ಮೈಸೂರು ಜುಲೈ 04: "ನಾಡಹಬ್ಬ ಮೈಸೂರು ದಸರಾ ಮಹೋತ್ಸವವು ತನ್ನದೇ ಆದ ಸುದೀರ್ಘ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಆಚರಣೆಯ ಹಿನ್ನೆಲೆಯನ್ನು ಹೊಂದಿದೆ. ಇಂತಹ ಪವಿತ್ರ ಹಬ್ಬದಲ್ಲಿ ಪ್ರದರ್ಶನದ ಉದ್ದೇಶಕ್ಕಾಗಿ ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳವನ್ನು ಸೇರಿಸುವುದು ಸಾಂಸ್ಕೃತಿಕವಾಗಿ ಸರಿಯಲ್ಲ" ಎಂದು ಮೈಸೂರು ರಾಜವಂಶಸ್ಥ ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೇರವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸ್ವತಃ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ರೈತರಿಗೆ ಬೆಳೆ ಬೆಳೆಯಬೇಡಿ, ನೀರಿಗಾಗಿ ಒತ್ತಡ ಹಾಕಬೇಡಿ ಎಂದು ಬಹಿರಂಗವಾಗಿ ಮನವಿ ಮಾಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಕೇವಲ 2 ದಿನಗಳ ಕಾಲ ಮೈಸೂರಿನಲ್ಲಿ ಕಂಬಳ ನಡೆಸಲು ಬರೋಬ್ಬರಿ ₹8 ಕೋಟಿ ರೂಪಾಯಿ ಸಾರ್ವಜನಿಕರ ಹಣವನ್ನು ವ್ಯಯಿಸಲು ಹೊರಟಿರುವುದು ಎಷ್ಟು ಸರಿ?" ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.ರಾಜ್ಯದಲ್ಲಿ ಈ ಹಿಂದೆ ಬರಗಾಲ ಎದುರಾದಾಗ ದಸರಾವನ್ನು ಅತ್ಯಂತ ಸರಳವಾಗಿ ನಡೆಸಿದ ಹತ್ತಾರು ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಪ್ರಸ್ತುತ ಮಳೆಯಿಲ್ಲದೆ ರಾಜ್ಯದ ಜನ, ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿ ದಸರಾವನ್ನು ಸರಳವಾಗಿ ನಡೆಸಲು ತೀರ್ಮಾನಿಸಿದರೆ ರಾಜವಂಶಸ್ಥರಾಗಿ ನಮ್ಮ ಸಂಪೂರ್ಣ ಬೆಂಬಲ ಇರುತ್ತದೆ. ಅದನ್ನು ಬಿಟ್ಟು ಸಂಕಷ್ಟದ ಸಮಯದಲ್ಲಿ ದುಬಾರಿ ವೆಚ್ಚದ ಪ್ರದರ್ಶನಗಳನ್ನು ಆಯೋಜಿಸುವ ಅಗತ್ಯವಿಲ್ಲ" ಎಂದು ಯದುವೀರ್ ಒಡೆಯರ್ ಖಡಕ್ ಆಗಿ ನುಡಿದರು.

