Dailyhunt Logo
  • Light mode
    Follow system
    Dark mode
    • Play Story
    • App Story
ವಸತಿ ಶಾಲೆ ವಿದ್ಯಾರ್ಥಿ ಸಾವು; ದೈಹಿಕ ಶಿಕ್ಷಕನ ವಿರುದ್ಧ ಪೋಷಕರ ಆಕ್ರೋಶ, ಪೊಲೀಸರಿಂದ ಲಾಠಿಚಾರ್ಜ್

ವಸತಿ ಶಾಲೆ ವಿದ್ಯಾರ್ಥಿ ಸಾವು; ದೈಹಿಕ ಶಿಕ್ಷಕನ ವಿರುದ್ಧ ಪೋಷಕರ ಆಕ್ರೋಶ, ಪೊಲೀಸರಿಂದ ಲಾಠಿಚಾರ್ಜ್

ದೇವನಹಳ್ಳಿ ಸಮೀಪದ ಬೆಂಗಳೂರು ಉತ್ತರ ತಾಲೂಕಿನ ಕಾಡಯರಪ್ಪನಹಳ್ಳಿ ವಸತಿ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿ ಅನುಮಾನಾಸ್ಪದ ಸಾವಿಗೆ ದೈಹಿಕ ಶಿಕ್ಷಣ ಶಿಕ್ಷಕನೇ ಕಾರಣ ಎಂದು ಆರೋಪಿಸಿ ವಿದ್ಯಾರ್ಥಿಯ ಪೋಷಕರು ಹಾಗೂ ಸಂಬಂಧಿಕರು ಶಾಲೆಯಲ್ಲಿ ದಾಂಧಲೆ ನಡೆಸಿದ ಹಿನ್ನೆಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಸ್ಟ್ರಲಿಂಗ್ ಇಂಗ್ಲೀಷ್ ವಸತಿ ಶಾಲೆಯ ವಿದ್ಯಾರ್ಥಿ ಗುರು ಕಿರಣ್ ಮೃತಪಟ್ಟಿದ್ದು, ದೈಹಿಕ ಶಿಕ್ಷಕ ಹಲ್ಲೆಯಿಂದಲೇ ಬಾಲಕ ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆಯಿಂದ ಆಕ್ರೋಶಗೊಂಡ ಪೋಷಕರು ಮತ್ತು ಸಾರ್ವಜನಿಕರು ದೈಹಿಕ ಶಿಕ್ಷಣ ಶಿಕ್ಷಕನ ಮೇಲೆ ಪೆಟ್ರೋಲ್‌ ಹಿಡಿದು ದಾಳಿಗೆ ಮುಂದಾಗಿದ್ದು, ಶಾಲಾ ಆವರಣ ರಣರಂಗವಾಗಿ ಮಾರ್ಪಟ್ಟಿದೆ. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಘಟನೆ ಹಿನ್ನೆಲೆ ಏನು?

ವಸತಿ ನಿಲಯದಲ್ಲಿ ಬುಧವಾರ ಮುಂಜಾನೆ 5 ಗಂಟೆಗೆ ಎದ್ದಿದ್ದ ಗುರು ಕಿರಣ್, ದೈಹಿಕ ಶಿಕ್ಷಣದ ಕಸರತ್ತಿಗೆ ಬರುವ ಮುನ್ನಾ ಶೌಚಾಲಯಕ್ಕೆ ತೆರಳಿದ್ದ. ಸರಿಯಾದ ಸಮಯಕ್ಕೆ ಬಾರದ ಹಿನ್ನೆಲೆ ಕೋಪಗೊಂಡ ದೈಹಿಕ ಶಿಕ್ಷಕ ನಾರಾಯಣ್, ವಿದ್ಯಾರ್ಥಿಯ ಕುತ್ತಿಗೆ ಬಗ್ಗಿಸಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ಮೃತ ವಿದ್ಯಾರ್ಥಿಯ ಸಹಪಾಠಿಗಳು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದರು.

ಹಲ್ಲೆಯ ನಂತರವೂ ಬಾಲಕನನ್ನು ಮೈದಾನಕ್ಕೆ ಕರೆತಂದು ಬಲವಂತವಾಗಿ ಎರಡು ರೌಂಡ್ ಓಡುವಂತೆ ಶಿಕ್ಷೆ ವಿಧಿಸಿದ್ದಾರೆ. ಶಿಕ್ಷಕನ ಹೊಡೆತದಿಂದ ಜರ್ಜರಿತನಾಗಿದ್ದ ಗುರು ಕಿರಣ್, ಓಡುತ್ತಿರುವಾಗಲೇ ಮೈದಾನದಲ್ಲಿ ಕುಸಿದು ಬಿದ್ದಿದ್ದಾನೆ. ತಕ್ಷಣ ಆಡಳಿತ ಮಂಡಳಿಯವರು ಮಗುವಿಗೆ ಹುಷಾರಿಲ್ಲ ಎಂದು ಪೋಷಕರಿಗೆ ಕರೆ ಮಾಡಿ ಆಸ್ಪತ್ರೆಗೆ ಸೇರಿಸಿರುವುದಾಗಿ ತಿಳಿಸಿದ್ದಾರೆ. ಆದರೆ, ಪೋಷಕರು ಆಸ್ಪತ್ರೆ ತಲುಪುವಷ್ಟರಲ್ಲೇ ಬಾಲಕ ಮೃತಪಟ್ಟಿದ್ದ.

ವಸತಿ ಶಾಲೆಯ ಇತರ ವಿದ್ಯಾರ್ಥಿಗಳು ಅಲ್ಲಿನ ಕ್ರೌರ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ದೈಹಿಕ ಶಿಕ್ಷಕರು ಸಣ್ಣಪುಟ್ಟ ವಿಚಾರಗಳಿಗೂ ಮಕ್ಕಳನ್ನು ಇಟ್ಟಿಗೆ, ಕಬ್ಬಿಣದ ರಾಡ್ ಹಾಗೂ ಬಿದಿರಿನ ಬೆತ್ತಗಳಿಂದ ಕ್ರೂರವಾಗಿ ಹೊಡೆಯುತ್ತಾರೆ. ರೂಂನಲ್ಲಿ ಕೂಡಿ ಹಾಕಿ ಟಾರ್ಚರ್ ಕೊಡುತ್ತಾರೆ. ಅಷ್ಟೇ ಅಲ್ಲದೆ, ವಸತಿ ಶಾಲೆಯಲ್ಲಿ ನೀಡುವ ಊಟದಲ್ಲಿ ಕಲ್ಲು, ಕೂದಲು ಸಿಗುತ್ತವೆ ಎಂದು ಶಾಲಾ ಮಂಡಳಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಶಿಕ್ಷಕನ ಮೇಲೆ ಪೆಟ್ರೋಲ್ ದಾಳಿಗೆ ಯತ್ನ

ಮಗುವಿನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಪೋಷಕರು ಮತ್ತು ಸಂಬಂಧಿಕರು ಶಾಲಾ ಆವರಣಕ್ಕೆ ನುಗ್ಗಿದ್ದಾರೆ. ಕಣ್ಣೆದುರೇ ಸಿಕ್ಕ ದೈಹಿಕ ಶಿಕ್ಷಕ ನಾರಾಯಣ್ ಅವರನ್ನು ತಡೆದು ಥಳಿಸಿದ್ದಾರೆ. ಶಿಕ್ಷಕ ಅಲ್ಲಿಂದ ತಪ್ಪಿಸಿಕೊಂಡು ಓಡಲು ಯತ್ನಿಸಿದರೂ ಬಿಡದ ಸಾರ್ವಜನಿಕರು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಬಾಗಲೂರು ಪೊಲೀಸರು ಮಧ್ಯಪ್ರವೇಶಿಸಿ ಶಿಕ್ಷಕ ನಾರಾಯಣ್ ಅವರನ್ನು ರಕ್ಷಿಸಿ ಪೊಲೀಸ್ ಜೀಪ್ನಲ್ಲಿ ಕೂರಿಸಿದ್ದಾರೆ.

ಆದರೂ, ಸುಮ್ಮನಾಗದ ಪೋಷಕರು, ಶಿಕ್ಷಕನನ್ನು ನಮ್ಮ ವಶಕ್ಕೆ ಒಪ್ಪಿಸಿ, ಅವನನ್ನು ಜೀವಂತವಾಗಿ ಸುಟ್ಟು ಹಾಕುತ್ತೇವೆ ಎಂದು ಪೆಟ್ರೋಲ್ ಕ್ಯಾನ್ ಹಿಡಿದು ಜೀಪ್ ಕಡೆಗೆ ನುಗ್ಗಿದ್ದಾರೆ. ಉದ್ವಿಗ್ನ ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿರುವುದನ್ನು ಮನಗಂಡ ಪೊಲೀಸರು, ಜನಸಂದಣಿ ಚದುರಿಸಲು ಲಾಠಿಚಾರ್ಜ್ ನಡೆಸಬೇಕಾಯಿತು.

ಹಿರಿಯ ಅಧಿಕಾರಿಗಳ ಭೇಟಿ

ಲಾಠಿಚಾರ್ಜ್ ಹೊರತಾಗಿಯೂ ಪೋಷಕರು ಸ್ಥಳದಿಂದ ಕದಲಲಿಲ್ಲ. ಶಿಕ್ಷಕನನ್ನು ಕರೆದೊಯ್ಯುತ್ತಿದ್ದ ಹೊಯ್ಸಳ ಪೊಲೀಸ್ ಜೀಪ್ಗೆ ಅಡ್ಡಲಾಗಿ ಕುಳಿತು ಪ್ರತಿಭಟನೆ ನಡೆಸಿದರು.

"ಶಿಕ್ಷಕನಿಗೆ ತಕ್ಕ ಶಿಕ್ಷೆಯಾಗುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ" ಎಂದು ಪಟ್ಟು ಹಿಡಿದರು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ದೇವನಹಳ್ಳಿ ಎಸಿಪಿ ಶ್ರೀಹರ್ಷ ಹಾಗೂ ಡಿಸಿಪಿ ಮಿಥುನ್ ಕುಮಾರ್ ಅವರು ಹೆಚ್ಚುವರಿ ಪೊಲೀಸ್ ಪಡೆಯೊಂದಿಗೆ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸದ್ಯ ಹಿರಿಯ ಅಧಿಕಾರಿಗಳು ಪ್ರತಿಭಟನಾ ನಿರತ ಪೋಷಕರ ಮನವೊಲಿಕೆ ಕಸರತ್ತು ನಡೆಸಿದರು. ಸದ್ಯ ಶಾಲೆಯ ಬಳಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

Dailyhunt
Disclaimer: This content has not been generated, created or edited by Dailyhunt. Publisher: The Federal karnaataka