Dailyhunt
ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ದಂಪತಿಗಳ ನಡುವೆ ಗಲಾಟೆ - ಕಾಲಿನಿಂದ ಕುತ್ತಿಗೆ ಹಿಸುಕಿ ಪತ್ನಿ ಹತ್ಯೆ ಮಾಡಿದ ಪತಿ

ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ದಂಪತಿಗಳ ನಡುವೆ ಗಲಾಟೆ - ಕಾಲಿನಿಂದ ಕುತ್ತಿಗೆ ಹಿಸುಕಿ ಪತ್ನಿ ಹತ್ಯೆ ಮಾಡಿದ ಪತಿ

ಬೆಂಗಳೂರು, ಏಪ್ರಿಲ್ 02: ಕ್ಷುಲ್ಲಕ ವಿಚಾರಕ್ಕೆ ದಂಪತಿಗಳ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘೋರ ಘಟನೆ ರಾಜಧಾನಿಯ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಸಂದ್ರದಲ್ಲಿ ಗುರುವಾರ ನಡೆದಿದೆ. ಮನೆಯಲ್ಲಿದ್ದ ನಗದು ಹಣದ ಹಂಚಿಕೆ ವಿಚಾರವಾಗಿ ಉಂಟಾದ ಜಗಳದಲ್ಲಿ ಪತಿಯೇ ಪತ್ನಿಯ ಕುತ್ತಿಗೆ ತುಳಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.ಬೆಳಗಾವಿ ಮೂಲದ ಕಾವ್ಯಾ (34) ಕೊಲೆಯಾದ ದುರ್ದೈವಿ. ಪತ್ನಿಯನ್ನೇ ಹತ್ಯೆಗೈದ ಪತಿ ದರಿಯಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂಲತಃ ಬೆಳಗಾವಿಯವರಾದ ಈ ದಂಪತಿಗಳು ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು. ದರಿಯಪ್ಪ ನಗರದಲ್ಲಿ ಗುತ್ತಿಗೆ ಕೆಲಸ ಮಾಡುತ್ತಿದ್ದನು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಒಂದು ವಾರದಿಂದ ದಂಪತಿಗಳ ನಡುವೆ ಹಣಕಾಸು ಹಾಗೂ ಆಸ್ತಿ ವಿಚಾರವಾಗಿ ನಿರಂತರವಾಗಿ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಬುಧವಾರವಷ್ಟೇ ದರಿಯಪ್ಪ 2 ಲಕ್ಷ ರೂಪಾಯಿ ಹಣವನ್ನು ಮನೆಗೆ ತಂದಿಟ್ಟಿದ್ದನು. ಈ ಹಣವನ್ನು ತನ್ನ ಅಣ್ಣನಿಗೆ ನೀಡಬೇಕು ಎಂದು ಕಾವ್ಯಾ ಪಟ್ಟು ಹಿಡಿದಿದ್ದರು. ಇದೇ ವಿಷಯವಾಗಿ ಗುರುವಾರ ಬೆಳಿಗ್ಗೆ ದಂಪತಿಗಳ ನಡುವೆ ಮತ್ತೆ ವಾಗ್ವಾದ ನಡೆದಿದ್ದು, ಆಕ್ರೋಶಗೊಂಡ ದರಿಯಪ್ಪ ಪತ್ನಿಯ ಮೇಲೆ ಹಲ್ಲೆ ನಡೆಸಿ, ಆಕೆ ಕೆಳಗೆ ಬಿದ್ದಾಗ ಕುತ್ತಿಗೆಯ ಮೇಲೆ ಕಾಲಿಟ್ಟು ಬಲವಾಗಿ ತುಳಿದಿದ್ದಾನೆ. ತೀವ್ರ ರಕ್ತಸ್ರಾವ ಹಾಗೂ ಉಸಿರುಗಟ್ಟಿದ ಪರಿಣಾಮ ಕಾವ್ಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ವಿಷಯ ತಿಳಿಯುತ್ತಿದ್ದಂತೆಯೇ ಪೀಣ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Dailyhunt
Disclaimer: This content has not been generated, created or edited by Dailyhunt. Publisher: themangaloremirror