Dailyhunt
'ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಾನೇ ನಿರ್ಧರಿಸಿದೆ': ಟಿಕೆಟ್ ನಿರಾಕರಣೆ ವದಂತಿಗೆ ಅಣ್ಣಾಮಲೈ ಸ್ಪಷ್ಟನೆ

'ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಾನೇ ನಿರ್ಧರಿಸಿದೆ': ಟಿಕೆಟ್ ನಿರಾಕರಣೆ ವದಂತಿಗೆ ಅಣ್ಣಾಮಲೈ ಸ್ಪಷ್ಟನೆ

ಮಿಳುನಾಡು, ಏಪ್ರಿಲ್ 04: ತಮಿಳುನಾಡು ವಿಧಾನಸಭೆ ಚುನಾವಣೆಗೆ ಬಿಜೆಪಿ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಪಕ್ಷದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ಹೆಸರು ಇಲ್ಲ. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವದಂತಿ ನಿನ್ನೆಯಿಂದ ಹರಿದಾಡುತ್ತಿದೆ.ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವ ಕುರಿತು ಸ್ವತಃ ಅಣ್ಣಾಮಲೈಯವರೇ ಈಗ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಚುನಾವಣೆಗೆ ಸ್ಪರ್ಧಿಸದ ನಿರ್ಧಾರ ಸಂಪೂರ್ಣವಾಗಿ ತಮ್ಮದೇ ಎಂದು ಸ್ಪಷ್ಟಪಡಿಸಿದ್ದಾರೆ.ಚೆನ್ನೈ ವಿಮಾನ ನಿಲ್ದಾಣದಲ್ಲಿ ಕೊಯಂಬತ್ತೂರಿನಿಂದ ಆಗಮಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಣ್ಣಾಮಲೈ ಅವರು, ನಾನು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಕೋರ್ ಸಮಿತಿಗೆ ಮುಂಚಿತವಾಗಿಯೇ ಲಿಖಿತವಾಗಿ ತಿಳಿಸಿದ್ದೇನೆ.
ಆದ್ದರಿಂದ ನನಗೆ ಟಿಕೆಟ್ ನೀಡಲಾಗಲಿಲ್ಲ ಎನ್ನುವುದು ತಪ್ಪು. ನಾನು ಸ್ಪರ್ಧಿಸಲು ಇಚ್ಛಿಸಲಿಲ್ಲ ಎಂಬುದೇ ಸತ್ಯ ಎಂದು ಹೇಳಿದರು.ತಮ್ಮ ಹೆಸರು ಕೈಬಿಡಲಾಗಿದೆ ಎಂಬ ಊಹಾಪೋಹಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಸ್ಪರ್ಧಿಸಲು ಇಚ್ಛಿಸದಿದ್ದಾಗ ನಾಯಕತ್ವವು ನನಗೆ ಟಿಕೆಟ್ ಹೇಗೆ ನೀಡಬಹುದು ಎಂದು ಪ್ರಶ್ನಿಸಿದರು. ಈ ವಿಷಯ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ಹಿನ್ನೆಲೆ ಸ್ಪಷ್ಟಪಡಿಸುತ್ತಿದ್ದೇನೆ ಎಂದು ಹೇಳಿದರು. ಪಕ್ಷದ ಕೇಂದ್ರ ನಾಯಕತ್ವವು ತಮ್ಮ ನಿರ್ಧಾರವನ್ನು ಗೌರವಿಸಿರುವುದಕ್ಕೆ ಧನ್ಯವಾದ ತಿಳಿಸಿದ ಅವರು, ಎನ್‌ಡಿಎ ಮೈತ್ರಿಯ ಅಭ್ಯರ್ಥಿಗಳ ಪರ ರಾಜ್ಯದಲ್ಲಿ ಪ್ರಚಾರ ನಡೆಸುವುದಾಗಿ ಹೇಳಿದರು.

ರಾಜ್ಯದ ಮೈತ್ರಿ ಅಭ್ಯರ್ಥಿಗಳಿಗೆ ಸಕ್ರಿಯವಾಗಿ ಬೆಂಬಲ ನೀಡುತ್ತೇನೆ ಎಂದು ಅವರು ಹೇಳಿದರು.ಇದೇ ವೇಳೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಚೆನ್ನೈಗೆ ಭೇಟಿ ನೀಡಲಿದ್ದು, ಪುದುಚೇರಿಯಲ್ಲಿ ಪ್ರಚಾರ ಮುಗಿಸಿದ ಬಳಿಕ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ, ನಂತರ ಕೊಚ್ಚಿಗೆ ತೆರಳಿ ಇನ್ನಷ್ಟು ಪ್ರಚಾರ ನಡೆಸಲಿದ್ದಾರೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ. ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಅಡಿಯಲ್ಲಿ ಬಿಜೆಪಿ ಬಿಡುಗಡೆ ಮಾಡಿದ 27 ಅಭ್ಯರ್ಥಿಗಳ ಪಟ್ಟಿಯಲ್ಲಿ ಅಣ್ಣಾಮಲೈ ಅವರ ಹೆಸರು ಇಲ್ಲದಿರುವುದು ಪ್ರಮುಖ ಚರ್ಚೆಯ ವಿಷಯವಾಗಿತ್ತು.ಹಿಂದೆ ಅವರ ಹೆಸರು ಕೊಯಂಬತ್ತೂರು ಭಾಗದ ಕ್ಷೇತ್ರಗಳೊಂದಿಗೆ ಸಂಪರ್ಕ ಹೊಂದಿತ್ತು. ಆದರೆ ಸೀಟ್ ಹಂಚಿಕೆ ಬಗ್ಗೆ, ವಿಶೇಷವಾಗಿ ಕೊಯಂಬತ್ತೂರಿನ ಪ್ರಮುಖ ಕ್ಷೇತ್ರಗಳನ್ನು ಎಐಎಡಿಎಂಕೆ ಉಳಿಸಿಕೊಂಡ ಹಿನ್ನೆಲೆಯಲ್ಲಿ ಅವರು ಅಸಮಾಧಾನಗೊಂಡಿದ್ದರು ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. 41 ವರ್ಷದ ಅಣ್ಣಾಮಲೈ ಅವರು ಸೀಟ್ ಹಂಚಿಕೆ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿ ಕೇಂದ್ರ ನಾಯಕತ್ವಕ್ಕೆ ಪತ್ರದ ಮೂಲಕ ತಿಳಿಸಿ, ಚುನಾವಣೆಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಸಿಂಗನಲ್ಲೂರು ಕ್ಷೇತ್ರವನ್ನು ಬಿಜೆಪಿಗೆ ನೀಡುವಂತೆ ಅವರು ಒತ್ತಾಯಿಸಿದ್ದರೂ, ಅದು ಈಡೇರಿಲ್ಲ ಎಂದು ತಿಳಿದುಬಂದಿದೆ.
Dailyhunt
Disclaimer: This content has not been generated, created or edited by Dailyhunt. Publisher: themangaloremirror