ಉಡುಪಿ ಜುಲೈ 05: ತುಳುನಾಡಿನ ಸಾಂಪ್ರದಾಯಿಕ ಕೃಷಿ ಸಂಸ್ಕೃತಿಯನ್ನು ಬಿಂಬಿಸುವ ವಿನೂತನ ಗ್ರಾಮೀಣ ಕ್ರೀಡಾಕೂಟ 'ಬಲೇ ಕೆಸರ್'ಡ್ಡ್ ಗೊಬ್ಬುಗ' (ಬನ್ನಿ ಕೆಸರಿನಲ್ಲಿ ಆಡೋಣ) ಭಾನುವಾರ ಪರೀಕದ ಅರಮನೆಯ ಬಾಕ್ಯಾರು ಗದ್ದೆಯಲ್ಲಿ ಅತ್ಯಂತ ವೈಭವದಿಂದ ಜರುಗಿತು.
ನೂರಾರು ಮಂದಿ ಕೆಸರಿನ ಗದ್ದೆಯಲ್ಲಿ ನಿಧಿಗಾಗಿ ಹುಡುಕಾಟ ನಡೆಸಿದ ದೃಶ್ಯ ರೋಮಾಂಚನಕಾರಿಯಾಗಿತ್ತು. ಈ ವಿಶೇಷ ಕ್ರೀಡಾಕೂಟಕ್ಕೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ತಮ್ಮ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದರು. ಸಾಮಾನ್ಯವಾಗಿ ಕಟ್ಟುನಿಟ್ಟಿನ ಆಡಳಿತಾತ್ಮಕ ಉಡುಪಿನಲ್ಲಿ, ಕಚೇರಿಗಳಲ್ಲಿ ಮಾತ್ರ ಕಾಣ ಸಿಗುತ್ತಿದ್ದ ಜಿಲ್ಲಾಧಿಕಾರಿಗಳನ್ನು ತೀರ ಹತ್ತಿರದಿಂದ ಕಂಡ ಗ್ರಾಮಸ್ಥರು ಖುಷಿಪಟ್ಟರು. ಅಷ್ಟಕ್ಕೇ ನಿಲ್ಲದೆ, ಕರಾವಳಿಯ ಹೆಮ್ಮೆಯ ಕಲೆಯಾದ ಹುಲಿಕುಣಿತದ ಹಾಡಿಗೆ ಡಿಸಿ ಸ್ವರೂಪ ಅವರು ಸಾರ್ವಜನಿಕರ ಜೊತೆ ಸರಿಸಮನಾಗಿ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಜಿಲ್ಲಾ ಉನ್ನತ ಅಧಿಕಾರಿಯೊಬ್ಬರು ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಗ್ರಾಮೀಣ ಜನರೊಂದಿಗೆ ಕೆಸರುಗದ್ದೆಯ ಬದಿಯಲ್ಲಿ ನಿಂತು ಹುಲಿವೇಷಕ್ಕೆ ಹೆಜ್ಜೆ ಹಾಕಿದ ಅಪರೂಪದ ನಡೆ ಇಡೀ ಜಿಲ್ಲೆಯಾದ್ಯಂತ ಭಾರಿ ಪ್ರಶಂಸೆಗೆ ಪಾತ್ರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳು ವೈರಲ್ ಆಗಿವೆ.

