Dailyhunt Logo
  • Light mode
    Follow system
    Dark mode
    • Play Story
    • App Story
ತುಳುವಿಗೆ ಆಡಳಿತಾತ್ಮಕ ಮಾನ್ಯತೆ: ಈಗ ಶುರುವಾಗಿದೆ 'ಕ್ರೆಡಿಟ್ ವಾರ್'

ತುಳುವಿಗೆ ಆಡಳಿತಾತ್ಮಕ ಮಾನ್ಯತೆ: ಈಗ ಶುರುವಾಗಿದೆ 'ಕ್ರೆಡಿಟ್ ವಾರ್'

ಶಕಗಳಿಂದ ಕರಾವಳಿಯಲ್ಲಿ ಕೇಳಿಬರುತ್ತಿದ್ದ ತುಳು ಭಾಷೆಗೆ ಆಡಳಿತಾತ್ಮಕ ಮಾನ್ಯತೆ ನೀಡುವ ಬೇಡಿಕೆಗೆ ಸೆಪ್ಟೆಂಬರ್ 18ರಂದು ಒಪ್ಪಗೆ ಸಿಕ್ಕಿದೆ. ಮಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳುವಿಗೆ ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ನೀಡಲು ನಿರ್ಧರಿಸಲಾಗಿದೆ.

ಸರ್ಕಾರದ ಈ ನಿರ್ಧಾರದ ಬೆನ್ನಲ್ಲೇ ಇದೀಗ ರಾಜಕೀಯ ವಲಯದಲ್ಲಿ ಮತ್ತೊಂದು ಚರ್ಚೆ ಆರಂಭವಾಗಿದೆ. ತುಳುವಿಗೆ ಮಾನ್ಯತೆ ದೊರೆಯಲು ಕಾರಣವಾದ ಪ್ರಕ್ರಿಯೆಗೆ ಶ್ರೇಯಸ್ಸು ಯಾರಿಗೆ ಎಂಬ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಗ್ವಾದ ಶುರುವಾಗಿದೆ.

ಹಿಂದಿನ ಬಿಜೆಪಿ ಸರ್ಕಾರವೇ ತುಳುವಿಗೆ ಅಧಿಕೃತ ಮಾನ್ಯತೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು ಎಂಬುದು ಬಿಜೆಪಿ ನಾಯಕರ ವಾದ. ಕಾಂಗ್ರೆಸ್ ಸರ್ಕಾರ ಕಾನೂನು ಮತ್ತು ಆಡಳಿತಾತ್ಮಕ ಅಂಶಗಳನ್ನು ಪರಿಶೀಲಿಸಿ, ಅಂತಿಮವಾಗಿ ಸಚಿವ ಸಂಪುಟದ ಅನುಮೋದನೆ ಪಡೆಯುವ ಮೂಲಕ ನಿರ್ಧಾರ ಕೈಗೊಂಡಿದೆ ಎಂಬುದು ಕಾಂಗ್ರೆಸ್‌ನ ನಿಲುವು.

ಆದರೆ ರಾಜಕೀಯ ಪಕ್ಷಗಳ ಈ ವಾದಗಳ ನಡುವೆ, ತುಳು ಸಂಘಟನೆಗಳು, ಸಾಹಿತಿಗಳು, ಕಲಾವಿದರು, ಭಾಷಾ ಹೋರಾಟಗಾರರು, ತುಳು ಸಾಹಿತ್ಯ ಅಕಾಡೆಮಿ ಹಾಗೂ ಕರಾವಳಿಯ ಜನಪ್ರತಿನಿಧಿಗಳು ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಹೋರಾಟವೂ ಈ ಬೆಳವಣಿಗೆಯ ಪ್ರಮುಖ ಹಿನ್ನೆಲೆಯಾಗಿದೆ.

ದಶಕಗಳ ಬೇಡಿಕೆ: ಹೋರಾಟದಿಂದ ಸರ್ಕಾರದ ಮೇಜಿನವರೆಗೆ

ತುಳುವಿಗೆ ಆಡಳಿತಾತ್ಮಕ ಮಾನ್ಯತೆ ನೀಡಬೇಕು ಎಂಬ ಬೇಡಿಕೆ ಇತ್ತೀಚಿನ ಬೆಳವಣಿಗೆಯಲ್ಲ. ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ ತುಳು ಭಾಷಿಕ ಪ್ರದೇಶಗಳ ಸಂಘಟನೆಗಳು ಹಲವು ವರ್ಷಗಳಿಂದ ಈ ಬೇಡಿಕೆಯನ್ನು ಸರ್ಕಾರದ ಮುಂದಿಡುತ್ತಲೇ ಬಂದಿವೆ.

ರಾಜ್ಯದಲ್ಲಿ ತುಳುವಿಗೆ ಅಧಿಕೃತ ಸ್ಥಾನಮಾನ ನೀಡುವುದರ ಜತೆಗೆ, ಸಂವಿಧಾನದ ಎಂಟನೇ ಅನುಸೂಚಿಗೆ ತುಳುವನ್ನು ಸೇರಿಸಬೇಕು ಎಂಬ ಬೇಡಿಕೆಯೂ ದೀರ್ಘಕಾಲದಿಂದ ಇದೆ. 2021ರ ವೇಳೆಗೆ ಈ ಬೇಡಿಕೆ ಸಾಮಾಜಿಕ ಜಾಲತಾಣದಲ್ಲೂ ದೊಡ್ಡ ಮಟ್ಟದಲ್ಲಿ ಪ್ರತಿಧ್ವನಿಸಿತ್ತು. ತುಳುವಿಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ನಡೆದ ಆನ್‌ಲೈನ್ ಅಭಿಯಾನದಲ್ಲಿ ಒಂದೇ ದಿನ ನಾಲ್ಕು ಲಕ್ಷಕ್ಕೂ ಅಧಿಕ ಸಂದೇಶಗಳು ದಾಖಲಾಗಿದ್ದವು ಎಂಬ ವರದಿಗಳಿವೆ.

ಸೆಪ್ಟೆಂಬರ್ 18ರ ಸಚಿವ ಸಂಪುಟದ ನಿರ್ಧಾರವನ್ನು ಒಂದೇ ದಿನದಲ್ಲಿ ತೆಗೆದುಕೊಂಡ ನಿರ್ಧಾರವೆಂದು ನೋಡುವಂತಿಲ್ಲ. ಹಲವು ವರ್ಷಗಳ ಸಾರ್ವಜನಿಕ ಒತ್ತಡ, ಭಾಷಾ ಹೋರಾಟ, ರಾಜಕೀಯ ಪ್ರಸ್ತಾಪಗಳು ಮತ್ತು ಸರ್ಕಾರದ ವಿವಿಧ ಹಂತಗಳ ಪರಿಶೀಲನೆಯ ನಂತರ ಈ ನಿರ್ಧಾರ ಹೊರಬಿದ್ದಿದೆ.

2008ರಿಂದಲೇ ರಾಜಕೀಯ ಭರವಸೆ

ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ವಿಚಾರ ಕರ್ನಾಟಕದ ರಾಜಕೀಯದಲ್ಲಿ ಹಲವು ವರ್ಷಗಳಿಂದ ಪ್ರಸ್ತಾಪವಾಗುತ್ತಲೇ ಬಂದಿದೆ. 2008ರಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೂ ತುಳುವಿಗೆ ಮಾನ್ಯತೆ ನೀಡುವ ಭರವಸೆ ನೀಡಲಾಗಿತ್ತು ಎಂಬ ಉಲ್ಲೇಖಗಳಿವೆ. ನಂತರದ ಸರ್ಕಾರಗಳ ಅವಧಿಯಲ್ಲಿಯೂ ಬೇಡಿಕೆ ಪುನರಾವರ್ತನೆಯಾಯಿತು.

ಆದರೆ ರಾಜಕೀಯ ಭರವಸೆಗಳು ಹಲವು ಬಾರಿ ವ್ಯಕ್ತವಾದರೂ, ಆಡಳಿತಾತ್ಮಕ ಮಾನ್ಯತೆ ನೀಡುವ ಅಂತಿಮ ನಿರ್ಧಾರ ಮಾತ್ರ ಮುಂದೂಡಲ್ಪಡುತ್ತಲೇ ಬಂದಿತ್ತು. ಇದೇ ಕಾರಣಕ್ಕೆ ತುಳು ಸಂಘಟನೆಗಳ ಹೋರಾಟವೂ ನಿರಂತರವಾಗಿ ಮುಂದುವರಿದಿತ್ತು.

2023: ಮೋಹನ್ ಆಳ್ವ ಸಮಿತಿ ಮಹತ್ವದ ಹಂ

ಪ್ರಸ್ತುತ 'ಕ್ರೆಡಿಟ್ ವಾರ್'ನಲ್ಲಿ ಬಿಜೆಪಿ ಪ್ರಮುಖವಾಗಿ ಉಲ್ಲೇಖಿಸುತ್ತಿರುವುದು 2023ರಲ್ಲಿ ರಚನೆಯಾದ ಡಾ. ಎಂ. ಮೋಹನ್ ಆಳ್ವ ನೇತೃತ್ವದ ತಜ್ಞರ ಸಮಿತಿ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ತುಳುವಿಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಸಾಧ್ಯತೆ, ಅದರ ಸಾಧಕ-ಬಾಧಕಗಳು ಹಾಗೂ ಆಡಳಿತಾತ್ಮಕ ಬಳಕೆಯ ಕುರಿತು ಅಧ್ಯಯನ ನಡೆಸಲು ಈ ಸಮಿತಿ ರಚಿಸಲಾಗಿತ್ತು.

ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಲಿಪಿ ಮತ್ತು ಆಡಳಿತಾತ್ಮಕ ಬಳಕೆಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ಸಮಿತಿ ಪರಿಶೀಲಿಸಿತು. ಲಭ್ಯವಿರುವ ದಾಖಲೆಗಳ ಪ್ರಕಾರ, ಮೋಹನ್ ಆಳ್ವ ನೇತೃತ್ವದ ಸಮಿತಿ 2023ರ ಫೆಬ್ರುವರಿ 14ರಂದು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಇದನ್ನೇ ಬಿಜೆಪಿ ತನ್ನ ಪ್ರಮುಖ ಆಧಾರವನ್ನಾಗಿ ಮುಂದಿಡುತ್ತಿದೆ.

'ತುಳುವಿಗೆ ಆಡಳಿತಾತ್ಮಕ ಮಾನ್ಯತೆ ನೀಡುವ ಕುರಿತು ವ್ಯವಸ್ಥಿತ ಅಧ್ಯಯನಕ್ಕೆ ಚಾಲನೆ ನೀಡಿದ್ದು ಬಿಜೆಪಿ ಸರ್ಕಾರ. ಸಮಿತಿ ರಚಿಸಿ ವರದಿಯನ್ನೂ ಪಡೆಯಲಾಗಿತ್ತು' ಎಂಬುದು ಬಿಜೆಪಿ ನಾಯಕರ ವಾದ.

ವರದಿ ಸಲ್ಲಿಕೆಯಾದರೂ ನಿರ್ಧಾರ ಏಕೆ ಆಗಲಿಲ್ಲ?

ಇಲ್ಲಿಯೇ ತುಳು ಮಾನ್ಯತೆಯ ಪ್ರಕ್ರಿಯೆಯ ಮತ್ತೊಂದು ಪ್ರಮುಖ ಹಂತ ಎದುರಾಗುತ್ತದೆ. 2023ರಲ್ಲಿ ಮೋಹನ್ ಆಳ್ವ ಸಮಿತಿ ವರದಿ ಸಲ್ಲಿಸಿದ ಮಾತ್ರಕ್ಕೆ ಆಡಳಿತಾತ್ಮಕ ಪ್ರಕ್ರಿಯೆ ಪೂರ್ಣಗೊಂಡಿರಲಿಲ್ಲ. ಒಂದು ಭಾಷೆಗೆ ರಾಜ್ಯ ಮಟ್ಟದಲ್ಲಿ ಅಥವಾ ನಿರ್ದಿಷ್ಟ ಪ್ರದೇಶದಲ್ಲಿ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ನೀಡುವಾಗ ಅದರ ಕಾನೂನುಬದ್ಧತೆ, ಆಡಳಿತಾತ್ಮಕ ಪರಿಣಾಮ, ಅನುವಾದ ವ್ಯವಸ್ಥೆ ಮತ್ತು ಸರ್ಕಾರಿ ಕಚೇರಿಗಳಲ್ಲಿ ಅನುಷ್ಠಾನದ ಸಾಧ್ಯತೆಗಳನ್ನು ಪರಿಶೀಲಿಸುವ ಅಗತ್ಯವಿತ್ತು.

2026ರಲ್ಲಿ ವಿಧಾನಸಭೆಗೆ ನೀಡಿದ ಮಾಹಿತಿಯನ್ನು ಆಧರಿಸಿದ ವರದಿಗಳ ಪ್ರಕಾರ, ಸಂವಿಧಾನದ ಅನುಚ್ಛೇದ 345ರ ಅಡಿಯಲ್ಲಿ ರಾಜ್ಯ ಸರ್ಕಾರಕ್ಕೆ ಅಧಿಕೃತ ಭಾಷೆ ಘೋಷಿಸುವ ಅಧಿಕಾರವಿದೆ ಎಂಬ ಅಭಿಪ್ರಾಯವನ್ನು ಕಾನೂನು ಇಲಾಖೆ ನೀಡಿತ್ತು. ಇತರ ರಾಜ್ಯಗಳಲ್ಲಿ ಹೆಚ್ಚುವರಿ ಅಥವಾ ಎರಡನೇ ಭಾಷೆಗೆ ನೀಡಿರುವ ಆಡಳಿತಾತ್ಮಕ ಮಾನ್ಯತೆಯ ಮಾದರಿಗಳನ್ನೂ ಪರಿಶೀಲಿಸುವ ಅಗತ್ಯವಿತ್ತು. ಹೀಗಾಗಿ 2023ರಲ್ಲಿ ಸಮಿತಿ ವರದಿ ಸಲ್ಲಿಸಿದರೂ ಅದೇ ವರ್ಷ ಅಂತಿಮ ನಿರ್ಧಾರ ಹೊರಬರಲಿಲ್ಲ. ಅಂಶವೇ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಚರ್ಚೆಯಲ್ಲಿ ಪ್ರಮುಖವಾಗಿದೆ.

2026: ಗಾಯತ್ರಿ ಸಮಿತಿಯ ಅಧ್ಯಯನ

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತುಳು ಮಾನ್ಯತೆಯ ವಿಚಾರ ಮತ್ತೊಂದು ಆಡಳಿತಾತ್ಮಕ ಹಂತ ಪ್ರವೇಶಿಸಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಕೆ.ಎಂ. ಗಾಯತ್ರಿ ನೇತೃತ್ವದಲ್ಲಿ ಆರು ಸದಸ್ಯರ ಸಮಿತಿ ರಚಿಸಲಾಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕೂಡ ಸಮಿತಿಯ ಸದಸ್ಯರಾಗಿದ್ದರು. ಈ ಸಮಿತಿಯ ಅಧ್ಯಯನವು ತುಳುವಿನ ಭಾಷಾ ಮತ್ತು ಸಾಂಸ್ಕೃತಿಕ ಹಿನ್ನೆಲೆಗೆ ಮಾತ್ರ ಸೀಮಿತವಾಗಿರದೆ, ಆಡಳಿತದಲ್ಲಿ ಭಾಷೆಯನ್ನು ಹೇಗೆ ಬಳಸಬಹುದು ಎಂಬ ಕಾರ್ಯರೂಪದ ಅಂಶಗಳ ಮೇಲೂ ಕೇಂದ್ರೀಕರಿಸಿತ್ತು.

ಇತರ ರಾಜ್ಯಗಳಲ್ಲಿ ಪ್ರಾದೇಶಿಕ ಅಥವಾ ಹೆಚ್ಚುವರಿ ಭಾಷೆಗಳಿಗೆ ನೀಡಿರುವ ಆಡಳಿತಾತ್ಮಕ ಸ್ಥಾನಮಾನ, ಸರ್ಕಾರಿ ಕಚೇರಿಗಳಲ್ಲಿ ಅದರ ಬಳಕೆ ಮತ್ತು ಅನುವಾದ ವ್ಯವಸ್ಥೆ ಸೇರಿದಂತೆ ಹಲವು ವಿಚಾರಗಳನ್ನು ಪರಿಶೀಲಿಸಲಾಯಿತು. ಆಂಧ್ರಪ್ರದೇಶದಲ್ಲಿ ಉರ್ದುವಿಗೆ ನೀಡಿರುವ ಎರಡನೇ ಭಾಷೆಯ ಸ್ಥಾನಮಾನದ ಮಾದರಿಯನ್ನೂ ಅಧ್ಯಯನ ಮಾಡಲಾಗಿದೆ ಎಂಬ ಮಾಹಿತಿ ಇದೆ. ಇಲ್ಲಿಂದ ಕಾಂಗ್ರೆಸ್‌ನ ವಾದಕ್ಕೆ ಮತ್ತೊಂದು ಆಧಾರ ಸಿಗುತ್ತದೆ.

'ಹಿಂದಿನ ಸರ್ಕಾರ ಸಮಿತಿ ರಚಿಸಿದ್ದರೆ, ಅದರ ನಂತರ ಕಾನೂನು ಪರಿಶೀಲನೆ, ಆಡಳಿತಾತ್ಮಕ ಅಧ್ಯಯನ ಹಾಗೂ ಅಂತಿಮ ಸಚಿವ ಸಂಪುಟದ ಅನುಮೋದನೆಯ ಮೂಲಕ ನಿರ್ಧಾರ ಕೈಗೊಂಡಿರುವುದು ಕಾಂಗ್ರೆಸ್ ಸರ್ಕಾರ' ಎಂಬುದು ಕಾಂಗ್ರೆಸ್ ನಾಯಕರ ನಿಲುವು. ಆದರೆ ಗಾಯತ್ರಿ ಸಮಿತಿಯ ವರದಿಯ ಸಂಪೂರ್ಣ ವಿವರಗಳು ಸಾರ್ವಜನಿಕವಾಗಿ ಲಭ್ಯವಿರುವ ವಿಚಾರದಲ್ಲಿ ಇನ್ನೂ ಸ್ಪಷ್ಟತೆ ಇಲ್ಲ ಎಂಬುದೂ ಗಮನಾರ್ಹ.

ತುಳು ಸಾಹಿತ್ಯ ಅಕಾಡೆಮಿಯ ಪಾತ್ರವೂ ಪ್ರಮುಖ

ಈ ಬೆಳವಣಿಗೆಯನ್ನು ಕೇವಲ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಪ್ರಕ್ರಿಯೆಯಾಗಿ ನೋಡುವುದರಿಂದ ಸಂಪೂರ್ಣ ಚಿತ್ರಣ ಸಿಗುವುದಿಲ್ಲ. ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆ ಹಾಗೂ ಬೆಳವಣಿಗೆಗಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ತುಳುವಿನ ಬಳಕೆಯನ್ನು ಸಾರ್ವಜನಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಸ್ತರಿಸುವ ಪ್ರಯತ್ನಗಳಲ್ಲಿಯೂ ಅಕಾಡೆಮಿಯ ಪಾತ್ರವಿದೆ.

2026ರಲ್ಲಿ ರಚಿಸಲಾದ ಕೆ.ಎಂ. ಗಾಯತ್ರಿ ಸಮಿತಿಯಲ್ಲೂ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಸದಸ್ಯರಾಗಿದ್ದರು. ಹೀಗಾಗಿ ಅಂತಿಮ ನಿರ್ಧಾರದ ಹಿಂದಿನ ಪ್ರಕ್ರಿಯೆಯಲ್ಲಿ ರಾಜಕೀಯ ಸರ್ಕಾರಗಳ ಜತೆಗೆ ಭಾಷಾ ಸಂಸ್ಥೆಗಳು, ತಜ್ಞರು ಮತ್ತು ಸಂಘಟನೆಗಳ ಪಾತ್ರವೂ ದಾಖಲಾಗಿದೆ.

ಈಗ ಅನುಷ್ಠಾನದ ಸರದಿ

ಸಚಿವ ಸಂಪುಟದ ನಿರ್ಧಾರದಿಂದ ಪ್ರಕ್ರಿಯೆಯ ಒಂದು ಪ್ರಮುಖ ಹಂತ ಪೂರ್ಣಗೊಂಡಿದೆ. ಆದರೆ ತುಳುವಿಗೆ ಆಡಳಿತಾತ್ಮಕ ಸ್ಥಾನಮಾನ ಘೋಷಣೆಯಾದ ನಂತರ ಅದರ ಅನುಷ್ಠಾನವೇ ಮುಂದಿನ ದೊಡ್ಡ ಪ್ರಶ್ನೆಯಾಗಿದೆ. ಸರ್ಕಾರಿ ಕಚೇರಿಗಳಲ್ಲಿ ತುಳುವಿನ ಬಳಕೆ ಹೇಗೆ ನಡೆಯಲಿದೆ? ಸರ್ಕಾರಿ ದಾಖಲೆಗಳನ್ನು ತುಳುವಿನಲ್ಲಿ ಸಿದ್ಧಪಡಿಸುವ ವ್ಯವಸ್ಥೆ ಹೇಗೆ ರೂಪುಗೊಳ್ಳಲಿದೆ? ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಭಾಷಾ ತರಬೇತಿ ಹೇಗೆ ನೀಡಲಾಗುತ್ತದೆ? ಅನುವಾದ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸಲಿದೆ? ಆಡಳಿತಾತ್ಮಕ ಪದಕೋಶವನ್ನು ಹೇಗೆ ರೂಪಿಸಲಾಗುತ್ತದೆ? ತುಳು ಭಾಷೆಯ ಆಡಳಿತಾತ್ಮಕ ಬಳಕೆಗೆ ಸಂಬಂಧಿಸಿದ ಅನುವಾದ, ತರಬೇತಿ ಮತ್ತು ಇತರ ಭಾಷಾ ಚಟುವಟಿಕೆಗಳಿಗೆ ವರ್ಷಕ್ಕೆ 82 ಲಕ್ಷ ರೂಪಾಯಿ ಅನುದಾನ ಒದಗಿಸುವ ಉದ್ದೇಶ ಸರ್ಕಾರಕ್ಕಿದೆ ಎಂದು ವರದಿಯಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: The Federal karnaataka