ಘೋಷಣೆಯಾಗಿದ್ದರೂ, ಈ ದಾಳಿ ನಡೆದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಕದನ ವಿರಾಮಕ್ಕೆ ಚೀನಾದ ಮಧ್ಯಪ್ರವೇಶ

ಮಂಗಳವಾರ ಕದನ ವಿರಾಮ ಒಪ್ಪಂದದ ಕುರಿತು ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಹಾರ್ಮುಜ್ ಜಲಸಂಧಿ'ಯಲ್ಲಿನ ಭದ್ರತೆ, ತೈಲ ಸಾಗಣೆ ಮತ್ತು ಜಾಗತಿಕ ಆರ್ಥಿಕತೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಈ ಒಪ್ಪಂದ ಪ್ರಮುಖ ಹೆಜ್ಜೆಯಾಗಿದೆ ಎಂದಿದ್ದರು. ಈ 14 ದಿನಗಳ ಕದನ ವಿರಾಮಕ್ಕೆ ಒಪ್ಪುವಂತೆ ಇರಾನ್‌ನ ಮನವೊಲಿಸುವಲ್ಲಿ ಚೀನಾ ಕೊನೆಯ ಕ್ಷಣದಲ್ಲಿ ಮಧ್ಯಪ್ರವೇಶಿಸಿತ್ತು ಎಂಬುದನ್ನು ಟ್ರಂಪ್ ಉಲ್ಲೇಖಿಸಿದ್ದರು. ಇರಾನ್‌ನ ಇಂಧನ ತಾಣಗಳು ಮತ್ತು ಮೂಲಸೌಕರ್ಯಗಳ ಮೇಲೆ ಅಮೆರಿಕ ದಾಳಿ ಮಾಡಿದರೆ ಜಾಗತಿಕ ಆರ್ಥಿಕತೆಯೇ ಧ್ವಂಸಗೊಳ್ಳಲಿದೆ ಎಂದು ಚೀನಾ ಇರಾನ್‌ಗೆ ಎಚ್ಚರಿಕೆ ನೀಡಿ, ಸಂಧಾನಕ್ಕೆ ಒಪ್ಪಿಸಿತ್ತು ಎಂದು ತಿಳಿದುಬಂದಿದೆ.

ಯುರೇನಿಯಂ ವಿವಾದ ಮುಂದುವರಿಕೆ

ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ನಿರ್ಮಿಸುವ ಉದ್ದೇಶದಿಂದ 'ಯುರೇನಿಯಂ' (Uranium) ಅನ್ನು ಅಕ್ರಮವಾಗಿ ಪುಷ್ಟೀಕರಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಆರೋಪಿಸಿದ್ದು, ಇದೇ ಕಾರಣಕ್ಕೆ ಇರಾನ್ ಮೇಲೆ ಮಿಲಿಟರಿ ಕಾರ್ಯಾಚರಣೆ ಅನಿವಾರ್ಯವಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ವಿಶ್ವಸಂಸ್ಥೆಯ ಅಣುಶಕ್ತಿ ನಿಗಾ ಸಂಸ್ಥೆಯಾಗಲಿ (IAEA) ಟ್ರಂಪ್ ಅವರ ಈ ಹೇಳಿಕೆಯನ್ನು ಬೆಂಬಲಿಸಿಲ್ಲ ಹಾಗೂ ಇರಾನ್ ಕೂಡ ಈ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ, ತೈಲ ಸಂಸ್ಕರಣಾಗಾರದ ಮೇಲಿನ ಇತ್ತೀಚಿನ ದಾಳಿಯು ಕದನ ವಿರಾಮದ ಭವಿಷ್ಯವನ್ನು ತೂಗುಯ್ಯಾಲೆಯಲ್ಲಿರಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: The Federal karnaataka