Dailyhunt
ವೇದಿಕೆಯಲ್ಲೇ ಕುಸಿದುಬಿದ್ದ ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ

ವೇದಿಕೆಯಲ್ಲೇ ಕುಸಿದುಬಿದ್ದ ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ

ಮಾಜಿ ಲೋಕಾಯುಕ್ತ ಹಾಗೂ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಅವರು ಇಂದು ಸಂಜೆ ಬೆಂಗಳೂರಿನ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಏಕಾಏಕಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಸದ್ಯ ಅವರನ್ನು ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಶುಕ್ರವಾರ (ಏ.3) ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂತೋಷ್‌ ಹೆಗ್ಡೆ ಭಾಗವಹಿಸಿದ್ದರು. ಸಂಜೆ ಸುಮಾರು 4 ಗಂಟೆ ಸುಮಾರಿಗೆ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ವೇದಿಕೆ ಮೇಲೆ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಕುಸಿದು ಬಿದ್ದರು. ಇದರಿಂದ ಸಭಾಂಗಣದಲ್ಲಿದ್ದ ಗಣ್ಯರು ಹಾಗೂ ಸಾರ್ವಜನಿಕರು ಆತಂಕಕ್ಕೊಳಗಾದರು.

ಸಮಯಪ್ರಜ್ಞೆ ಮೆರೆದ ಸ್ಪೀಕರ್ ಯು.ಟಿ. ಖಾದರ್

ಘಟನೆಯ ವೇಳೆ ಕಾರ್ಯಕ್ರಮದಲ್ಲಿದ್ದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ತಕ್ಷಣವೇ ಎಚ್ಚೆತ್ತುಕೊಂಡು, ಆಂಬ್ಯುಲೆನ್ಸ್‌ಗೂ ಕಾಯದೇ ಕೂಡಲೇ ತಮ್ಮ ಅಧಿಕೃತ ಕಾರಿನಲ್ಲೇ ಆಸ್ಪತ್ರೆಗೆ ಕರೆದೋಯ್ದು ದಾಖಲಿಸಿದ್ದಾರೆ. ಜೊತೆಯಲ್ಲೇ ಇದ್ದು, ಚಿಕಿತ್ಸೆಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಆರೋಗ್ಯ ಸ್ಥಿರ

ಪ್ರಸ್ತುತ ಸಂತೋಷ್ ಹೆಗ್ಡೆ ಅವರಿಗೆ ವಿಕ್ರಂ ಆಸ್ಪತ್ರೆಯ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದು, ವಯೋಸಹಜ ದಣಿವು ಹಾಗೂ ರಕ್ತದೊತ್ತಡದಲ್ಲಿನ ಏರುಪೇರಿನಿಂದ ಅವರು ಪ್ರಜ್ಞೆ ತಪ್ಪಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಅವರ ಸ್ಥಿತಿ ಸ್ಥಿರವಾಗಿದ್ದು, ವೈದ್ಯಕೀಯ ತಪಾಸಣೆಗಳು ಮುಂದುವರಿದಿವೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

Dailyhunt
Disclaimer: This content has not been generated, created or edited by Dailyhunt. Publisher: The Federal karnaataka