ಹರಿಯಾಣ ಅಗಸ್ಟ್ 05: ಇಡೀ ದೇಶವನ್ನೇ ನಡುಗಿಸಿದ ಫರಿದಾಬಾದ್‌ನ 28 ವರ್ಷದ ಶಿಕ್ಷಕಿ ಸಂಧ್ಯಾ ಶರ್ಮಾ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಘಾತಕಾರಿ ಸತ್ಯಗಳನ್ನು ಹೊರಹಾಕಿದ್ದಾರೆ. ಆರೋಪಿ 21 ವರ್ಷದ ಅಮಿತ್, ಸುಮಾರು ಎರಡು ತಿಂಗಳ ಮೊದಲೇ ಈ ಕೊಲೆಗೆ ಸಂಚು ರೂಪಿಸಿ, ವಿಶೇಷವಾಗಿ ಚಾಕುವನ್ನು ಖರೀದಿಸಿ ಕೃತ್ಯ ಎಸಗಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಘಟನೆ ನಡೆದ 2 ಗಂಟೆಯಲ್ಲೇ ಕೋಟ್ ಗ್ರಾಮದ ನಿವಾಸಿ ಅಮಿತ್‌ನನ್ನು ಪೊಲೀಸರು ಬಂಧಿಸಿದ್ದು, ಕೋರ್ಟ್ ಆತನನ್ನು 3 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.ಸಂಧ್ಯಾ ಶರ್ಮಾ ಮತ್ತು ಅವರ ಪತಿ ವಿಕಿ ಗುರ್ಜರ್ ಪ್ರೇಮ ವಿವಾಹವಾಗಿದ್ದು, ಅವರಿಗೆ 7 ವರ್ಷದ ಮಗ ಹಾಗೂ 5 ವರ್ಷದ ಮಗಳಿದ್ದಾಳೆ. ಇತ್ತೀಚೆಗಷ್ಟೇ ಅಮಿತ್ ನೀಡುತ್ತಿದ್ದ ಲೈಂಗಿಕ ಕಿರುಕುಳದ ವಿರುದ್ಧ ಸಂಧ್ಯಾ ದೂರು ನೀಡಿದ್ದರು. "ಅಂದೇ ಪೊಲೀಸರು ಆತನ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೆ ಇಂದು ನನ್ನ ಹೆಂಡತಿ ಜೀವಂತವಾಗಿರುತ್ತಿದ್ದಳು" ಎಂದು ಸಂಧ್ಯಾ ಪತಿ ಕಣ್ಣೀರಿಡುತ್ತಾ ಆಕ್ರೋಶ ಹೊರಹಾಕಿದ್ದಾರೆ. ಪ್ರಸ್ತುತ ಕೊಲೆಗೆ ಬಳಸಿದ ಆಯುಧವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

